Home ದಾವಣಗೆರೆ ಜೆನ್ ಜಿ ಮಕ್ಕಳನ್ನು ಕೆಲವರು ದಾರಿ ತಪ್ಪಿಸಿದರು: ನೀಟ್ ಪ್ರತಿಭಟನೆ ಹಾಗೂ ರಾಜೀನಾಮೆ ಬಗ್ಗೆ ಧರ್ಮೇಂದ್ರ ಪ್ರಧಾನ್ ಮಹತ್ವದ ಹೇಳಿಕೆ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಜೆನ್ ಜಿ ಮಕ್ಕಳನ್ನು ಕೆಲವರು ದಾರಿ ತಪ್ಪಿಸಿದರು: ನೀಟ್ ಪ್ರತಿಭಟನೆ ಹಾಗೂ ರಾಜೀನಾಮೆ ಬಗ್ಗೆ ಧರ್ಮೇಂದ್ರ ಪ್ರಧಾನ್ ಮಹತ್ವದ ಹೇಳಿಕೆ!

Share
ಧರ್ಮೇಂದ್ರ ಪ್ರಧಾನ್
Share

ಭುವನೇಶ್ವರ: ನೀಟ್ (NEET) ಪ್ರಶ್ನೆ ಪತ್ರಿಕೆ ಚೋರಿ ಪ್ರಕರಣ ಹಾಗೂ ತದನಂತರ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸನ್ನಿವೇಶದಲ್ಲಿ ‘ಜೆನ್ ಜಿ’ (Gen Z) ಯುವಕರನ್ನು ಕೆಲವರು ದಾರಿ ತಪ್ಪಿಸಲು ಯತ್ನಿಸಿದ್ದಾರೆ ಎಂದು ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ. ಜುಲೈ 25 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ಭುವನೇಶ್ವರದ ಜಿಎಂ ವಿಶ್ವವಿದ್ಯಾಲಯ ಹಾಗೂ ರೈರಾಖೋಲ್‌ನಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ತಮಗೆ ಎಂದಿಗೂ ಪ್ರಮುಖವಾಗಿರಲಿಲ್ಲ ಎಂದಿದ್ದಾರೆ.

ಪ್ರಧಾನಿ ಮೋದಿಯವರಿಗೆ ಸ್ವತಃ ರಾಜೀನಾಮೆ ಆಫರ್ ನೀಡಿದ್ದೆ:

ಸಚಿವರಾಗಿ ಸೇವೆ ಸಲ್ಲಿಸುವುದು ತಮ್ಮ ವೈಯಕ್ತಿಕ ಪ್ರತಿಷ್ಠೆಯ ವಿಷಯವಾಗಿರಲಿಲ್ಲ. “ದೇಶದಲ್ಲಿ ಪ್ರತಿ ವರ್ಷ ಸುಮಾರು ಎರಡು ಕೋಟಿ ಮಕ್ಕಳು ಜನ್ಮತಾಳುತ್ತಾರೆ. ಈ ಯುವಜನರೇ ಭಾರತವನ್ನು ‘ವಿಶ್ವಗುರು’ ಮಾಡುವ ಶಕ್ತಿ ಹೊಂದಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಸ್ವಯಂಪ್ರೇರಿತನಾಗಿ ನಾನೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಲು ಮುಂದಾಗಿದ್ದೆ” ಎಂದು ಪ್ರಧಾನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ನವೀನ್ ಪಟ್ನಾಯಕ್ ಹಾಗೂ BJD ಗೆ ತಿರುಗೇಟು:

ತಮ್ಮ ಭೇಟಿಯ ವೇಳೆ ‘ಧರ್ಮೇಂದ್ರ ಪ್ರಧಾನ್ ಗೋ ಬ್ಯಾಕ್’ ಎಂಬ ಬಿಜೆಡಿ (BJD) ಕಾರ್ಯಕರ್ತರ ಘೋಷಣೆಗಳಿಗೆ ಪ್ರತಿಕ್ರಿಯಿಸಿದ ಅವರು, “ನಾನು ರೈತನ ಮಗ. ನೀವು ಎಷ್ಟೇ ಬಾರಿ ಗೋ ಬ್ಯಾಕ್ ಎಂದರೂ ನಾನು ಮತ್ತೆ ಬರುತ್ತೇನೆ. ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರು ನನ್ನನ್ನು ಒಡಿಶಾಗೆ ಕಳಂಕ ಎಂದು ಕರೆಯುತ್ತಿದ್ದಾರೆ. ಆದರೆ ನನ್ನ ಜೀವಮಾನದಲ್ಲಿ ಒಡಿಶಾದ ಜನತೆಗೆ ಕಳಂಕ ತರುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ” ಎಂದು ಪ್ರತ್ಯುತ್ತರ ನೀಡಿದರು.

ಬಿಜೆಡಿ ಗಂಭೀರ ಆರೋಪ:

ಇನ್ನೊಂದೆಡೆ ಧರ್ಮೇಂದ್ರ ಪ್ರಧಾನ್ ಹೇಳಿಕೆಗೆ ಸಖತ್ ತಿರುಗೇಟು ನೀಡಿರುವ ಬಿಜೆಡಿ ಮುಖಂಡ ರೋಹಿತ್ ಪೂಜಾರಿ, “ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗಿಸಿರುವುದು ಪ್ರಧಾನ್ ಅವರ ಸರ್ಕಾರದ ವೈಫಲ್ಯ. ಲಕ್ಷಾಂತರ ನೀಟ್ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿ, ಸ್ವತಃ ತಾವೇ ಕಳಂಕ ತಂದುಕೊಂಡಿದ್ದಾರೆ. ಇದಕ್ಕೆ ನವೀನ್ ಪಟ್ನಾಯಕ್ ಅವರನ್ನು ಹೊಣೆ ಮಾಡುವುದು ಸರಿಯಲ್ಲ” ಎಂದು ಕಿಡಿಕಾರಿದ್ದಾರೆ.

ಸ್ಥಳೀಯವಾಗಿ ಪ್ರತಿಭಟನೆ ತೀವ್ರಗೊಳ್ಳುವ ಮುನ್ನೆಚ್ಚರಿಕೆಯಾಗಿ ಸಂಬಲ್‌ಪುರ ಪೊಲೀಸರು ಸುಮಾರು 30 ಬಿಜೆಡಿ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.

Share

Leave a comment

Leave a Reply

Your email address will not be published. Required fields are marked *