ಚಂಡೀಗಢ: ಪಂಜಾಬ್‌ನ ಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, 28 ವರ್ಷದ ಮಂಜೀತ್ ಕೌರ್ ಭೀಕರ ದಾಳಿಗೆ ಒಳಗಾಗಿ ಸುಮಾರು ಎರಡು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ಕೊನೆಯುಸಿರೆಳೆದಿದ್ದಾರೆ.
ಪ್ರಕರಣದ ಹಿನ್ನೆಲೆ:
ವರದಿಗಳ ಪ್ರಕಾರ, ಜುಲೈ 3 ರಂದು ಶುಭಿ ಮತ್ತು ಪಿಂಡಾ ಎಂಬ ಇಬ್ಬರು ಪರಿಚಿತರು ಮಂಜೀತ್ ಅವರನ್ನು ಚಂಡೀಗಢದ ಸೆಕ್ಟರ್ 34 ರ ಮದ್ಯದಂಗಡಿ ಬಳಿ ಭೇಟಿಯಾಗಲು ಕರೆಸಿಕೊಂಡಿದ್ದರು. ಬಳಿಕ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಅಪಹರಿಸಿ, ಪಂಜಾಬ್‌ನ ರೂಪನಗರ ಜಿಲ್ಲೆಯ ಮೊರಿಂದಾಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ತಲುಪಿದ ಸ್ನೇಹಿತರೊಬ್ಬರು ಬೆಂಕಿಯನ್ನು ನಂದಿಸಿ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಸಾವು:
ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಂಜೀತ್ ಅವರನ್ನು ಮೊಹಾಲಿ ಮೂಲದ ಆಸ್ಪತ್ರೆಯಿಂದ ಜುಲೈ 9 ರಂದು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ರವಾನಿಸಲಾಯಿತು. ಹಲವು ವಾರಗಳ ಕಾಲ ಕೋಮಾದಲ್ಲಿದ್ದ ಮಂಜೀತ್, ಆಗಸ್ಟ್ 5 ರಂದು ಸ್ವಲ್ಪ ಸಮಯ ಪ್ರಜ್ಞೆಗೆ ಬಂದು ತನಗೆ ಸಂಭವಿಸಿದ ಘಟನೆಯನ್ನು ಕುಟುಂಬದವರಿಗೆ ವಿವರಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 26 ರಂದು ನಿಧನರಾದರು.
ಪ್ರಸ್ತುತ ಚಂಡೀಗಢದ ಸೆಕ್ಟರ್ 34 ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 140(1) (ಅಪಹರಣ), 103(1) (ಕೊಲೆ) ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮೃತರಾದ ಮಂಜೀತ್ ಕೌರ್ ಅವರಿಗೆ ಏಳು ವರ್ಷದ ಮಗನಿದ್ದಾನೆ.





Leave a comment