Home ದಾವಣಗೆರೆ ಕರ್ನಾಟಕದಲ್ಲಿ ‘ಹಾಫ್ ಹೆಲ್ಮೆಟ್’ ನಿಷೇಧಕ್ಕೆ ಸರ್ಕಾರದ ನಿರ್ಧಾರ: ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬೀಳುತ್ತೆ ಭಾರೀ ದಂಡ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಕರ್ನಾಟಕದಲ್ಲಿ ‘ಹಾಫ್ ಹೆಲ್ಮೆಟ್’ ನಿಷೇಧಕ್ಕೆ ಸರ್ಕಾರದ ನಿರ್ಧಾರ: ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬೀಳುತ್ತೆ ಭಾರೀ ದಂಡ!

Share
ಹಾಫ್ ಹೆಲ್ಮೆಟ್
Share

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಹಾಗೂ ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯಲು ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮಗಳಿಗೆ ಮುಂದಾಗಿದೆ. ದ್ವಿಚಕ್ರ ವಾಹನ ಸವಾರರು ಹೆಚ್ಚಾಗಿ ಬಳಸುವ ‘ಹಾಫ್ ಹೆಲ್ಮೆಟ್’ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. ಫುಟ್‌ಪಾತ್‌ಗಳ ಮೇಲೆ ಬೈಕ್ ಚಲಾಯಿಸುವ ಸವಾರರಿಗೆ ಭಾರೀ ದಂಡ ವಿಧಿಸಲಿದೆ. 

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್, “ರಾಜ್ಯದಲ್ಲಿ ಹಾಫ್ ಹೆಲ್ಮೆಟ್ ಬಳಸುವ ಸವಾರರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಇಂತಹ ಹೆಲ್ಮೆಟ್‌ಗಳಿಗೆ ಮೋಟಾರು ವಾಹನ ಕಾಯ್ದೆಯಡಿ ಯಾವುದೇ ಕಾನೂನು ಮಾನ್ಯತೆ ಇಲ್ಲ. ಹೀಗಾಗಿ ಹಾಫ್ ಹೆಲ್ಮೆಟ್ ತಯಾರಕರು, ಮಾರಾಟಗಾರರು ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಸಾರಿಗೆ ಹಾಗೂ ಗೃಹ ಇಲಾಖೆ ಪರಿಶೀಲಿಸುತ್ತಿದೆ. ಮಾತ್ರವಲ್ಲ, ಇನ್ಮುಂದೆ ಹಾಫ್ ಹೆಲ್ಮೆಟ್ ಧರಿಸುವಂತಿಲ್ಲ” ಎಂದು ತಿಳಿಸಿದರು.

ಸುರಕ್ಷತೆಯ ಕೊರತೆ:

ಸಾಮಾನ್ಯವಾಗಿ ಕಡಿಮೆ ಬೆಲೆಗೆ ಸಿಗುವ ಹಾಫ್ ಹೆಲ್ಮೆಟ್‌ಗಳು ತಲೆಯ ಮೇಲ್ಭಾಗವನ್ನು ಮಾತ್ರ ಮುಚ್ಚುತ್ತವೆ. ಅಪಘಾತ ಸಂಭವಿಸಿದಾಗ ಸವಾರನ ಮುಖ, ಗಲ್ಲ, ಕಿವಿ ಮತ್ತು ಕುತ್ತಿಗೆ ಭಾಗಗಳಿಗೆ ಯಾವುದೇ ರಕ್ಷಣೆ ಸಿಗುವುದಿಲ್ಲ. ಬಿಐಎಸ್ ಅಥವಾ ಐಎಸ್‌ಐ ಮಾನದಂಡ ಹೊಂದಿಲ್ಲದ ಇಂತಹ ಹೆಲ್ಮೆಟ್‌ಗಳು ಅಪಘಾತದ ವೇಳೆ ಪ್ರಾಣಾಪಾಯವನ್ನು ಹೆಚ್ಚಿಸುತ್ತವೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ಫುಟ್‌ಪಾತ್ ರೈಡಿಂಗ್ ಹಾಗೂ ಒನ್‌ವೇ ಉಲ್ಲಂಘನೆಗೆ ಭಾರಿ ದಂಡ:

ಕಾಲ್ನಡಿಗೆ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಚಾರ ದಂಡದ ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ:

ಫುಟ್‌ಪಾತ್ ಚಾಲನೆ: ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ವಾಹನ ಚಲಾಯಿಸಿದರೆ ಪ್ರಸ್ತುತ ಇರುವ ₹500 ದಂಡವನ್ನು ಮೊದಲ ಬಾರಿಯ ಅಪರಾಧಕ್ಕೆ ₹5,000 ಕ್ಕೆ ಹೆಚ್ಚಿಸಲು ಮತ್ತು ಎರಡನೇ ಬಾರಿಯ ಅಪರಾಧಕ್ಕೆ ₹10,000 ದಂಡ ವಿಧಿಸಲು ಪ್ರಸ್ತಾಪಿಸಲಾಗಿದೆ.

ಒನ್‌ವೇ ನಿಯಮ ಉಲ್ಲಂಘನೆ: ಒನ್‌ವೇ (One-Way) ರಸ್ತೆಗಳಲ್ಲಿ ವಿರುದ್ಧ ದಿಸೆಯಲ್ಲಿ ವಾಹನ ಚಲಾಯಿಸುವವರಿಗೆ ದಂಡದ ಪ್ರಮಾಣವನ್ನು 10 ಪಟ್ಟು (₹10,000) ಹೆಚ್ಚಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಸಾರಿಗೆ ಮತ್ತು ಗೃಹ ಇಲಾಖೆಯು ಈಗಾಗಲೇ ಪ್ರಸ್ತಾಪವನ್ನು ಸಲ್ಲಿಸಿದ್ದು, ಕಾನೂನು ಇಲಾಖೆಯ ಸ್ಪಷ್ಟ ಅಭಿಪ್ರಾಯ ಮತ್ತು ಸಂಪುಟದ ಅನುಮೋದನೆ ದೊರೆತ ತಕ್ಷಣ ಹೊಸ ನಿಯಮ ಹಾಗೂ ಪರಿಷ್ಕೃತ ದಂಡ ಜಾರಿಗೆ ಬರಲಿದೆ.
Share

Leave a comment

Leave a Reply

Your email address will not be published. Required fields are marked *

Related Articles