ಮುಂಬೈ: ಮುಂಬೈನ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ದೇವಾಲಯದ ಹುಂಡಿ ಕಾಣಿಕೆಯಲ್ಲಿ ಪ್ರತಿವರ್ಷ ಸುಮಾರು 18 ಕೋಟಿ ರೂಪಾಯಿ ಹಣ ದುರುಪಯೋಗ ಮತ್ತು ಕಳವಾಗುತ್ತಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಅಧ್ಯಕ್ಷ ರಾಜ್ ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ.
ಎಂಎನ್‌ಎಸ್ ವಿದ್ಯಾರ್ಥಿ ಘಟಕದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮತ್ತು ಅಕ್ರಮಗಳು ಈಗ ಪವಿತ್ರ ಧಾರ್ಮಿಕ ಕ್ಷೇತ್ರಗಳಿಗೂ ಹರಡಿದ್ದು, ಸಂಕಷ್ಟದಲ್ಲಿದ್ದಾಗ ದೇವಾಲಯಗಳಿಗೆ ತೆರಳುವ ಯುವಜನತೆಗೆ ಅಲ್ಲೂ ಭ್ರಷ್ಟಾಚಾರವೇ ಎದುರಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ ಠಾಕ್ರೆ ಹೇಳಿದ್ದೇನು?
ಟ್ರಸ್ಟಿಗಳ ಪತ್ರ ಉಲ್ಲೇಖ: ಸಿದ್ಧಿ ವಿನಾಯಕ ದೇವಾಲಯದ ಎಂಟು ಜನ ಟ್ರಸ್ಟಿಗಳು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ ಅವರು, ದೇವಾಲಯದ ಆಂತರಿಕ ಸಿಬ್ಬಂದಿಯೇ ಹುಂಡಿ ಹಣವನ್ನು ಕದಿಯುತ್ತಿದ್ದಾರೆ ಎಂದು ಆರೋಪಿಸಿದರು.
ಆದಾಯದಲ್ಲಿ ದಿಢೀರ್ ಏರಿಕೆ: ಕಳ್ಳತನದಲ್ಲಿ ತೊಡಗಿದ್ದ ಸಿಬ್ಬಂದಿಯನ್ನು ಹಿಡಿಯುವ ಮೊದಲು ದೇವಾಲಯದ ವಾರಾಂತರ ಕಾಣಿಕೆ ಸಂಗ್ರಹ 50 ಲಕ್ಷ ರೂ.ಗಿಂತ ಕಡಿಮೆಯಿತ್ತು. ಆದರೆ ಕಳ್ಳರನ್ನು ಪತ್ತೆ ಹಚ್ಚಿದ ನಂತರ ವಾರಕ್ಕೆ ಸರಾಸರಿ 1.5 ಕೋಟಿ ರೂ. ಕಾಣಿಕೆ ಹರಿದುಬರುತ್ತಿದೆ. ಅಂದರೆ ವಾರಕ್ಕೆ 1 ಕೋಟಿ ರೂ. ಹಾಗೂ ವರ್ಷಕ್ಕೆ ಸುಮಾರು 18 ಕೋಟಿ ರೂ. ಹಣ ದೋಚಲಾಗುತ್ತಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ದೇವಾಲಯದ ಟ್ರಸ್ಟ್‌ನ ಸ್ಪಷ್ಟನೆ
ರಾಜ್ ಠಾಕ್ರೆ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿದ್ಧಿ ವಿನಾಯಕ ದೇವಾಲಯ ಟ್ರಸ್ಟ್ ಅಧ್ಯಕ್ಷ ಸದಾ ಸರ್ವಂಕರ್ ಹುಂಡಿ ಹಣ ಕಳವು ಮಾಡುತ್ತಿದ್ದ 9 ಜನ ಸಿಬ್ಬಂದಿಯನ್ನು ಈಗಾಗಲೇ ಅಮಾನತುಗೊಳಿಸಿ, ಪೋಲಿಸ್ ದೂರು ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಟ್ರಸ್ಟ್ ಕೈಗೊಂಡ ಕಠಿಣ ಸಿಸಿಟಿವಿ ಕಾವಲು ಹಾಗೂ ಆಂತರಿಕ ತನಿಖೆಯ ಕ್ರಮಗಳಿಂದಾಗಿ ದೇವಾಲಯದ ವಾರ್ಷಿಕ ಆದಾಯವು 114 ಕೋಟಿ ರೂ.ನಿಂದ 182 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.






Leave a comment