ಮೈಸೂರು: ಜಿಲ್ಲೆಯ ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಯ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹಾಗೂ ಸಂಘಟಕರ ನಡುವೆ ಉಂಟಾಗಿದ್ದ ಸಂಘರ್ಷ, ಈಗ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ನಡುವಿನ ತೀವ್ರ ವಾಗ್ದಾಳಿಗೆ ಕಾರಣವಾಗಿದೆ.
ಪ್ರತಾಪ್ ಸಿಂಹ ತಿರುಗೇಟು ಮತ್ತು ರಾಜಕೀಯ ಸಮರ
ಟಿ. ನರಸೀಪುರ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ಅವರು ಗಣೇಶೋತ್ಸವ ಪ್ರತಿಷ್ಠಾಪನೆ ಮಾಡುವ ಯುವಕರಿಗೆ “ಮಸೀದಿ ಮುಂದೆ ಮೆರವಣಿಗೆ ಹಾಗೂ ಪಟಾಕಿ ಸಿಡಿಸಬಾರದು” ಎಂದು ಎಚ್ಚರಿಕೆ ನೀಡಿದ್ದ ವಿಡಿಯೋ ವೈರಲ್ ಆಗಿತ್ತು. ಇದನ್ನು ಪ್ರಶ್ನಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ, ಪೊಲೀಸರ ದರ್ಪವನ್ನು ಸಹಿಸುವುದಿಲ್ಲವೆಂದು ಎಚ್ಚರಿಸಿ ಠಾಣೆಗೆ ನುಗ್ಗುವುದಾಗಿ ಹೇಳಿಕೆ ನೀಡಿದ್ದರು.
ಇದಕ್ಕೆ ಸಾಮಾಜಿಕ ಜಾಲತಾಣ ‘X’ ನಲ್ಲಿ ಪ್ರತಿಕ್ರಿಯಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನು ಕಾಯುವ ಪೊಲೀಸರಿಗೆ ಬೆದರಿಕೆ ಹಾಕುವವರನ್ನು ‘ಪೇಟೆ ರೌಡಿ’ ಎಂದು ಪರೋಕ್ಷವಾಗಿ ಉಲ್ಲೇಖಿಸಿ, ಠಾಣೆಗೆ ನುಗ್ಗಿದರೆ ಸೀದಾ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವ ಉಚಿತ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸವಾಲು ಹಾಕಿದ್ದರು.
ಈ ಬೆದರಿಕೆಗೆ ಖಡಕ್ ತಿರುಗೇಟು ನೀಡಿರುವ ಪ್ರತಾಪ್ ಸಿಂಹ:
21 FIR ಹೆದರಿಕೆಯಿಲ್ಲ: “ನನ್ನ ಮೇಲೆ ಈಗಾಗಲೇ 21 FIRಗಳಿವೆ, ಇನ್ನೊಂದು ಕೇಸ್ ಹಾಕಿದರೂ ತಲೆಕೆಡಿಸಿಕೊಳ್ಳುವುದಿಲ್ಲ. ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಜೈಲಿಗೆ ಹೋಗಲು ಸಿದ್ಧ” ಎಂದು ಸವಾಲೆಸೆದಿದ್ದಾರೆ.
KPSC ಹಗರಣದ ವ್ಯಂಗ್ಯ: “ಎಚ್.ಡಿ. ಕುಮಾರಸ್ವಾಮಿ ಅವರು KPSC ಹಗರಣದ ಬಗ್ಗೆ ಮಾತನಾಡಿದ ಮೇಲಿಂದ ಪ್ರಿಯಾಂಕ್ ಖರ್ಗೆ ಅವರಿಗೆ ಕನಸಿನಲ್ಲೂ ಪರಪ್ಪನ ಅಗ್ರಹಾರವೇ ಕಾಣಿಸುತ್ತಿದೆ. ತನಿಖೆ ಚುರುಕುಗೊಂಡರೆ ಅವರೇ ಜೈಲು ಸೇರುವ ಸ್ಥಿತಿ ಬರಲಿದೆ” ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಹಿಂದಿನ ಪ್ರಕರಣಗಳ ನೆನಪು: DJ ಹಳ್ಳಿ ಮತ್ತು KJ ಹಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರ ಮೇಲಿನ ಕೇಸ್ಗಳನ್ನು ವಾಪಸ್ ಪಡೆದ ಸರ್ಕಾರ, ಧಾರ್ಮಿಕ ಹಬ್ಬ ಆಚರಿಸುವ ಯುವಕರಿಗೆ ಜೈಲು ಬೆದರಿಕೆ ಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.
ಸ್ಥಳೀಯ ಯುವಕರಲ್ಲಿನ ಭೀತಿಯನ್ನು ಹೋಗಲಾಡಿಸಲು ಮತ್ತು ಇನ್ಸ್ಪೆಕ್ಟರ್ ಧನಂಜಯ್ ಅವರಿಗೆ ಸೂಕ್ತ ಕಾನೂನು ಸ್ಪಷ್ಟನೆ ನೀಡಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟಿ. ನರಸೀಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.





Leave a comment