ನವದೆಹಲಿ: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮಾತೃ ಸಂಸ್ಥೆಯಾದ ‘ಮೆಟಾ‘ (Meta Platforms) ತನ್ನ ಜಾಗತಿಕ ಉದ್ಯೋಗಿಗಳಲ್ಲಿ ಶೇಕಡಾ 10 ರಷ್ಟು, ಅಂದರೆ ಸುಮಾರು 8,000 ಉದ್ಯೋಗಿಗಳನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿದೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ಲೇಆಫ್ ಇಮೇಲ್ ಕಳುಹಿಸಲು ಬಳಸಿದ ವಿಭಿನ್ನ ತಂತ್ರ ತಂತ್ರಜ್ಞಾನ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಕಾರಿಡಾರ್ ಆತಂಕ ತಪ್ಪಿಸಲು WFH ತಂತ್ರ!
ಬುಧವಾರ ಕಂಪನಿಯು ಹಠಾತ್ತನೆ ಅಮೆರಿಕ, ಬ್ರಿಟನ್ ಮತ್ತು ಸಿಂಗಾಪುರ ಸೇರಿದಂತೆ ವಿವಿಧ ಪ್ರದೇಶಗಳ ಉದ್ಯೋಗಿಗಳಿಗೆ “ಇಂದು ಕಚೇರಿಗೆ ಬಾರದೆ ಮನೆಯಿಂದಲೇ ಕೆಲಸ ಮಾಡಿ” (Work From Home) ಎಂದು ಆದೇಶಿಸಿತ್ತು. ಆಫೀಸ್ ಕಾರಿಡಾರ್‌ಗಳಲ್ಲಿ ಉದ್ಯೋಗಿಗಳ ಆತಂಕ, ಗುಂಪುಗಾರಿಕೆ ಅಥವಾ ಯಾವುದೇ ರೀತಿಯ ಅಶಾಂತಿ ಉಂಟಾಗಬಾರದು ಎಂಬ ಕಾರಣಕ್ಕೆ ಮೆಟಾ ಈ ನಿರ್ಧಾರ ಕೈಗೊಂಡಿತ್ತು ಎನ್ನಲಾಗಿದೆ. ಉದ್ಯೋಗಿಗಳು ಮನೆಯಲ್ಲಿರುವಾಗಲೇ, ಸಿಂಗಾಪುರದ ಹಬ್‌ನಿಂದ ಆರಂಭಗೊಂಡು ಆಯಾ ದೇಶಗಳ ಸಮಯಕ್ಕೆ ಅನುಗುಣವಾಗಿ ಬೆಳಗಿನ ಜಾವ 4:00 ಗಂಟೆಗೆ ಲೇಆಫ್ ಇಮೇಲ್‌ಗಳನ್ನು ಕಳುಹಿಸಲು ಪ್ರಾರಂಭಿಸಲಾಯಿತು.
ಕೃತಕ ಬುದ್ಧಿಮತ್ತೆ (AI) ಕ್ರಾಂತಿಯೇ ಕಾರಣ
ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಪ್ರಸ್ತುತ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕಂಪನಿಯು ಈ ವರ್ಷ AI ಮೂಲಸೌಕರ್ಯಕ್ಕಾಗಿ ಬರೋಬ್ಬರಿ $125 ಬಿಲಿಯನ್‌ನಿಂದ $145 ಬಿಲಿಯನ್ ಹೂಡಿಕೆ ಮಾಡಲು ಯೋಜಿಸಿದೆ. ಮಾನವ ಸಂಪನ್ಮೂಲದ ಮೇಲಿನ ವೆಚ್ಚವನ್ನು ಕಡಿತಗೊಳಿಸಿ, ಆ ಹಣವನ್ನು AI ತಂತ್ರಜ್ಞಾನದ ಕಡೆಗೆ ತಿರುಗಿಸಲಾಗುತ್ತಿದೆ.
ಮೆಟಾ ಸಂಸ್ಥೆಯ ಮುಖ್ಯ ಪೀಪಲ್ ಆಫೀಸರ್ ಜಾನೆಲ್ಲೆ ಗೇಲ್ ಬಿಡುಗಡೆ ಮಾಡಿದ ಆಂತರಿಕ ಮೆಮೊ ಪ್ರಕಾರ:
8,000 ಉದ್ಯೋಗಿಗಳನ್ನು ಸಂಪೂರ್ಣವಾಗಿ ವಜಾಗೊಳಿಸಲಾಗಿದೆ.
7,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಬದಲು ಹೊಸ AI-ಆಧಾರಿತ ತಂಡಗಳಿಗೆ (AI-native teams) ವರ್ಗಾಯಿಸಲಾಗುತ್ತಿದೆ.
6,000 ಖಾಲಿ ಇದ್ದ ಹುದ್ದೆಗಳನ್ನು (Open Roles) ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
“ಕಡಿಮೆ ಮ್ಯಾನೇಜರ್‌ಗಳು ಮತ್ತು ಸಣ್ಣ ತಂಡಗಳೊಂದಿಗೆ ಹೆಚ್ಚು ವೇಗವಾಗಿ ಕೆಲಸ ಮಾಡುವ ‘ಫ್ಲ್ಯಾಟರ್ ಸ್ಟ್ರಕ್ಚರ್’ (Ultraflat structure) ಮಾದರಿಯನ್ನು ಕಂಪನಿ ಅಳವಡಿಸಿಕೊಳ್ಳುತ್ತಿದೆ,” ಎಂದು ಜಾನೆಲ್ಲೆ ಗೇಲ್ ತಿಳಿಸಿದ್ದಾರೆ. ಇದರಲ್ಲಿ ಎಂಜಿನಿಯರಿಂಗ್ ಮತ್ತು ಪ್ರೊಡಕ್ಟ್ ತಂಡಗಳಿಗೆ ಅತಿ ಹೆಚ್ಚು ಹೊಡೆತ ಬಿದ್ದಿದೆ.
ಕಣ್ಗಾವಲು ಸಾಫ್ಟ್‌ವೇರ್ ಮತ್ತು ಉದ್ಯೋಗಿಗಳ ಆಕ್ರೋಶ
ಕಂಪನಿಯ ಒಳಗೆ ಸದ್ಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಉದ್ಯೋಗಿಗಳ ನೈತಿಕ ಸ್ಥೈರ್ಯ ಕುಸಿದಿದೆ. ಲೇಆಫ್ ಸುದ್ದಿ ಮುಂಚಿತವಾಗಿಯೇ ಸೋರಿಕೆಯಾಗಿದ್ದರಿಂದ, ಉದ್ಯೋಗಿಗಳು ಆಫೀಸ್‌ನಲ್ಲಿದ್ದ ಉಚಿತ ಸ್ನ್ಯಾಕ್ಸ್ ಹಾಗೂ ಲ್ಯಾಪ್‌ಟಾಪ್ ಚಾರ್ಜರ್‌ಗಳನ್ನು ಬ್ಯಾಗ್‌ಗೆ ತುಂಬಿಸಿಕೊಳ್ಳುತ್ತಿರುವುದು ಕಂಡುಬಂದಿತ್ತು. ಇದರ ನಡುವೆ, ಉದ್ಯೋಗಿಗಳ ಮೌಸ್ ಮೂವ್‌ಮೆಂಟ್ (Mouse Movements) ಮತ್ತು ಕೀಸ್ಟ್ರೋಕ್‌ಗಳನ್ನು (Keystrokes) ಟ್ರ್ಯಾಕ್ ಮಾಡುವ ಹೊಸ ಆಂತರಿಕ ಟೂಲ್ ಅನ್ನು ಮೆಟಾ ಪರಿಚಯಿಸಿದೆ. ಮಾನವರು ಕಂಪ್ಯೂಟರ್ ಬಳಸುವ ವಿಧಾನವನ್ನು ನೋಡಿ AI ಏಜೆಂಟ್‌ಗಳಿಗೆ ತರಬೇತಿ ನೀಡಲು ಈ ಕಣ್ಗಾವಲು ನಡೆಸಲಾಗುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ 1,000ಕ್ಕೂ ಹೆಚ್ಚು ಉದ್ಯೋಗಿಗಳು ಸಹಿ ಸಂಗ್ರಹಿಸಿ ಪ್ರತಿಭಟಿಸಿದ್ದಾರೆ.
ಜಾಗತಿಕ ಟೆಕ್ ವಲಯದಲ್ಲಿ ಆತಂಕದ ಅಲೆ
ಇದು ಕೇವಲ ಮೆಟಾ ಕಂಪನಿಗೆ ಸೀಮಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಸಿಸ್ಕೋ (Cisco) 4,000 ಹುದ್ದೆಗಳನ್ನು ಕಡಿತಗೊಳಿಸಿದೆ. ಕಳೆದ ತಿಂಗಳು ಒರಾಕಲ್ (Oracle) ಸಂಸ್ಥೆಯು ಮುಂಜಾನೆ ಇಮೇಲ್ ಮೂಲಕ ಬರೋಬ್ಬರಿ 20,000 ರಿಂದ 30,000 ಜನರನ್ನು ಕೆಲಸದಿಂದ ತೆಗೆದುಹಾಕಿತ್ತು. ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ಡಿಸ್ನಿ ಸಂಸ್ಥೆಗಳೂ ಸಹ ಇದೇ ಹಾದಿ ಹಿಡಿದಿವೆ.
ರೆಡ್ಯೂಕ್ಯೂ (RedoQ) ಸಂಸ್ಥೆಯ ಸಿಇಒ ದೀಪಾಲ್ ದತ್ತಾ ಅವರ ಪ್ರಕಾರ, “ಇದು ಕೇವಲ ತಾತ್ಕಾಲಿಕ ಆರ್ಥಿಕ ಏರಿಳಿತವಲ್ಲ, ಬದಲಿಗೆ ತಂತ್ರಜ್ಞಾನ ವಲಯದ ಶಾಶ್ವತ ಬದಲಾವಣೆ. ಇನ್ನುಮುಂದೆ ಕೇವಲ ಕೋಡಿಂಗ್ ಬರೆಯುವ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗಿಂತ, ಸಂಕೀರ್ಣವಾದ AI ವ್ಯವಸ್ಥೆಗಳನ್ನು ಮುನ್ನಡೆಸುವ (Systemic Conductors) ತಂತ್ರಜ್ಞರಿಗೆ ಮಾತ್ರ ಮಾರುಕಟ್ಟೆಯಲ್ಲಿ ಬೇಡಿಕೆ ಇರಲಿದೆ.”





Leave a comment