SUDDIKSHANA KANNADA NEWS/ DAVANAGERE/ DATE:23-12-2024
ದಾವಣಗೆರೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು. ಮಹಿಳಾ ಜನಪ್ರತಿನಿಧಿ ಬಗ್ಗೆ ಇಷ್ಟೊಂದು ಕೀಳುಭಾಷೆಯಲ್ಲಿ ಮಾತನಾಡಿದ ಸಿ. ಟಿ. ರವಿಗೆ ಸಂಸ್ಕೃತಿಯೇ ಇಲ್ಲ ಎಂದು ಪಂಚಮಸಾಲಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಆರ್.ವಿ. ಅಶೋಕ ಗೋಪನಹಾಳು, ಜಿಲ್ಲಾ ಪಂಚಮಸಾಲಿ ಸಮಾಜ ವಕೀಲರ ಘಟಕದ ಅಧ್ಯಕ್ಷ ಹೆಚ್. ಹೆಸ್. ಯೋಗೇಶ್, ದೂಡಾ ಸದಸ್ಯೆ ವಾಣಿ ಬಕ್ಕೇಶ್, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಅಭಿ ಕಾಟನ್ ಬಕ್ಕೇಶ್ ಮತ್ತಿತರರು ಲಕ್ಷ್ಮೀ ಆರ್. ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ತಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಿ.ಟಿ. ರವಿ ಹೇಳಿಕೆಯನ್ನು ಖಂಡಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಪಂಚಮಸಾಲಿ ಸಮಾಜದ ನಾಯಕಿ ಲಕ್ಷ್ಮೀ ಆರ್. ಹೆಬ್ಬಾಳ್ಳರ್ ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಅವಾಚ್ಯ ಶಬ್ದಗಳಿಂದ నింದಿಸಿ ಅವಮಾನ ಮಾಡಿರುವುದು ಮಹಿಳಾ ಕುಲಕ್ಕೆ ಮಾಡಿದ ಅಪಮಾನ. ರಾಜ್ಯದ ಜನತೆಯ ಕುಂದುಕೊರತೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ವೇದಿಕೆಯಲ್ಲಿ ಸಿ. ಟಿ. ರವಿ ಅವರು ಅವಾಚ್ಯ ಶಬ್ದದಿಂದ ನಿಂದಿಸಿರುವುದು ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿರುವ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಇಂಥವರು ಜನಪ್ರತಿನಿಧಿಯಾಗಲು ಯೋಗ್ಯರಲ್ಲ ಎಂದು ಹೇಳಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಜಿ. ಎಂ. ಸಿದ್ದೇಶ್ವರ್ ಅವರು ಪಂಚಮಸಾಲಿ ಸಮಾಜ ಬಾಂಧವರಿಗೆ ನಿಂದನೆ ಮಾಡಿದ್ದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಸಮಾಜ ಬಾಂಧವರು ತಕ್ಕ ಶಾಸ್ತಿ ಮಾಡಿದ್ದಾರೆ. ಇದೇ ರೀತಿಯಾಗಿ
ಸಿ.ಟಿ. ರವಿ ಅವರು ಸಮಾಜದ ನಾಯಕಿಗೆ ನಿಂದನೆ ಮಾಡಿದ್ದಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜ ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಭಾರತೀಯ ಸಂಪ್ರದಾಯದಲ್ಲಿ ಮಹಿಳೆಯರಿಗೆ ಅಪಾರವಾದ ಗೌರವವಿದ್ದು ಸರ್ಕಾರದ ಸಂಪುಟ ದರ್ಜೆ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಳರ್ರವರಿಗೆ ಈ ಪರಿಸ್ಥಿತಿ ಬಂದರೆ ಈ ದೇಶದ ಸಾಮಾನ್ಯ ಮಹಿಳೆಯರ ಪಾಡೇನು? ಎಂದು ಪ್ರಶ್ನಿಸಿದರು.
ಒಬ್ಬ ಮಹಿಳೆಗೆ ಅವಮಾನ ಮಾಡಿದರೂ ಸಹ ಅವರನ್ನು ಬೆಂಬಲಿಸಿ ಸಂಭ್ರಮಿಸುವ ನಾಯಕರಿಗೆ ನಾಚಿಕೆಯಾಗಬೇಕು. ಎಲ್ಲಾ ಸಮಾಜದ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂಬುದು ಪಂಚಮಸಾಲಿ ಸಮಾಜದ ಧೇಯವಾಗಿದೆ
ಎಂದು ಹೇಳಿದರು.
ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ನಡೆದ ಹೋರಾಟವನ್ನು ಹತ್ತಿಕ್ಕುವ ದುರುದ್ದೇಶದಿಂದ ಲಾಠಿ ಚಾರ್ಜ್ನಲ್ಲಿ ಪ್ರಮುಖ ಪಾತ್ರವಹಿಸಿದ ಪೊಲೀಸ್ ಅಧಿಕಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೂ.10,000 ಬಹುಮಾನ ಘೋಷಿಸಿರುವುದನ್ನು ಸಮಾಜ ಖಂಡಿಸುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಚನ್ನಗಿರಿ ತಾಲೂಕು ಘಟಕದ ಅಧ್ಯಕ್ಷ ಗಿರೀಶ್ ಮರಡಿ, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕಲ್ಲೇಶಪ್ಪ ಕಾರಿಗನೂರು, ಕೊಟ್ರೇಗೌಡ, ಕ್ಯಾರಕಟ್ಟೆ, ಶಂಕರ್, ಎ.ಪಿ.ಎಂ.ಸಿ. ರಮೇಶ್ ವಿ., ಸಮಾಜದ ಮುಖಂಡರು ಹಾಜರಿದ್ದರು.