SUDDIKSHANA KANNADA NEWS/ DAVANAGERE/ DATE:15-02-2025
ದಾವಣಗೆರೆ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ತೋರುತ್ತಿರುವ ಮಲತಾಯಿ ಧೋರಣೆ ದೇಶದ ಜನರಿಗೆ ಗೊತ್ತಾಗಬೇಕು ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಕರೆ ನೀಡಿದರು.
ಹೈದರಾಬಾದ್ ನ ಗಾಂಧಿನಗರದಲ್ಲಿ ನಡೆದ ತೆಲಂಗಾಣ ಪ್ರದೇಶ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಜಕ್ಕಿಡಿ ಶಿವ ಚರಣ್ ರೆಡ್ಡಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಪ್ರಾಮುಖ್ಯತೆ ನೀಡಿಲ್ಲ. ಕೇವಲ ಬಿಹಾರ, ದೆಹಲಿ ಸೇರಿದಂತೆ ಚುನಾವಣೆ ನಡೆಯುವ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಆಯವ್ಯಯ ಮಂಡನೆ ಮಾಡುವ ಹೊಸ ಸಂಪ್ರದಾಯ ಹುಟ್ಟುಹಾಕಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ವಕ್ಫ್ ತಿದ್ದುಪಡಿ ವಿಚಾರದಲ್ಲಿಯೂ ಮುಸ್ಲಿಂ ಸಮುದಾಯದವರ ಅಭಿಪ್ರಾಯ ಪರಿಗಣಿಸಿಲ್ಲ. ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುತ್ತಿರುವುದು ಏಕಪಕ್ಷೀಯ ನಿರ್ಧಾರ. ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರೂ ಮಂಡನೆ ಮಾಡಲಾಗಿದೆ. ಇದು ಸರಿಯಲ್ಲ. ಯಾವುದೇ ಧರ್ಮ, ಸಮುದಾಯದ ಅಭಿಪ್ರಾಯ ಪರಿಗಣಿಸದೇ ಜಾರಿಗೊಳಿಸುವುದು, ಹೇರುವ ಹುನ್ನಾರ ಮಾಡುವುದು ಖಂಡನೀಯ ಎಂದು ಹೇಳಿದರು.
ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಜನಪ್ರಿಯ ಯೋಜನೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಅಭಿವೃದ್ಧಿ, ಜನಪರ, ಮಧ್ಯಮವರ್ಗ, ಬಡವರ ಪರ ಆಡಳಿತ ನಡೆಸುತ್ತಿದೆ. ಕೇಂದ್ರ ಸರ್ಕಾರವು ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಮೂಲಕ ಉಳಿದ ವರ್ಗದವರನ್ನು ನಿರ್ಲಕ್ಷಿಸಿದೆ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಆರೋಪಿಸಿದರು.
ತೆಲಂಗಾಣ ಪ್ರದೇಶ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿರುವ ಶಿವ ಚರಣ್ ರೆಡ್ಡಿ ಅವರಿಗೆ ಅಭಿನಂದನೆಗಳು. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಹಾಗೂ ಯುವ ಸಮುದಾಯವು ಕಾಂಗ್ರೆಸ್ ನತ್ತ ಆಕರ್ಷಿತರಾಗಲು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಅವರು ಸಲಹೆ ನೀಡಿದರು.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತನಾಡಿ ತೆಲಂಗಾಣವನ್ನು ದುಷ್ಟ ಶಕ್ತಿಗಳಿಂದ ತೊಡೆದು ಹಾಕಿದ ರಾಜ್ಯದ ಜನರಿಗೆ ಧನ್ಯವಾದಗಳು. ಈ ಹಿಂದೆ ಅಧಿಕಾರ ನಡೆಸಿದವರು ಜನವಿರೋಧಿ ನೀತಿ ಅನುಸರಿಸಿದರು. ಇದರ ಪರಿಣಾಮ ಕಾಂಗ್ರೆಸ್ ಗೆ ಅಧಿಕಾರ ಸಿಕ್ಕಿದೆ. ಯುವಕರ ಮನಸ್ಸಿನಲ್ಲಿ ವಿಷಬೀಜ ಬಿತ್ತುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿ. ಯುವಕರು ಎಚ್ಚೆತ್ತುಕೊಳ್ಳಬೇಕಿದೆ. ಸತ್ಯ ಅರಿತು ನಡೆಯಿರಿ. ಧರ್ಮದ ಅಮಲಿಗೆ ಬಿದ್ದು ಭವಿಷ್ಯ ಹಾಳುಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಈ ವೇಳೆ ಟಿಪಿಸಿಸಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹೇಶ್ ಕುಮಾರ್ ಗೌಡ್, ಐವೈಸಿ ಕಾರ್ಯದರ್ಶಿ ಸುರಭಿ ದ್ವಿವೇದಿ ಮತ್ತಿತತರು ಹಾಜರಿದ್ದರು.