ದಾವಣಗೆರೆ: “ರಾಜಕೀಯದಲ್ಲಿ ನಮಗೆ ಯಾವುದೇ ಹುದ್ದೆಯ ಆಸೆ ಇಲ್ಲ. ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ” ಎಂದು ಮಾಜಿ ಸಚಿವ ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎಸ್. ಮಲ್ಲಿಕಾರ್ಜುನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮಗೆ ಯಾವುದೇ ಹೈಕಮಾಂಡ್ ಮಟ್ಟದ ಹುದ್ದೆಗಳ ಮೇಲೆ ವ್ಯಾಮೋಹವಿಲ್ಲ ಎಂದು ಸ್ಪಷ್ಟಪಡಿಸಿದರು. “ನಮಗೆ ಯಾವುದೇ ರೀತಿಯಲ್ಲಿ ಅದು ಬೇಕು, ಇದು ಬೇಕು ಎಂದೇನಿಲ್ಲ. ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ನಾವು ಶ್ರಮಿಸುತ್ತೇವೆ. ನಮ್ಮದು ಮೊದಲಿನಿಂದಲೂ ಕಾಂಗ್ರೆಸ್ ಫ್ಯಾಮಿಲಿ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ದುಡಿಯುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಡಿಸಿಎಂ ಸ್ಥಾನ ನಾನೇ ಬೇಡ ಅಂದೆ!’
ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿರುವ ಉಪಮುಖ್ಯಮಂತ್ರಿ (DCM) ಸ್ಥಾನದ ಚರ್ಚೆಗಳ ಬಗ್ಗೆ ಮಾತನಾಡಿದ ಅವರು, “ಡಿಸಿಎಂ ಸ್ಥಾನ ನಾನೇ ಬೇಡ ಎಂದೆ. ಅಭಿಮಾನಿಗಳಿಗೆ ಬೇಡ ಎಂದರೂ ಅವರು ಒತ್ತಾಯ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಎಲ್ಲರಿಗೂ ಆಸೆ ಇರುವುದು ಸಹಜ. ಆದರೆ ಬಡವರಿಗೆ ಒಳ್ಳೆಯ ಕೆಲಸ ಆಗಬೇಕು, ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಮುಖ್ಯ ಅಪೇಕ್ಷೆ” ಎಂದು ಮಲ್ಲಿಕಾರ್ಜುನ್ ಈ ಸಂದರ್ಭದಲ್ಲಿ ತಿಳಿಸಿದರು.
ವಿಧಾನ ಪರಿಷತ್ ಚುನಾವಣೆ: ನಾಳೆ ಸಿಗಲಿದೆ ಉತ್ತರ
ವಿಧಾನ ಪರಿಷತ್ ಚುನಾವಣೆ ಕುರಿತು ಮಾತನಾಡಿದ ಮಲ್ಲಿಕಾರ್ಜುನ್, “ಸದ್ಯದ ಪರಿಸ್ಥಿತಿಯಲ್ಲಿ ನೆಕ್ ಟು ನೆಕ್ ಫೈಟ್ ಇದೆ. ಅವರು ನಮಗೆ ಗಾಳ ಹಾಕಿದ್ದೇವೆ ಅಂತಾರೆ, ನಮ್ಮವರು ಅವರಿಗೆ ಗಾಳ ಹಾಕಿದ್ದೇವೆ ಎನ್ನುತ್ತಾರೆ. ಇದಕ್ಕೆಲ್ಲ ನಾಳೆ ಚುನಾವಣೆ ಮುಗಿದ ಬಳಿಕವೇ ಸ್ಪಷ್ಟ ಉತ್ತರ ಸಿಗಲಿದೆ. ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ನ ಐದೂ ಅಭ್ಯರ್ಥಿಗಳು ಗೆಲ್ಲಬೇಕು. ಮುಖ್ಯಮಂತ್ರಿಗಳು, ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರು ಎಲ್ಲರೂ ಸೇರಿ ಇದಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಚುನಾವಣೆಯ ಹಿನ್ನೆಲೆಯಲ್ಲಿ ನಮಗೆಲ್ಲರಿಗೂ ಕಡ್ಡಾಯ ಹಾಜರಾತಿ ಇರಬೇಕು ಎಂಬ ಸೂಚನೆ ನೀಡಿದ್ದರು. ಸಮರ್ಥ್ ಕೂಡ ಅಲ್ಲೇ ಇದ್ದಾನೆ” ಎಂದರು.
ರಾಜ್ಯದ ಜನತೆಗೆ ಒಳ್ಳೆ ಮಳೆ-ಬೆಳೆಯಾಗಲಿ ಎಂದು ಆಶಿಸಿದ ಅವರು, ಎಲ್ಲರಿಗೂ ಸಮೃದ್ಧಿ ಸಿಗಲಿ, ಸರ್ಕಾರ ಉತ್ತಮವಾಗಿ ನಡೆಯಲಿ ಎಂದು ಹಾರೈಸಿದರು.





Leave a comment