ಕೇರಳ: ಕಣ್ಣೂರಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ವೈದ್ಯ ವಧುವೊಬ್ಬರು ತಮ್ಮ ಮದುವೆಯ ಸಂಭ್ರಮವನ್ನು ಬದಿಗೊತ್ತಿ, ಅಸ್ವಸ್ಥಗೊಂಡ ಇಬ್ಬರು ಕೇಟರಿಂಗ್ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಘಟನೆಯ ಹಿನ್ನೆಲೆ: ಕಣ್ಣೂರು ಮೂಲದ ತುರ್ತು ಚಿಕಿತ್ಸಾ ವಿಭಾಗದ (Emergency Medicine) ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಡಾ. ಶಿರಿನ್ ಸುಬೈರ್ ಹಾಗೂ ಡಾ. ರಿಜಾಜ್ ಅವರ ವಿವಾಹ ಸಮಾರಂಭ ನಡೆಯುತ್ತಿದ್ದಾಗ ಕೇಟರಿಂಗ್ ತಂಡದ ಇಬ್ಬರು ಮಹಿಳೆಯರು ಅಸ್ವಸ್ಥಗೊಂಡರು. ಒಬ್ಬರಿಗೆ ಮೂಗಿನಿಂದ ತೀವ್ರ ರಕ್ತಸ್ರಾವ ಹಾಗೂ ಮತ್ತೊಬ್ಬರಿಗೆ ತಲೆಸುತ್ತು ಕಾಣಿಸಿಕೊಂಡಿತ್ತು.
ಸಮಯಪ್ರಜ್ಞೆ ಹಾಗೂ ಚಿಕಿತ್ಸೆ: ವಧುವಿನ ಅಲಂಕಾರದಲ್ಲಿದ್ದ ಡಾ. ಶಿರಿನ್ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಮೂಗಿನ ರಕ್ತಸ್ರಾವವಾದ ಮಹಿಳೆಗೆ ಮುಂದೆ ಬಾಗಿ ಮೂಗನ್ನು ಬಿಗಿಯಾಗಿ ಹಿಡಿದುಕೊಳ್ಳಲು ಮತ್ತು ತಲೆಸುತ್ತು ಬಂದ ಮಹಿಳೆಗೆ ಕಾಲುಗಳನ್ನು ಎತ್ತರದಲ್ಲಿಟ್ಟು ಮಲಗಲು ಸೂಕ್ತ ಪ್ರಥಮ ಚಿಕಿತ್ಸೆಯ ಮಾರ್ಗದರ್ಶನ ನೀಡಿದರು.
ವೈದ್ಯೆಯ ಪ್ರತಿಕ್ರಿಯೆ: ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ರಸ್ತೆಯಲ್ಲಿ ಯಾರಾದರೂ ಕುಸಿದುಬಿದ್ದಾಗ ಸಹಾಯ ಮಾಡುವುದು ನಮಗೆ ಸಹಜ ಪ್ರವೃತ್ತಿ. ಒಬ್ಬ ವೈದ್ಯೆಯಾಗಿ ತುರ್ತು ಸಂದರ್ಭದಲ್ಲಿ ಸ್ಪಂದಿಸುವುದು ನನ್ನ ಕರ್ತವ್ಯ ಅಷ್ಟೇ” ಎಂದು ಡಾ. ಶಿರಿನ್ ಹೇಳಿದ್ದಾರೆ.





Leave a comment