ಬೆಂಗಳೂರು: “ಸಾಕಷ್ಟು ಬಿಜೆಪಿ ಹಾಗೂ ಜನತಾದಳದ ನಾಯಕರು ನನ್ನೊಂದಿಗೆ ಹಾಗೂ ಪಕ್ಷದ ಅಧ್ಯಕ್ಷರೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ಸಿಎಂ ಡಿ. ಕೆ. ಶಿವಕುಮಾರ್ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಸಿದ್ಧಾಂತ, ತತ್ವ ಒಪ್ಪಿ ಬರುವವರಿಗೆ ಸ್ವಾಗತ ಎಂದರು.
ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಮ್ಮೆಲ್ಲರ ಬಗ್ಗೆ ನಂಬಿಕೆವುಳ್ಳವರು ಬರಬಹುದು. ಪಟ್ಟಿ ತಯಾರಿಸಲು ಜಿಲ್ಲಾ ಸಚಿವರಿಗೆ ತಿಳಿಸಲಾಗಿದೆ. ಪಕ್ಷಕ್ಕೆ ಬರುವವರಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಈಗಾಗಲೇ ವಿವಿಧ ಸ್ಥಾನಗಳಲ್ಲಿ ಹಲವರಿಗೆ ಅವಕಾಶ ನೀಡಲಾಗಿರುವುದು ತಿಳಿದ ವಿಷಯ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ಹೇಳಿದರು.
ದೇಶ ಉಳಿಸಲು ಕಾಂಗ್ರೆಸ್ ಪಕ್ಷ ಬಿಟ್ಟರೆ ಬೇರೆ ಪರ್ಯಾಯವಿಲ್ಲ
“ನಮಗೆ ದೇಶ ಬಹಳ ಮುಖ್ಯವಾಗಿದ್ದು, ದೇಶವನ್ನು ಉಳಿಸಲು ಕಾಂಗ್ರೆಸ್ ಪಕ್ಷ ಬಿಟ್ಟರೆ ಬೇರೆ ಪರ್ಯಾಯವಿಲ್ಲ. ಕಳೆದ 13 ವರ್ಷಗಳಲ್ಲಿ ಬಿಜೆಪಿಗೆ ಉತ್ತಮ ಅವಕಾಶ ನೀಡಲಾಗಿದೆ. ನನ್ನ ಪ್ರಕಾರ ಅದು ಸಾಕು. ಯುವಜನತೆಗೆ ನಮ್ಮ ಕಡೆಗೆ ಎದುರು ನೋಡುತ್ತಿದ್ದು, ಅವರಿಗೆ ಅವಕಾಶ ನೀಡುವುದು ಅಗತ್ಯ” ಎಂದು ಸಿಎಂ ಅಭಿಪ್ರಾಯಪಟ್ಟರು.
ಒಟ್ಟಾಗಿ ಕೆಲಸ ಮಾಡಬೇಕಿದೆ
“ವಿಶೇಷವಾಗಿ ಯುವ ಪೀಳಿಗೆ ಇದನ್ನು ಗಮನಿಸುತ್ತಿದ್ದು ಅವರಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸಲಾಗುತ್ತಿದೆ. ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ” ಎಂದರು.
“ನಾನು ಶಾಸಕನಾದಾಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ತದ ನಂತರ ನನ್ನ ಸ್ಥಾನಕ್ಕೆ ನಾರಾಯಣಸ್ವಾಮಿ ಅವರನ್ನು ನೇಮಕಮಾಡಲಾಯಿತು. ಆರಾಧ್ಯ ಅವರು ನನ್ನ ಸಹಪಾಠಿ. ದೇವೆಗೌಡರ ವಿರುದ್ದ ಕಾಲೇಜು ವಿದ್ಯಾರ್ಥಿಗೆ ಟಿಕೆಟ್ ನೀಡಲಾಗಿದೆ ಎಂದು ಒಂದಷ್ಟು ಜನ ಕಾಲೇಜಿನ ಬಳಿ ಬಂದು ಗಲಭೆ ಮಾಡಲು ನೋಡಿದರು. ಆಗ ಆರಾಧ್ಯ ಅವರು ಅವರಿಗೆ ಜೋರು ಮಾಡಿ ಕಳುಹಿಸಿದರು. ಇಂದು ಬಿಎಂಟಿಸಿ ಅಧ್ಯಕ್ಷರಾಗಿದ್ದಾರೆ. ಶ್ರಮ ಇದ್ದ ಕಡೆ ಫಲ ಇರುತ್ತದೆ. ಪಕ್ಷಕ್ಕೆ ಕೆಲಸ ಮಾಡಿದರೆ ಗುರುತಿಸುವ ಕೆಲಸವನ್ನ ಪಕ್ಷ ಮಾಡಲಿದೆ” ಎಂದು ತಿಳಿಸಿದರು.
“ನರೇಂದ್ರ ಬಾಬು ಅವರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬಂದಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರ ನಿಷ್ಠೆಯೇ ನಾಯಕನ ಗೆಲುವು. ಕಾಂಗ್ರೆಸ್ ಪಕ್ಷದಲ್ಲಿ ದುಡಿಯುವ ಎಲ್ಲಾ ಕಾರ್ಯಕರ್ತರಿಗೂ ಅವಕಾಶವಿದೆ. ತಾಳ್ಮೆ ಇರಬೇಕು. ಕೆಲವರು ಯಾವುದೇ ಫಲಾಪೇಕ್ಷೆ ಇಲ್ಲದೇ ದುಡಿಯುತ್ತಾ ಹೋಗುತ್ತಾರೆ.
“ನಾನು ದೆಹಲಿಗೆ ಯುವ ಕಾಂಗ್ರೆಸ್ ಅಧಿವೇಶನಕ್ಕೆ ಹೋದಾಗ ನಾವುಗಳು ರಾಜೀವ್ ಗಾಂಧಿಯವರನ್ನು ಭೇಟಿ ಮಾಡಲು ಹೋದೆವು. ಆದರೆ ಅಲ್ಲಿಗೆ ಅನೇಕ ನಾಯಕರು ಬಂದಿದ್ದರು. ಆ ವೇಳೆ ಅಲ್ಲಿಗೆ ಹಿರಿಯ ನಾಯಕರೊಬ್ಬರು ಬಂದರು. ಅವರನ್ನು ನೋಡಿ ಭದ್ರತಾ ಸಿಬ್ಬಂದಿ ಅವರನ್ನು ನೇರ ರಾಜೀವ್ ಗಾಂಧಿಯವರ ಬಳಿ ಕರೆದುಕೊಂಡು ಹೋದರು. ನಮಗೆ ಅವರು ಯಾರು ಎಂದು ತಿಳಿಯಲಿಲ್ಲ. ಅವರ ಬಗ್ಗೆ ರಾಜೀವ್ ಗಾಂಧಿ ಅವರ ಬಳಿ ಕೇಳಿದಾಗ. ಅವರು ಬಾಬು ಜಗಜೀವನ್ ರಾಮ್. ಕಾರಣಾಂತರಗಳಿಂದ ಕಾಂಗ್ರೆಸ್ ಪಕ್ಷ ಬಿಟ್ಟಿದ್ದರು. ಈಗ ನಾನು ಕಾಂಗ್ರೆಸ್ಸಿಗನಾಗಿಯೇ ಮರಣ ಹೊಂದಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಅವರನ್ನು ಸಂತೋಷದಿಂದ ಬರಮಾಡಿಕೊಂಡೆ ಎಂದು ವಿವರಿಸಿದರು” ಎಂದು ಹೇಳಿದರು.
ಜನರ ನಡುವೆ ನಾಯಕನಿದ್ದರೆ ಜನ ಜಾತಿ ಕೇಳುವುದಿಲ್ಲ
“ರಾಜಕೀಯ ಸಾಧ್ಯತೆಗಳ ಕಲೆ. ಜನರ ನಡುವೆ ಇದ್ದರೆ ಜನ ಜಾತಿ ಕೇಳಲ್ಲ. ನಾಯಕ ಕ್ರಿಯಾಶೀಲನಾಗಿದ್ದರೆ ಜನ ಗೆಲ್ಲಿಸುತ್ತಾರೆ. ಕೆಲವರು ಭಾವನೆಗಳ ಮೇಲೆ ಜಾತಿ ಮಾಡುತ್ತಾರೆ. ನನಗೆ ಜಾತಿಗಿಂತ ನೀತಿ, ಸಿದ್ಧಾಂತದ ಮೇಲೆ ನಂಬಿಕೆ” ಎಂದು ಹೇಳಿದರು.
“ನನಗೆ ಶ್ರಮ, ಸಿದ್ಧಾಂತ, ಕಾಯಕದ ಮೇಲೆ ನಂಬಿಕೆ. ಶ್ರಮ ಇದ್ದ ಕಡೆ ಫಲವಿದೆ. ಒಂಟಿಯಾಗಿರುವ ನಾಯಕ ಎಂದಿಗೂ ಗೆಲುವು ಕಾಣುವುದಿಲ್ಲ. ಜನ ಜಾತಿ ನೋಡುವ ಹಾಗಿದ್ದರೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ಹೇಗೆ ಸಾಧ್ಯ? ಸಿಂಧ್ಯಾ ಅವರು ನನ್ನ ಕ್ಷೇತ್ರದಲ್ಲಿ 6 ಬಾರಿ ಶಾಸಕರಾಗಿದ್ದರು. ಅಲ್ಲಿ ಮರಾಠಿ ಮತದಾರರ ಸಂಖ್ಯೆ 3 ಸಾವಿರರವೂ ದಾಟಿಲ್ಲ. ರಾಮನಗರದಲ್ಲಿ ನಿಖಿಲ್ ಎದುರು ಇಕ್ಬಾಲ್ ಹುಸೇನ್ ಗೆಲ್ಲಲು ಹೇಗೆ ಸಾಧ್ಯ?” ಎಂದು ಹೇಳಿದರು.
“ಮಾಜಿ ಮೇಯರ್ ನಾಗರಾಜ್ ಅವರಿಗೆ, ಕೆ ಎಂ ನಾಗರಾಜ್ ಅವರಿಗೆ ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಟಿಕೆಟ್ ನೀಡಲು ತೀರ್ಮಾನಿಸಲಾಯಿತು. ಆಗ ನಾವು ನರೇಂದ್ರ ಬಾಬು ಹಾಗೂ ಚಂದ್ರಶೇಖರ್ ಅವರಿಗೆ ನೀಡೋಣ ಎಂದು ಎಸ್ ಎಂ ಕೃಷ್ಣ ಅವರಿಗೆ ಹೇಳಿದೆವು. ಆಗ ಅನೇಕರು ಎರಡೂ ಕ್ಷೇತ್ರಗಳು ಒಕ್ಕಲಿಗರ ಪ್ರಾಬಲ್ಯವಿದೆ. ಅಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗದವರು ಗೆಲ್ಲಲು ಸಾಧ್ಯವೇ ಎಂದು ಕೇಳಿದರು. ಆದರೆ ಇವರಿಬ್ಬರೂ ಗೆದ್ದರು ” ಎಂದರು.
- AICC Mallikarjun Kharge
- Bangalore News.
- BJP JDS leaders to Congress
- Congress joining news
- Congress party inclusion
- DK Shivakumar
- Karnataka Politics
- KPCC President
- Operation Hastha
- Siddaramaiah
- ಆಪರೇಷನ್ ಹಸ್ತ.
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಸುದ್ದಿ
- ಕಾಂಗ್ರೆಸ್ ಸೇರ್ಪಡೆ
- ಕೆಪಿಸಿಸಿ ಅಧ್ಯಕ್ಷ
- ಡಿ. ಕೆ. ಶಿವಕುಮಾರ್
- ಬಿಜೆಪಿ ಜೆಡಿಎಸ್ ನಾಯಕರು
- ಬೆಂಗಳೂರು ರಾಜಕೀಯ
- ಮಲ್ಲಿಕಾರ್ಜುನ ಖರ್ಗೆ
- ರಾಹುಲ್ ಗಾಂಧಿ
- ಸಿದ್ಧರಾಮಯ್ಯ





Leave a comment