Home ಕ್ರೈಂ ನ್ಯೂಸ್ ಮದುವೆಗೂ ಮುನ್ನವೇ ಭಾವಿ ಪತಿಗೆ ಯಮಲೋಕ ತೋರಿಸಿದ ಪ್ರೀತಿ ನಾಟಕವಾಡಿ ಕಿರಾತಕಿ: ಪ್ರೇಯಸಿ, ಅವಳ ಪ್ರೇಮಿ 7 ದಿನ ಪೊಲೀಸ್ ಕಸ್ಟಡಿಗೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮದುವೆಗೂ ಮುನ್ನವೇ ಭಾವಿ ಪತಿಗೆ ಯಮಲೋಕ ತೋರಿಸಿದ ಪ್ರೀತಿ ನಾಟಕವಾಡಿ ಕಿರಾತಕಿ: ಪ್ರೇಯಸಿ, ಅವಳ ಪ್ರೇಮಿ 7 ದಿನ ಪೊಲೀಸ್ ಕಸ್ಟಡಿಗೆ!

Share
ಮದುವೆ
Share

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಲೋಹಗಢ ಕೋಟೆಯಲ್ಲಿ ಜೂನ್ 18 ರಂದು ನಡೆದಿದ್ದ ಉದ್ಯಮಿ ಕೇತನ್ ಅಗರ್ವಾಲ್ ಸಾವು ಪ್ರಕರಣ ಇದೀಗ ಭೀಕರ ಕೊಲೆ ಎಂಬುದು ಸಾಬೀತಾಗಿದ್ದು, ಈ ಸಂಬಂಧ ಮೃತನ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಪುಣೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗಳನ್ನು ಜೂನ್ 29 ರವರೆಗೆ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಅಪಘಾತವೆಂದು ನಂಬಿಸಲು ಯತ್ನಿಸಿದ್ದ ಚತುರೆ:

ಜೂನ್ 18 ರಂದು ಟ್ರೆಕ್ಕಿಂಗ್‌ಗೆ ಹೋದಾಗ ಕೇತನ್ ಕಾಲು ಜಾರಿ ಕಂದಕಕ್ಕೆ ಬಿದ್ದಿದ್ದಾನೆ ಎಂದು ಸಿಯಾ ಗೋಯಲ್ ಪೊಲೀಸರಿಗೆ ಕಥೆ ಕಟ್ಟಿದ್ದಳು. ಆದರೆ, ಅಂತ್ಯಕ್ರಿಯೆ ಮುಗಿದ 4 ದಿನಗಳ ನಂತರ ಕೇತನ್ ಮನೆಗೆ ಬಂದ ಸಿಯಾ ವರ್ತನೆ ಮತ್ತು ಆಕೆಯ ಉತ್ತರಗಳು ಮೃತನ ಸಹೋದರಿಗೆ ಸಂಶಯ ಮೂಡಿಸಿದವು. ಅನುಭವಿ ಟ್ರೆಕ್ಕರ್ ಆಗಿದ್ದ ಕೇತನ್ ಅಷ್ಟು ಸುಲಭವಾಗಿ ಬೀಳಲು ಸಾಧ್ಯವಿಲ್ಲ ಎಂದು ಕುಟುಂಬಸ್ಥರು ದೂರು ನೀಡಿದಾಗ ತನಿಖೆ ತೀವ್ರಗೊಂಡಿತು. ಮದುವೆಗೆ ಒಪ್ಪಿ ಕೊಲೆ ಮಾಡಿದ್ದು ಎರಡೂ ಕುಟುಂಬಗಳಿಗೆ ಆಘಾತ ತಂದಿದೆ.

2,004 ಕರೆಗಳು ಮತ್ತು ತಾಂತ್ರಿಕ ಸಾಕ್ಷ್ಯ:

ಪೊಲೀಸ್ ತನಿಖೆಯಲ್ಲಿ ಸಿಯಾ ಮತ್ತು ಚೇತನ್ ನಡುವೆ ಕಳೆದ 6 ತಿಂಗಳಲ್ಲಿ ಬರೋಬ್ಬರಿ 2,004 ಫೋನ್ ಕರೆಗಳು (238 ಗಂಟೆಗಳ ಸಂಭಾಷಣೆ) ನಡೆದಿರುವುದು ಬೆಳಕಿಗೆ ಬಂದಿದೆ. ಕೊಲೆ ನಡೆದ ದಿನ ಆರೋಪಿ ಚೇತನ್ ತನ್ನ ಲೊಕೇಶನ್ ಪತ್ತೆಯಾಗಬಾರದು ಎಂದು ಮೊಬೈಲ್ ಇಂಟರ್ನೆಟ್ ಆಫ್ ಮಾಡಿ, ಅಂಗಡಿಯಲ್ಲೇ ಫೋನ್ ಬಿಟ್ಟು, ತನ್ನ ಉದ್ಯೋಗಿಯ ಫೋನ್ ತೆಗೆದುಕೊಂಡು ಕೋಟೆಗೆ ಬಂದಿದ್ದ ತಾಂತ್ರಿಕ ಸಾಕ್ಷ್ಯ ಲಭ್ಯವಾಗಿದೆ.

ಮೂರನೇ ಪ್ರಯತ್ನದಲ್ಲಿ ಯಶಸ್ವಿ:

ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಈ ಮುನ್ನವೂ ಕೇತನ್ ಕೊಲೆಗೆ ಎರಡು ಬಾರಿ ಯತ್ನ ನಡೆದಿತ್ತು ಎನ್ನಲಾಗಿದೆ. ಮೇ 31 ರಂದು ಮೊದಲ ಸ್ಕೆಚ್ ಹಾಕಲಾಗಿತ್ತು. ನಂತರ ಜೂನ್ 14 ರಂದು ಕೋಟೆಯ ಬಳಿ ಹಾವು ಬಂದಿದೆ ಎಂದು ಗಾಬರಿ ಹುಟ್ಟಿಸಿ ಕಣಿವೆಗೆ ತಳ್ಳಲು ಯತ್ನಿಸಿದಾಗ ಕೇತನ್ ಪಾರಾಗಿದ್ದ. ಕೊನೆಗೆ ಜೂನ್ 18 ರಂದು ಸಿಯಾ ತನ್ನ ಪ್ರಿಯಕರ ಚೇತನ್‌ನನ್ನು ಕೋಟೆಗೆ ಕರೆಸಿಕೊಂಡು, ಕೇತನ್‌ನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿ ಮುಗಿಸಿದ್ದಾರೆ. ಉದಯಪುರದಲ್ಲಿ ಅದ್ಧೂರಿ ಮದುವೆಗೆ ಸಿದ್ಧತೆ ನಡೆಸಿದ್ದ ಕುಟುಂಬಕ್ಕೆ ಈಗ ಆಘಾತ ಎದುರಾಗಿದೆ.

Share

Leave a comment

Leave a Reply

Your email address will not be published. Required fields are marked *