Home ದಾವಣಗೆರೆ “ನಾನು ಹೋರಾಡಲೇಬೇಕು”: ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಆದೇಶವನ್ನು ಪ್ರಶ್ನಿಸಲು ಬಿಲ್ಕಿಸ್ ಬಾನೋ ನಿರ್ಧಾರ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ನಾನು ಹೋರಾಡಲೇಬೇಕು”: ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಆದೇಶವನ್ನು ಪ್ರಶ್ನಿಸಲು ಬಿಲ್ಕಿಸ್ ಬಾನೋ ನಿರ್ಧಾರ!

Share
ಬಿಲ್ಕಿಸ್ ಬಾನೋ
Share

ನವದೆಹಲಿ: 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ತಮ್ಮ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬ ಸದಸ್ಯರ ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದಕ್ಕೆ ಸಂತ್ರಸ್ತೆ ಬಿಲ್ಕಿಸ್ ಬಾನೋ (Bilkis Bano) ತೀವ್ರ ಆಘಾತ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ಈ ಆದೇಶವನ್ನು ಪ್ರಶ್ನಿಸಿ ಹೋರಾಡುತ್ತೇನೆ, ನಾನು ಹೋರಾಡಲೇಬೇಕು” ಎಂದು ಮಂಗಳವಾರ ತಮ್ಮ ವಕೀಲರ ಮೂಲಕ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಬಿಲ್ಕಿಸ್ ಬಾನೋ ಘೋಷಿಸಿದ್ದಾರೆ.

17 ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾರೆ ಎಂಬ ಕಾರಣ ನೀಡಿ ಸುಪ್ರೀಂ ಕೋರ್ಟ್ ಅಕ್ಟೋಬರ್ 28ರಂದು ಅಪರಾಧಿಗಳಾದ ಬಿಪಿನ್‌ಚಂದ್ ಜೋಶಿ ಮತ್ತು ಪ್ರದೀಪ್ ಮೋಧಿಯಾ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿತ್ತು. ಆದರೆ, ಈ ಆದೇಶ ಹೊರಡಿಸುವ ಮುನ್ನ ನ್ಯಾಯಾಲಯವು ತಮಗೆ ಯಾವುದೇ ಮಾಹಿತಿ ನೀಡಿಲ್ಲ ಅಥವಾ ತಮ್ಮ ವಾದವನ್ನು ಆಲಿಸಿಲ್ಲ ಎಂದು ಬಿಲ್ಕಿಸ್ ಬಾನೋ ಪ್ರಶ್ನಿಸಿದ್ದಾರೆ. ಮಾಧ್ಯಮ ವರದಿಗಳ ಮೂಲಕವೇ ತಮಗೆ ಈ ವಿಷಯ ತಿಳಿಯಿತು ಎಂದು ಅವರು ನೋವು ತೋಡಿಕೊಂಡಿದ್ದಾರೆ.

ನನ್ನ ವಾದ ಆಲಿಸದೆ ಆದೇಶ: ನನ್ನನ್ನು ಕರೆಯದೆ ಅಥವಾ ನನ್ನ ಮಾತು ಕೇಳದೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸುತ್ತಿರುವುದು ಇದು ಎರಡನೇ ಬಾರಿ. 24 ವರ್ಷಗಳ ಕಾಲ ಹೋರಾಡಿ ಪಡೆದ ನ್ಯಾಯವನ್ನು ಮತ್ತೆ ಕಳೆದುಕೊಳ್ಳುತ್ತಿದ್ದೇನೆ ಎಂಬ ಭಯ ಕಾಡುತ್ತಿದೆ ಎಂದು ಬಾನೋ ಹೇಳಿದ್ದಾರೆ.

ಮಕ್ಕಳು ಹಾಗೂ ಮಗಳಿಗಾಗಿ ಹೋರಾಟ: ನನ್ನ ಮಕ್ಕಳು ಈ ಭಯ ಮತ್ತು ಗಾಯಗಳೊಂದಿಗೆ ಬದುಕಬಾರದು. 2002ರ ಗಲಭೆಯಲ್ಲಿ ಹತ್ಯೆಯಾದ ನನ್ನ 3 ವರ್ಷದ ಮಗಳು ಸಲೇಹಾ ಬದುಕಲು ಅರ್ಹಳಾಗಿದ್ದಳು, ಅವಳಿಗಾಗಿ ನಾನು ಈ ಹೋರಾಟ ಮುಂದುವರಿಸುತ್ತೇನೆ ಎಂದು ಭಾವುಕರಾಗಿ ತಿಳಿಸಿದ್ದಾರೆ.

ಭದ್ರತೆಯ ಆತಂಕ: ಅಪರಾಧಿಗಳು ಜೈಲಿನಿಂದ ಹೊರಬಂದಿರುವುದರಿಂದ ತಮಗೆ ಮತ್ತು ತಮ್ಮ ಕುಟುಂಬದ ಸುರಕ್ಷತೆಗೆ ಮತ್ತೆ ಆತಂಕ ಎದುರಾಗಿದೆ ಎಂದಿರುವ ಅವರು, ಯಾವುದೇ ಮಹಿಳೆ ಅಥವಾ ನಾಗರಿಕರು ನ್ಯಾಯಕ್ಕಾಗಿ ಜೀವನಪೂರ್ತಿ ಹೋರಾಡುವ ಪರಿಸ್ಥಿತಿ ಬರಬಾರದು ಎಂದಿದ್ದಾರೆ.

ಈ ಇಬ್ಬರು ಅಪರಾಧಿಗಳು, 2024ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ 11 ಮಂದಿ ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಪಟ್ಟಿಯಲ್ಲಿ ಸೇರಿದ್ದವರಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles