SUDDIKSHANA KANNADA NEWS/ DAVANAGERE/ DATE:14-01-2025
ದಾವಣಗೆರೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಎಸ್ ಎಸ್ ಎಂ ಬಾಸ್ಕೆಟ್ ಬಾಲ್ ಕ್ಲಬ್ ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕ್ಲಬ್ ನ ನೂತನ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ಮಾತನಾಡಿ ಕ್ರೀಡಾ ಸಚಿವರಾಗಿದ್ದಾಗ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದ್ದರು. ಕ್ರೀಡಾಸಕ್ತರೂ ಆಗಿದ್ದರಿಂದ
ಕ್ರೀಡಾಪಟುಗಳಿಗೆ ನೆರವು ನೀಡಿದ್ದರು. ಬಾಸ್ಕೆಟ್ ಬಾಲ್ ಆಟಕ್ಕೆ ಒಳಾಂಗಣ ಕ್ರೀಡಾಂಗಣದ ಅವಶ್ಯಕತೆ ಇದ್ದು, ಇದಕ್ಕೆ ಅನುದಾನವನ್ನೂ ಬಿಡುಗಡೆ ಮಾಡಿಸಿಕೊಡುವಲ್ಲಿ ಸಚಿವರು ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್. ಎಸ್.
ಎಂ. ಬಾಸ್ಕೆಟ್ ಬಾಲ್ ಕ್ಲಬ್ ಅಸ್ತಿತ್ವಕ್ಕೆ ಬಂದಿದ್ದು, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಗೌರವಾಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.
ಬಾಸ್ಕೆಟ್ ಬಾಲ್ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದ್ದು, ಎಲ್ಲಾ ರೀತಿಯ ನೆರವು ನೀಡಲು ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಮ್ಮತಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಭಿವೃದ್ಧಿ ಹರಿಕಾರರೂ ಹೌದು. ಗ್ಲಾಸ್ ಹೌಸ್ ಇಂದಿಗೂ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅದೇ ರೀತಿಯಲ್ಲಿ ಕುಂದುವಾಡ ಕೆರೆ ಹಾಗೂ ಟಿಬಿ ಸ್ಟೇಷನ್ ಅಭಿವೃದ್ಧಿಪಡಿಸಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕ್ರಮ ವಹಿಸಿದ್ದಾರೆ. ರಸ್ತೆಗಳು, ಉದ್ಯಾನವನಗಳು ಸೇರಿದಂತೆ ನಗರದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ದಾವಣಗೆರೆ ಮಾಡಲು ಕಾರಣೀಕರ್ತರು ಎಸ್. ಎಸ್. ಮಲ್ಲಿಕಾರ್ಜುನ್ ಅವರು. ಅಭಿವೃದ್ಧಿ ವಿಚಾರದಲ್ಲಿ ಎಸ್ ಎಸ್ ಎಂ ಅವರಿಗೆ ದೂರದೃಷ್ಟಿತ್ವ ಎಲ್ಲರಿಗೂ ಗೊತ್ತಿರುವ ವಿಚಾರ. ಇಂಥ ನಾಯಕರು, ಜನಪ್ರತಿನಿಧಿಗಳ ಅವಶ್ಯಕತೆ ಇದೆ. ಅಭಿವೃದ್ಧಿ ಪರ ಇರುವವರನ್ನು ನಾವು ಕಳೆದುಕೊಳ್ಳಬಾರದು. ಸದಾ ಇವರ ಪರವಾಗಿ ಎಲ್ಲರೂ ನಿಲ್ಲಬೇಕಿದೆ ಎಂದು ಕರೆ ನೀಡಿದರು.
ಕ್ಲಬ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್ ಅವರು ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭ ಕೋರಿದರು. ಸಂಕ್ರಾಂತಿ ಹಬ್ಬವೂ ಎಲ್ಲರಿಗೂ ಒಳಿತನ್ನು ಮಾಡಲಿ. ಎಸ್. ಎಸ್. ಎಂ. ಬಾಸ್ಕೆಟ್ ಬಾಲ್ ಕ್ಲಬ್ ಉದ್ಘಾಟನೆ ನೆರವೇರಿಸಿದ್ದು ಖುಷಿ ತಂದಿದೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರ ಶ್ರಮದಿಂದ ದಾವಣಗೆರೆ ನಗರವು ಇಷ್ಟೊಂದು ಅಭಿವೃದ್ಧಿ ಹೊಂದಿದೆ. ಅವರ ನಾಯಕತ್ವದಲ್ಲಿ ನಾವು ಮುನ್ನಡೆಯುತ್ತಿರುವುದು ನಮ್ಮ ಪಾಲಿನ ಪುಣ್ಯ ಎಂದು ಹೇಳಿದರು.
ಕ್ಲಬ್ ಉಪಾಧ್ಯಕ್ಷರಾದ ಸಂಕೇತ್, ಸಿದ್ದೇಶ್, ಕಾರ್ಯದರ್ಶಿ ಕೆ. ಎಂ. ಪ್ರವೀಣ್, ಖಜಾಂಚಿ ಪ್ರಸನ್ನ, ಎಸ್ ಎಸ್ ಎಮ್ ಬಾಸ್ಕೆಟ್ ಬಾಲ್ ಕ್ಲಬ್ ಸದಸ್ಯರು, ಜಿಲ್ಲಾ ಬಾಸ್ಕೆಟ್ ಬಾಲ್ ಕ್ಲಬ್ ಗೌರವಾಧ್ಯಕ್ಷ ಸಿ. ರಾಮಮೂರ್ತಿ, ಅಧ್ಯಕ್ಷ ಕಿರಣ್ ಕುಮಾರ್ ಆರ್., ಉಪಾಧ್ಯಕ್ಷ ವಿಜಯ್ ಕುಮಾರ್, ಕಾರ್ಯದರ್ಶಿ ಆರ್. ವೀರೇಶ್, ಖಜಾಂಚಿ ಪ್ರಸನ್ನ, ತರಬೇತುದಾರರಾದ ದರ್ಶನ್, ಸಚಿನ್, ಸದಸ್ಯರು ಹಾಜರಿದ್ದರು. ಎರಡು ದಿನ ಕಾಲ ಕ್ಲಬ್ ನ ಕ್ರೀಡಾಪಟುಗಳಿಗೆ ಆಯೋಜಿಸಲಾಗಿದ್ದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಬ್ಯಾಗ್ ಅನ್ನು ವಿತರಿಸಲಾಯಿತು.
ಸಂಕ್ರಾಂತಿ ಸಂಭ್ರಮ:
ಇನ್ನು ಕ್ರೀಡಾಂಗಣದಲ್ಲಿ ಗ್ರಾಮೀಣ ಭಾಗದಲ್ಲಿ ಆಯೋಜಿಸಲಾಗುವ ಮಕರ ಸಂಕ್ರಾಂತಿ ಹಬ್ಬದ ಸೊಬಗು ಇಲ್ಲಿಯೂ ಕಂಡು ಬಂತು. ಎಳ್ಳು ಬೆಲ್ಲದ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಕ್ಲಬ್ ನ ಸದಸ್ಯರು ಬಿಳಿವಸ್ತ್ರ ಧರಿಸಿ ಗಮನ ಸೆಳೆದರು. ಹಳ್ಳಿ ಪ್ರದೇಶದಂತೆ ಜಿಲ್ಲಾ ಕ್ರೀಡಾಂಗಣ ಸಜ್ಜುಗೊಳಿಸಲಾಗಿತು. ಬಾಸ್ಕೆಟ್ ಬಾಲ್ ಕ್ರೀಡಾಪಟುಗಳು, ಪೋಷಕರು ಹಾಜರಿದ್ದರು. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.