Home ಕ್ರೈಂ ನ್ಯೂಸ್ ಶಿಕ್ಷಕಿ ಮಾತು ಕೇಳಲಿಲ್ಲವೆಂದು 3 ವರ್ಷದ ಮಗುವನ್ನು ಶೀಟ್‌ನಲ್ಲಿ ಸುತ್ತಿ, ಕೈಗಳನ್ನು ಕಟ್ಟಿಹಾಕಿದ ಸಿಬ್ಬಂದಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಶಿಕ್ಷಕಿ ಮಾತು ಕೇಳಲಿಲ್ಲವೆಂದು 3 ವರ್ಷದ ಮಗುವನ್ನು ಶೀಟ್‌ನಲ್ಲಿ ಸುತ್ತಿ, ಕೈಗಳನ್ನು ಕಟ್ಟಿಹಾಕಿದ ಸಿಬ್ಬಂದಿ!

Share
ಶಿಕ್ಷಕಿ
Share

ತಿರುವಾರೂರು (ತಮಿಳುನಾಡು): ಶಿಕ್ಷಕಿಯ ಮಾತು ಕೇಳಲಿಲ್ಲ ಮತ್ತು ತುಂಟಾಟ ಮಾಡುತ್ತಿದ್ದ ಎಂಬ ಕಾರಣಕ್ಕೆ ಮೂರು ವರ್ಷದ ಪುಟ್ಟ ಬಾಲಕನನ್ನು ವಿನೈಲ್ ಶೀಟ್‌ನಲ್ಲಿ ಸುತ್ತಿ, ಕೈಗಳನ್ನು ಹಗ್ಗದಿಂದ ಕಟ್ಟಿಹಾಕಿ ಕ್ರೌರ್ಯ ಮೆರೆದಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಾರೂರು ಜಿಲ್ಲೆಯ ತಿರುತುರೈಪೂಂಡಿಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಘಟನೆಯ ದೃಶ್ಯಗಳು ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರೀ-ಕೆಜಿ (Pre-KG) ಓದುತ್ತಿದ್ದ ಬಾಲಕನನ್ನು ಮಹಿಳಾ ಅಟೆಂಡರ್ ಶೀಟ್‌ನಲ್ಲಿ ಸುತ್ತಿ ಕಟ್ಟಿಹಾಕಿದ್ದರಿಂದ ಮಗು ಕೆಳಗೆ ಬಿದ್ದು ಕಣ್ಣಿನ ಬಳಿ ಗಾಯವಾಗಿ ರಕ್ತಸ್ರಾವವಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬಾಲಕ ಕಟ್ಟಿಹಾಕಿದ ಕೈಗಳನ್ನು ಬಿಡಿಸಿಕೊಳ್ಳಲು ಹಗ್ಗವನ್ನು ಹಲ್ಲಿನಿಂದ ಕಚ್ಚುತ್ತಿರುವುದು ಹಾಗೂ ನೋವಿನಿಂದ ಚೀರಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ತರಗತಿಯಲ್ಲಿದ್ದ ಶಿಕ್ಷಕಿ ಮಗುವನ್ನು ರಕ್ಷಿಸದೆ ಮೂಕಪ್ರೇಕ್ಷಕರಾಗಿ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ದೂರು ದಾಖಲು: ಮಗು ಮನೆಗೆ ಬಂದಾಗ ಕಣ್ಣಿನ ಬಳಿಯ ಗಾಯವನ್ನು ಗಮನಿಸಿದ ತಂದೆ ಶಾಲೆಗೆ ತೆರಳಿ ಸಿಸಿಟಿವಿ ಪರಿಶೀಲಿಸಿದಾಗ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ. ತಂದೆಯ ದೂರಿನ ಮೇರೆಗೆ ತಿರುತುರೈಪೂಂಡಿ ಪೊಲೀಸರು ಶಿಕ್ಷಕಿ ಮತ್ತು ಮಹಿಳಾ ಅಟೆಂಡರ್ ವಿರುದ್ಧ ಕ್ರೌರ್ಯ ಹಾಗೂ ನಿರ್ಲಕ್ಷ್ಯದ ಪ್ರಕರಣ ದಾಖಲಿಸಿದ್ದಾರೆ.

ಇಬ್ಬರು ಸಿಬ್ಬಂದಿ ವಜಾ: ಘಟನೆಯ ಗಂಭೀರತೆ ಮತ್ತು ಪೋಷಕರ ಆಕ್ರೋಶದ ಹಿನ್ನೆಲೆಯಲ್ಲಿ, ಶಾಲಾ ಆಡಳಿತ ಮಂಡಳಿಯು ತಪ್ಪಿತಸ್ಥ ಶಿಕ್ಷಕಿ ಹಾಗೂ ಮಹಿಳಾ ಅಟೆಂಡರ್ ಇಬ್ಬರನ್ನೂ ತಕ್ಷಣವೇ ಕೆಲಸದಿಂದ ವಜಾಗೊಳಿಸಿದೆ.

ಪೊಲೀಸರ ಹೇಳಿಕೆ: “ಬಾಲಕ ಶಿಕ್ಷಕಿಯ ಮಾತು ಕೇಳದೆ ತುಂಟಾಟ ಮಾಡುತ್ತಿದ್ದ ಎಂಬ ಕಾರಣಕ್ಕೆ ಮಹಿಳಾ ಅಟೆಂಡರ್ ಈ ಕೃತ್ಯ ಎಸಗಿದ್ದು, ಶಿಕ್ಷಕಿ ಇದನ್ನು ತಡೆಯದೆ ಸುಮ್ಮನಿದ್ದರು. ಶೀಟ್‌ನಲ್ಲಿ ಸುತ್ತಿದ್ದರಿಂದ ಮಗು ಆಯತಪ್ಪಿ ಬಿದ್ದು ಕಣ್ಣಿನ ಬಳಿ ಗಾಯವಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Share

Recent Posts

Recent Comments

No comments to show.
Related Articles