SUDDIKSHANA KANNADA NEWS/ DAVANAGERE/ DATE-04-06-2025
ದಾವಣಗೆರೆ: ದಾವಣಗೆರೆಯಲ್ಲಿ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.
ಕಳೆದ ಮೇ 26ರಿಂದ ಇಂದಿನವರೆಗೆ ಒಟ್ಟು 30 ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿತ್ತು. ಈ ಪೈಕಿ ಮೂವರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದರೆ, ಒಬ್ಬರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಇನ್ನೂ 8 ವರದಿಗಳ ನಿರೀಕ್ಷೆಯಲ್ಲಿರಲಾಗಿದೆ.
3 ಪಾಸಿಟಿವ್ ಹಾಗೂ ಮರಣದ ವಿವರ:
ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ 65 ವರ್ಷದ ವ್ಯಕ್ತಿ ಅನಿಯಂತ್ರಿತ ಮಧುಮೇಹ, ರಕ್ತದೊತ್ತಡ ಹಾಗು ಹೃದಯ ಸಂಬಂಧಿ ಕಾಯಿಲೆ ಮತ್ತು ಕಾಲಿನ ಗ್ಯಾಂಗ್ರಿನ್ ಗಾಗಿ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಮೇ 30ರಂದು ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೋವಿಡ್ ಪರೀಕ್ಷೆಗಾಗಿ ಮಾದರಿ ತೆಗೆಯಲಾಗಿತ್ತು.
ಅದೇ ದಿನ ವ್ಯಕ್ತಿಯು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು. ಈ ವ್ಯಕ್ತಿಯ ಕೋವಿಡ್ ವರದಿ ಪಾಸಿಟಿವ್ ಎಂದು ಜೂನ್ 3ರಂದು ಬಂದಿದೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಯು ಮೃತರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರ ಮನೆಯಲ್ಲಿ ಮೂರು ಜನ ಇದ್ದು, ಯಾವುದೇ ಲಕ್ಷಣಗಳು ಇರುವುದಿಲ್ಲ ಎಂದು ತಿಳಿದು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಏಳು ದಿನಗಳವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾವಣೆ ಮಾಡಲು ಸೂಚಿಸಿದೆ.
ಕೂಡ್ಲಿಗಿಯ ಉಜ್ಜಿನಿ ಗ್ರಾಮದ 70 ವರ್ಷದ ವೃದ್ದೆಗೆ ಸೌಮ್ಯ ಲಕ್ಷಣಗಳು ಇದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾವಣಗೆರೆಯ ರುದ್ರನಕಟ್ಟೆ ಗ್ರಾಮದ 21 ವರ್ಷದ ಮಹಿಳೆ ಅವರಿಗೂ ಸೌಮ್ಯ ಲಕ್ಷಣಗಳು ಇದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.