ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ನಟಿ ತ್ರಿಶಾ ಹಾಗೂ ಡಿಎಂಕೆ ಯುವ ಘಟಕದ ನಾಯಕ ಉದಯನಿಧಿ ಸ್ಟಾಲಿನ್ ನಡುವಿನ ವಿವಾದಾತ್ಮಕ ಹೇಳಿಕೆಯು ರಾಜ್ಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ. ಸಾರ್ವಜನಿಕ ಸಭೆಯೊಂದರಲ್ಲಿ ಮಹಿಳೆಯರಿಗೆ ಹಾಗೂ ನಾಯಕರಿಗೆ ಅಪಮಾನವಾಗುವಂತೆ ಮಾತನಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಕುರಿತು ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ಹಾಗೂ ಸಿಎಂ ವಿಜಯ್ ಕಠಿಣ ಪ್ರತಿಕ್ರಿಯೆ ನೀಡಿದ್ದಾರೆ.
ವಿವಾದದ ಹಿನ್ನೆಲೆ ಏನು?
ತಂಜಾವೂರಿನಲ್ಲಿ ನಡೆದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಈ ವೇಳೆ ಸಭೆಯಲ್ಲಿದ್ದ ಕೆಲವರು ನಟಿ ತ್ರಿಶಾ ಅವರ ಹೆಸರನ್ನು ಜೋರಾಗಿ ಕೂಗಿದ್ದಾರೆ. ಜನರಿಂದ ಈ ರೀತಿಯ ಘೋಷಣೆಗಳು ಕೇಳಿಬಂದಾಗ, ಉದಯನಿಧಿ ಸ್ಟಾಲಿನ್ ಅವರು ಇದಕ್ಕೆ ದ್ವಿತೀಯಾರ್ಥದ ಮತ್ತು ಆಕ್ಷೇಪಾರ್ಹ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತಮಿಳುನಾಡು ರಾಜಕೀಯದಲ್ಲಿ ತೀವ್ರ ವಿವಾದ ಭುಗಿಲೆದ್ದಿತು.
ಟಿವಿಕೆ ಮತ್ತು ಮಹಿಳಾ ಆಯೋಗದ ಮಧ್ಯಪ್ರವೇಶ:
ಉದಯನಿಧಿ ಸ್ಟಾಲಿನ್ ಅವರ ಈ ಹೇಳಿಕೆಯು ಮಹಿಳೆಯರನ್ನು ಹೀಯಾಳಿಸುವ ಹಾಗೂ ಸಾರ್ವಜನಿಕವಾಗಿ ಅವಮಾನಿಸುವಂತಿದೆ ಎಂದು ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ತೀವ್ರವಾಗಿ ಖಂಡಿಸಿತು. ಮಾತ್ರವಲ್ಲದೆ, ಈ ಕುರಿತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಅಧಿಕೃತ ದೂರು ನೀಡಿ, ಉದಯನಿಧಿ ಸ್ಟಾಲಿನ್ ಬಹಿರಂಗ ಕ್ಷಮೆ ಯಾಚಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಇದರ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡರು.
ವಿಜಯ್ ಅವರ ಖಡಕ್ ಎಚ್ಚರಿಕೆ:
ಈ ಸಂಪೂರ್ಣ ವಿವಾದದ ಕುರಿತು ಪ್ರತಿಕ್ರಿಯಿಸಿರುವ ನಟ ಹಾಗೂ ಟಿವಿಕೆ ನಾಯಕ ವಿಜಯ್, “ಸಮಾಜದಲ್ಲಿ ಮಹಿಳೆಯರಿಗೆ ಅಪಮಾನ ಎಸಗಿದರೆ ಕಾನೂನು ತನ್ನ ಕೆಲಸ ಮಾಡುತ್ತದೆ, ಕಾನೂನು ಸುಮ್ಮನಿರುವುದಿಲ್ಲ” ಎಂದು ಕಠಿಣ ಸಂದೇಶ ರವಜಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ಸಾರ್ವಜನಿಕ ವೇದಿಕೆಗಳಲ್ಲಿ ಮಹಿಳೆಯರನ್ನು ಹೀಯಾಳಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಅವರು ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಡಿಎಂಕೆ ಮತ್ತು ವಿಜಯ್ ಅವರ ಹೊಸ ರಾಜಕೀಯ ಪಕ್ಷವಾದ ಟಿವಿಕೆ ನಡುವಿನ ರಾಜಕೀಯ ಸಮರವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ರಾಜ್ಯದಲ್ಲಿ ಇದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ





Leave a comment