SUDDIKSHANA KANNADA NEWS/ DAVANAGERE/ DATE:15-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಎಸ್. ಎ. ರವೀಂದ್ರನಾಥ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶಿರಮಗೊಂಡನಹಳ್ಳಿಯ ತನ್ನ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೇಸಿಗೆಯಲ್ಲಿ ಎಡವಿದ ಕಲ್ಲು ಮಳೆಗಾಲಕ್ಕೆ ಕಿತ್ತು ಹಾಕಬೇಕು ಎಂಬ ಮಾತು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ಈ ಮೂಲಕ ಬಂಡಾಯದ ರಣಕಹಳೆ ಮೊಳಗಿಸಿದರು.
ಗಾಯತ್ರಿ ಸಿದ್ದೇಶ್ವರ್ ಗೆ ಬಿಜೆಪಿ ಟಿಕೆಟ್ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದ ಭಿನ್ನಮತೀಯರ ಸಭೆಯ ಬಳಿಕ ಮಾತನಾಡಿದ ಎಸ್. ಎ. ರವೀಂದ್ರನಾಥ್ ಅವರು, ಸಿದ್ದೇಶ್ವರ ವಿರುದ್ಧ ಸಿಡಿದೆದ್ದಿದ್ದಾರೆ. ಟಿಕೆಟ್ ಬದಲಾಯಿಸಲೇಬೇಕು ಎಂಬ ಪಟ್ಟು ಹಾಕಿದ್ದಾರೆ.
ಡಾ. ಜಿ. ಎಂ. ಸಿದ್ದೇಶ್ವರ ಹಾಗೂ ಎಸ್. ಎ. ರವೀಂದ್ರನಾಥ್ ಅವರು ದಾವಣಗೆರೆ ಜಿಲ್ಲೆ ಬಿಜೆಪಿಯ ಜೋಡೆತ್ತುಗಳು ಎಂದು ಕರೆಯಲಾಗಿತ್ತು. ಜೋಡೆತ್ತಿನ ರೀತಿ ಇದ್ದ ಸ್ನೇಹಿತರು ಈಗ ಕಾದಾಡುವಂತಾಗಿದೆ. ಟಿಕೆಟ್ ಘೋಷಣೆ ಬಳಿಕವಂತೂ ರವೀಂದ್ರನಾಥ್ ಕೆರಳಿ ಕೆಂಡವಾಗಿದ್ದಾರೆ.
ಟಿಕೆಟ್ ವಿಚಾರವಾಗಿ ಉಂಟಾದ ವೈಮನಸ್ಸು ಈಗ ದಿನಕಳೆದಂತೆ ಕಾವೇರತೊಡಗಿದೆ. ಮಾಜಿ ಸಚಿವ ರೇಣುಕಾಚಾರ್ಯ ಟೀಂ ಜೊತೆ ಹೋರಾಟಕ್ಕಿಳಿದ ಎಸ್ ಎ ರವೀಂದ್ರನಾಥ್ ಅವರು, ಯಾವಾಗಲೂ ನೇರವಾಗಿ ಮಾತನಾಡುತ್ತಾರೆ. ಈ ಬಾರಿ ಸಿದ್ದೇಶ್ವರ ಅವರಿಗೆ ಟಿಕೆಟ್ ತಪ್ಪಿಸಲು ಯತ್ನಿಸುವಲ್ಲಿ ಯಶಸ್ವಿಯಾದರೂ ಹೈಕಮಾಂಡ್ ಸಿದ್ದೇಶ್ವರ ಅವರ ಪತ್ನಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ವರಿಷ್ಠರ ಗಮನಕ್ಕೆ ತಂದು ಬದಲಾವಣೆ ಮಾಡೋಕೆ ಪ್ರಯತ್ನ ಪಡುತ್ತೇವೆ. ಈ ವಿಚಾರದಲ್ಲಿ ಹೋರಾಟ ನಿರಂತರ. ಅವರು ಯಾರ ಮಾತು ಕೇಳಲ್ಲ, ದುಡ್ಡಿನ ಮಾತು ಒಂದೇ ಕೇಳೋದು ಎಂದು ಸಿದ್ದೇಶ್ವರ ವಿರುದ್ಧ ಹರಿಹಾಯ್ದರು.
ಬೇಸಿಗೆಯಲ್ಲಿ ಎಡವಿದ ಕಲ್ಲು ಮಳೆಗಾಲದಲ್ಲಿ ಕಿತ್ತು ಹಾಕಬೇಕು. ಕಲ್ಲು ಕಿತ್ತಾಕುವ ಜವಾಬ್ದಾರಿ ನಮ್ಮ ಮೇಲಿದೆ. ಶೀಘ್ರ ಬದಲಾವಣೆ ಮಾಡಬೇಕು ಎಂಬುದು ನಮ್ಮ ಹೋರಾಟ. ಆ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಕೊಡಲಿ. ಶಿವಮೊಗ್ಗಕ್ಕೆ ನರೇಂದ್ರ ಮೋದಿಯವರು ಬರುತ್ತಿದ್ದು ಅವರ ಗಮನಕ್ಕೆ ತರುತ್ತೇವೆ. ಬದಲಾವಣೆ ಮಾಡದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.