ಝುಂಝುನು: ಕಾಲೇಜು ವಿದ್ಯಾರ್ಥಿನಿಯೊಬ್ಬಳ ಜೊತೆ ನಿಯಮಬಾಹಿರವಾಗಿ ನಡೆದುಕೊಂಡು ದುರ್ವರ್ತನೆ ತೋರಿದ ಆರೋಪದ ಮೇಲೆ, ತೀವ್ರ ಸ್ವರೂಪದ ವಿದ್ಯಾರ್ಥಿ ಪ್ರತಿಭಟನೆ ಎದುರಿಸಿದ ರಾಜಸ್ಥಾನದ ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲ್ ಕೊನೆಗೂ ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ.
ರಾಜಸ್ಥಾನದ ಝುಂಝುನು ಜಿಲ್ಲೆಯ ಪ್ರಸಿದ್ಧ ಸೇಥ್ ನೇತ್ರಾಮ್ ಮಘರಾಜ್ ತೈಬ್ರೇವಾಲಾ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನ ಪ್ರಿನ್ಸಿಪಾಲ್ ಮನೋಜ್ ಕುಮಾರ್ ಕುಲ್ಹಾರ್, ಬೆಂಚ್ ಮೇಲೆ ಕುಳಿತಿದ್ದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳ ಹಿಂಭಾಗದಿಂದ ಕೂದಲು ಹಿಡಿದು ಎಳೆದು, ಅಸಭ್ಯ ಭಾಷೆ ಬಳಸಿ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಆವರಣ ಬಂದ್ ಮಾಡಿ ತೀವ್ರ ಪ್ರತಿಭಟನೆ
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆನ್ನಲ್ಲೇ, ಸುಮಾರು 2,000 ವಿದ್ಯಾರ್ಥಿನಿಯರನ್ನು ಹೊಂದಿರುವ ಈ ಕಾಲೇಜಿನ ಆವರಣದಲ್ಲಿ ಆಕ್ರೋಶ ಭುಗಿಲೆದ್ದಿದೆ. ಭಾರತೀಯ ವಿದ್ಯಾರ್ಥಿ ಫೆಡರೇಶನ್ (SFI) ಜಿಲ್ಲಾ ಕಾರ್ಯದರ್ಶಿ ಪ್ರಿಯಾ ಮಿಥಾರ್ವಾಲ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿನಿಯರು ಕಾಲೇಜಿನ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಧರಣಿ ನಡೆಸಿದರು. ಪ್ರಿನ್ಸಿಪಾಲ್ ತಕ್ಷಣವೇ ಕ್ಷಮಾಪಣೆ ಕೇಳಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಲಿಖಿತ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು.
“ಯಾವುದೇ ವಿದ್ಯಾರ್ಥಿನಿ ನಿಯಮ ಮೀರಿದ್ದರೆ ಕಾಲೇಜು ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಬಹುದಿತ್ತು. ಅದನ್ನು ಬಿಟ್ಟು ವಿದ್ಯಾರ್ಥಿನಿಯ ಮೈ ಮುಟ್ಟುವುದು ಅಥವಾ ಕೂದಲು ಎಳೆಯುವುದು ಸಂಪೂರ್ಣ ಅಸಮ್ಮತ” ಎಂದು ಪ್ರಿಯಾ ಮಿಥಾರ್ವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಿನ್ಸಿಪಾಲ್ ಕ್ಷಮಾಪಣೆ ಹಾಗೂ ಪೊಲೀಸರ ವಿವರಣೆ
ಆರಂಭದಲ್ಲಿ ಪ್ರತಿಭಟನೆಯನ್ನು ಪ್ರಶ್ನಿಸಿದ್ದ ಪ್ರಿನ್ಸಿಪಾಲ್ ಮನೋಜ್ ಕುಮಾರ್, ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ನೋಟ್‌ಬುಕ್ ಹಾಳೆಯ ಮೇಲೆ ಹಿಂದಿಯಲ್ಲಿ, “ನಾನು, ಮನೋಜ್ ಕುಮಾರ್, ವಿದ್ಯಾರ್ಥಿನಿಯ ಬಳಿ ಕ್ಷಮೆಯಾಚಿಸುತ್ತೇನೆ” ಎಂದು ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಜೊತೆಗೆ ಮೌಖಿಕವಾಗಿಯೂ ಭರವಸೆ ನೀಡಿದ್ದಾರೆ.
ಆದರೆ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶೌರ್ಯ ಬುರಿ ಈ ಆರೋಪಗಳನ್ನು ನಿರಾಕರಿಸಿದ್ದು, “ಪ್ರಿನ್ಸಿಪಾಲ್ ಒಬ್ಬ ಪೋಷಕರ ಸ್ಥಾನದಲ್ಲಿ ವಿದ್ಯಾರ್ಥಿನಿಯನ್ನು ಸ್ಪರ್ಶಿಸಿದ್ದಾರೆಯೇ ಹೊರತು ಯಾವುದೇ ದುರ್ವರ್ತನೆ ಎಸಗಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ. ಘಟನೆಯ ಸಂಬಂಧ ಪೊಲೀಸರು ಮಧ್ಯಪ್ರವೇಶಿಸಿದ್ದು, ಪ್ರಿನ್ಸಿಪಾಲ್ ಕ್ಷಮಾಪಣೆ ಬಳಿಕ ಕಾಲೇಜಿನಲ್ಲಿ ಪರಿಸ್ಥಿತಿ ಶಾಂತವಾಗಿದೆ ಹಾಗೂ ಆಡಳಿತಾತ್ಮಕ ಮಟ್ಟದಲ್ಲಿ ತನಿಖೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.





Leave a comment