SUDDIKSHANA KANNADA NEWS/ DAVANAGERE/ DATE:15-02-2025
ದಾವಣಗೆರೆ: ಕರ್ನಾಟಕ ಲೋಕಸೇವಾ ಆಯೋಗವು 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗಾಗಿ ಈಚೆಗೆ ನಡೆಸಿದ ಪೂರ್ವಭಾವಿ ಮರುಪರೀಕ್ಷೆಯಲ್ಲಿ ಭಾಷಾಂತರದ ಕಾರಣಕ್ಕಾಗಿ ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ಅನ್ಯಾಯ ಸರಿಪಡಿಸುವವರೆಗೂ ಕೆಎಎಸ್ ಫಲಿತಾಂಶವನ್ನು ತಡೆಹಿಡಿಯಬೇಕು ಎಂದು ಕನ್ನಡಪರ ಚಿಂತಕ ಎಲ್. ಜಿ. ಮಧುಕುಮಾರ್ ಆಗ್ರಹಿಸಿದ್ದಾರೆ.
ಮೊದಲು ನಡೆದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯ ಭಾಷಾಂತರದಲ್ಲಿ ತಪ್ಪುಗಳು ಆಗಿದ್ದವು.ಹೀಗಾಗಿ ಮರು ಪರೀಕ್ಷೆ ನಡೆಸಲಾಗಿತ್ತು. ಅದರಲ್ಲೂ ಕನ್ನಡದ ಭಾಷಾಂತರದ ಸಮಸ್ಯೆಗಳಿದ್ದು, ಉಂಟಾದ ಅನುವಾದದ ಗೊಂದಲಗಳ ಕಾರಣಕ್ಕೆ ಕನ್ನಡದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಕೇವಲ ಶೇ 15-20 ರಷ್ಟು ಮಾತ್ರ ಉತ್ತೀರ್ಣರಾಗಿದ್ದು,ಗರಿಷ್ಠ ಪ್ರಮಾಣದಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸಿ ನಂತರ ಇಂಗ್ಲೀಷ್‌ಗೆ ಅನುವಾದಿಸುವುದು ಸರಿಯಾದ ಕ್ರಮ.ಆದರೆ ಇಲ್ಲಿ ಇಂಗ್ಲೀಷ್‌ನಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸಿ ಕನ್ನಡಕ್ಕೆ ಅನುವಾದ ಮಾಡಲಾಗಿದೆ .ಈ ಕ್ರಮವು ಕರ್ನಾಟಕ ಆಡಳಿತ ಭಾಷಾ ನೀತಿಯ ಸ್ಪಷ್ಟ ಉಲ್ಲಂಘನೆಗೆ ಕಾರಣವಾಗಿದ್ದು, ರಾಜ್ಯ ಸರ್ಕಾರವು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕೆಎಎಸ್ ಫಲಿತಾಂಶವನ್ನು ಪ್ರಕಟಿಸದಿರಲು ಈ ಕೂಡಲೇ ಸೂಚನೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.