SUDDIKSHANA KANNADA NEWS/ DAVANAGERE/ DATE-04-06-2025
ದಾವಣಗೆರೆ: ದಾವಣಗೆರೆಯಲ್ಲಿ ಈಗ ಚುಮುಚುಮು ಚಳಿ. ಬೆಳ್ಳಂಬೆಳಿಗ್ಗೆ ಚಳಿಯಲ್ಲೂ ರೌಡಿಶೀಟರ್ ಗಳು ಬೆವರುವಂತೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಬೆವರಿಳಿಸಿದ್ದಾರೆ. ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ. ಬಾಲ ಬಿಚ್ಚಿದರೆ ಹುಷಾರ್ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ನೀವು ಏನೆಲ್ಲಾ ಮಾಡುತ್ತಿದ್ದೀರಾ? ಎಲ್ಲವೂ ನನಗೂ ಗೊತ್ತು. ನನ್ನ ಶಿಷ್ಯಂದಿರು, ಹುಡುಗರು ಮಾಡಿದ್ದಾರೆ ಎಂದು ಹೇಳಿದಾಕ್ಷಣ ನೀವೂ ಸಾಚಾ ಅಂತಲ್ಲ. ಏನೆಲ್ಲಾ ಮಾಡ್ತೀರಾ ಎಂಬ ಸಂಪೂರ್ಣ ಮಾಹಿತಿ ನಮ್ಮ ಬಳಿ ಇದೆ. ಸುಮ್ಮನೆ ನಿಮ್ಮ ನಿಮ್ಮ ಕೆಲಸ ಮಾಡಿಕೊಂಡಿದ್ದರೆ ಸರಿ. ಇಲ್ಲದಿದ್ದರೆ ನಾವು ಏನು ಎಂದು ತೋರಿಸಬೇಕಾಗುತ್ತದೆ. ನಮಗೆ ನಿಮ್ಮ ಎಲ್ಲಾ ಚಲನವಲನಗಳ ಬಗ್ಗೆ ಗೊತ್ತಿದೆ. ನಮ್ಮ ಬಳಿ ಮಾಹಿತಿ ಇದೆ. ಬಾಲ ಬಿಚ್ಚಿ ಮತ್ತೆ ರೌಡಿಸಂ ಸೇರಿದಂತೆ ಇತರೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಸಹಿಸುವ ಪ್ರಶ್ನೆಯೇ ಇಲ್ಲ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದರು.
ದಾವಣಗೆರೆ ಗ್ರಾಮಾಂತರ ಉಪ-ವಿಭಾಗ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಗಳನ್ನು ಕರೆಯಿಸಿ ವಿಚಾರಣೆ ನಡೆಸಿದ ಉಮಾ ಪ್ರಶಾಂತ್ ಅವರು, ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆ ಸಹಿಸಲು ಆಗದು. ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ನಮಗೂ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದು ಗೊತ್ತು ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಐಪಿಎಸ್ ರವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಮಂಜುನಾಥ ಜಿ. ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗ ಡಿವೈಎಸ್ಪಿ ಬಸವರಾಜ್ ಬಿ. ಎಸ್. ಮಾರ್ಗದರ್ಶನದಲ್ಲಿ ದಾವಣಗೆರೆ
ಗ್ರಾಮಾಂತರ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಗಳಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ, ಜಗಳೂರು, ಬಿಳಿಚೋಡು, ಹದಡಿ, ಮಾಯಕೊಂಡ, ಹರಿಹರ ನಗರ, ಹರಿಹರ ಗ್ರಾಮಾಂತರ, ಮಲೇಬೆನ್ನೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಪ್ರತ್ಯೇಕ ತಂಡಗಳಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಅಪರಾಧ ತಡೆ ನಿಟ್ಟಿನಲ್ಲಿ ರೌಡಿಶೀಟರ್ ಗಳ ವಾಸ ಗೃಹಗಳಿಗೆ ದಿಢೀರನೆ ಬೇಟಿ ನೀಡಿ ಪರಿಶೀಲಿಸಿದ್ದರು.
ಒಟ್ಟು 40 ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಕಾನೂನು ಬಾಹಿರವಾಗಿ ವಸ್ತುಗಳು ಕಂಡು ಬಂದಿರಲಿಲ್ಲ.
ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಯಾವುದೇ ಕಾನೂನು ಬಾಹಿರ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಕೃತ್ಯಗಳಲ್ಲಿ ತೊಡಗಬಾರದು ಎಂದು ಎಚ್ಚರಿಕೆ ಹಾಗೂ ಸೂಕ್ತ ಸೂಚನೆಗಳನ್ನು ಎಸ್ಪಿ ನೀಡಿದರು.