ಚೆನ್ನೈ: ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ನಿರ್ಗಮನದ ಬೆನ್ನಲ್ಲೇ ಪಕ್ಷದ ಒಳಜಗಳ ಮತ್ತು ಬಿಕ್ಕಟ್ಟು ತೀವ್ರಗೊಂಡಿದೆ.
ಈಗ ತಮಿಳುನಾಡು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕರು ನಾಗರಾಜನ್ ಮತ್ತು ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಪಕ್ಷಕ್ಕೆ ಮತ್ತೊಂದು ದೊಡ್ಡ ಆಘಾತ ನೀಡಿದ್ದಾರೆ.
ಬಿಜೆಪಿ ಬಿಟ್ಟ ಅಣ್ಣಾಮಲೈ ಅವರು ‘ಅಣ್ಣಾಮಲೈ ಮಕ್ಕಳ್ ಇಯಕ್ಕಮ್’ (AMI) ಎಂಬ ಹೊಸ ಜನಪರ ಚಳವಳಿಯನ್ನು ಘೋಷಿಸಿದ್ದು, ಭವಿಷ್ಯದಲ್ಲಿ ಇದನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಿ ಮುಂದಿನ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದಾರೆ.
ಅಣ್ಣಾಮಲೈ ಅವರ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿ ಕರು ನಾಗರಾಜನ್ ಮತ್ತು ಸುಮತಿ ವೆಂಕಟೇಶ್ ಸೇರಿದಂತೆ ಹಲವು ಪದಾಧಿಕಾರಿಗಳು ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ (AIADMK) ಜೊತೆ ಮೈತ್ರಿ ಮಾಡಿಕೊಳ್ಳುವ ಕೇಂದ್ರ ನಾಯಕರ ನಿರ್ಧಾರವನ್ನು ಅಣ್ಣಾಮಲೈ ತೀವ್ರವಾಗಿ ವಿರೋಧಿಸಿದ್ದರು.
ಈ ಮೈತ್ರಿ ರಾಜಕೀಯದ ಭಿನ್ನಾಭಿಪ್ರಾಯ ಹಾಗೂ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಅವರು ಬಿಜೆಪಿಯಿಂದ ಹೊರನಡೆದಿದ್ದಾರೆ.





Leave a comment