Home ದಾವಣಗೆರೆ ಕರ್ನಾಟಕದಲ್ಲಿ ಪೊಲೀಸ್ ವ್ಯವಸ್ಥೆ ಕಂಪ್ಲೀಟ್ ಚೇಂಜ್: ಸುಧಾರಣೆಗಾಗಿ ಹಿರಿಯ ಅಧಿಕಾರಿಗಳ ಸಮಿತಿ ರಚನೆ!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ಕರ್ನಾಟಕದಲ್ಲಿ ಪೊಲೀಸ್ ವ್ಯವಸ್ಥೆ ಕಂಪ್ಲೀಟ್ ಚೇಂಜ್: ಸುಧಾರಣೆಗಾಗಿ ಹಿರಿಯ ಅಧಿಕಾರಿಗಳ ಸಮಿತಿ ರಚನೆ!

Share
ಪೊಲೀಸ್
Share

ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಪೊಲೀಸ್ ಸೇವೆಗಳ ಗುಣಮಟ್ಟವನ್ನು ಸಮಗ್ರವಾಗಿ ಪರಿಶೀಲಿಸಿ, ಅವುಗಳನ್ನು ಇನ್ನಷ್ಟು ಪರಿಣಾಮಕಾರಿ, ತ್ವರಿತ, ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಸಮಗ್ರ ಪೊಲೀಸ್ ಸೇವೆಗಳ ಸುಧಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಎಫ್‌ಐಆರ್ ದಾಖಲಿಸುವುದು, ದೂರು ಸ್ವೀಕರಿಸುವುದು, ಪೊಲೀಸ್ ಠಾಣೆಗಳ ಕಾರ್ಯವೈಖರಿ, ತುರ್ತು ಸೇವೆಗಳು, ಕಳೆದುಹೋದ ವಸ್ತುಗಳ ವರದಿ, ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳು, ಅನುಮತಿಗಳು, ಪ್ರಮಾಣಪತ್ರಗಳು ಸೇರಿದಂತೆ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ವಿವಿಧ ಆನ್‌ಲೈನ್ ಹಾಗೂ ನೇರ ಸೇವೆಗಳು ಲಭ್ಯವಿವೆ. ಈ ಸೇವೆಗಳ ಗುಣಮಟ್ಟ, ಲಭ್ಯತೆ, ಸಮಯಬದ್ಧತೆ ಮತ್ತು ಜನರಿಗೆ ಆಗುತ್ತಿರುವ ಅನುಕೂಲವನ್ನು ಸಮಗ್ರವಾಗಿ ಪರಿಶೀಲಿಸಿ ಮತ್ತಷ್ಟು ಸುಧಾರಿಸುವ ಅಗತ್ಯವಿದೆ.

ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ವಿವಿಧ ಪೊಲೀಸ್ ಸೇವೆಗಳ ಸಮಗ್ರ ಪರಿಶೀಲನೆ ನಡೆಸಿ, ಅವುಗಳನ್ನು ಹೆಚ್ಚು ಪರಿಣಾಮಕಾರಿ, ಪಾರದರ್ಶಕ, ಜನಸ್ನೇಹಿ ಹಾಗೂ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಾಗಿ ರೂಪಿಸುವ ಕುರಿತು ಸಮಿತಿ ಅಧ್ಯಯನ ನಡೆಸಲಿದೆ.

ಮುಖ್ಯಾಂಶಗಳು:

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳು, ಪ್ರಸ್ತುತ ವ್ಯವಸ್ಥೆಯಲ್ಲಿರುವ ಕೊರತೆಗಳು ಹಾಗೂ ಅವುಗಳಿಗೆ ಅಗತ್ಯವಿರುವ ಸಾಂಸ್ಥಿಕ ಮತ್ತು ತಾಂತ್ರಿಕ ಪರಿಹಾರಗಳನ್ನು ಸಮಿತಿ ಪರಿಶೀಲಿಸಲಿದೆ.

ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ನೇರ ಸಂವಹನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಮುದಾಯ ಆಧಾರಿತ ಪೊಲೀಸ್ ವ್ಯವಸ್ಥೆಯನ್ನು ಸಮಿತಿ ಪರಿಶೀಲಿಸಲಿದೆ.

ಪೊಲೀಸ್ ಠಾಣೆಗಳ ಮೂಲಸೌಕರ್ಯ ಹಾಗೂ ಇತರ ಅಗತ್ಯ ಸೌಲಭ್ಯಗಳನ್ನು ಬಲಪಡಿಸುವುದು, ಪೊಲೀಸ್ ಸಿಬ್ಬಂದಿಯ ಸಂಖ್ಯೆಯನ್ನು ಜನಸಂಖ್ಯೆ ಮತ್ತು ಸೇವಾ ಅಗತ್ಯಗಳಿಗೆ ಅನುಗುಣವಾಗಿ ಪರಿಗಣಿಸುವುದು ಹಾಗೂ ಅಗತ್ಯ ಆಧಾರಿತ ವ್ಯವಸ್ಥೆ ರೂಪಿಸುವ ಕುರಿತೂ ಸಮಿತಿ ಗಮನಹರಿಸಲಿದೆ.

ಪೊಲೀಸ್ ಸಿಬ್ಬಂದಿಗೆ ನಿಯಮಿತ ತರಬೇತಿ ನೀಡುವುದು ಹಾಗೂ ಅವರ ಕಾರ್ಯಕ್ಷಮತೆ ಹೆಚ್ಚಿಸಲು ಅಗತ್ಯವಿರುವ ಕ್ರಮಗಳನ್ನು ಪರಿಶೀಲಿಸಲಾಗುವುದು. ಪೊಲೀಸ್ ಸೇವೆಗಳ ಗುಣಮಟ್ಟವನ್ನು ಅಳೆಯಲು ಪ್ರಮುಖ ಕಾರ್ಯಕ್ಷಮತಾ ಸೂಚ್ಯಂಕಗಳು (KPI) ಹಾಗೂ ನಿಯಮಿತ ಪರಿಶೀಲನಾ ವ್ಯವಸ್ಥೆಯನ್ನು ರೂಪಿಸುವ ಕುರಿತು ಸಮಿತಿ ಶಿಫಾರಸು ಮಾಡಲಿದೆ.

ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಒದಗಿಸಲಾಗುವ ಸೇವೆಗಳಿಗೆ ಸ್ಪಷ್ಟವಾದ ಮಾನದಂಡಗಳನ್ನು ನಿಗದಿಪಡಿಸುವ ಉದ್ದೇಶದಿಂದ ಸಿಟಿಜನ್ ಚಾರ್ಟರ್ ರೂಪಿಸುವ ಕುರಿತು ಸಮಿತಿ ಪರಿಶೀಲಿಸಲಿದೆ. ಇದರಿಂದ ಯಾವ ಸೇವೆ ಎಷ್ಟು ಸಮಯದಲ್ಲಿ ಮತ್ತು ಯಾವ ಪ್ರಕ್ರಿಯೆಯ ಮೂಲಕ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂಬುದಕ್ಕೆ ಸ್ಪಷ್ಟತೆ ದೊರೆಯಲಿದೆ.

ನಿವೃತ್ತ ಮತ್ತು ಹಾಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಸಮಿತಿಯು ಮೇಲ್ಕಂಡ ಎಲ್ಲ ಅಂಶಗಳ ಕುರಿತು ಸಮಗ್ರ ಅಧ್ಯಯನ ನಡೆಸಿ, ಅಗತ್ಯ ಶಿಫಾರಸುಗಳೊಂದಿಗೆ ಎರಡು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಪೊಲೀಸ್ ವ್ಯವಸ್ಥೆಯ ಸುಧಾರಣೆ ಎಂದರೆ ಕೇವಲ ಪೊಲೀಸ್ ಇಲಾಖೆಯ ಆಂತರಿಕ ಬದಲಾವಣೆ ಮಾತ್ರವಲ್ಲ. ಅದು ಸಾರ್ವಜನಿಕರಿಗೆ ದೊರೆಯುವ ಸೇವೆಯ ಗುಣಮಟ್ಟದ ಸುಧಾರಣೆಯೂ ಆಗಿದೆ. ಜನರ ನಿರೀಕ್ಷೆಗಳಿಗೆ ಸ್ಪಂದಿಸುವ, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮತ್ತು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವ ಪೊಲೀಸ್ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಸಮಿತಿಯ ಶಿಫಾರಸುಗಳು ಮಹತ್ವದ ಆಧಾರವಾಗಲಿವೆ ಎಂದು ಮಾಹಿತಿ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles