Home ದಾವಣಗೆರೆ ಮತದಾರರ ಹಕ್ಕು ಕಸಿಯುವ ಹುನ್ನಾರ? ದಾವಣಗೆರೆಯಲ್ಲಿ 2 ಲಕ್ಷ ಹೆಸರು ಗಾಯಬ್: ಡಾ. ಪ್ರಭಾ ಮಲ್ಲಿಕಾರ್ಜುನ್ ಗಂಭೀರ ಆರೋಪ!
ದಾವಣಗೆರೆ

ಮತದಾರರ ಹಕ್ಕು ಕಸಿಯುವ ಹುನ್ನಾರ? ದಾವಣಗೆರೆಯಲ್ಲಿ 2 ಲಕ್ಷ ಹೆಸರು ಗಾಯಬ್: ಡಾ. ಪ್ರಭಾ ಮಲ್ಲಿಕಾರ್ಜುನ್ ಗಂಭೀರ ಆರೋಪ!

Share
ದಾವಣಗೆರೆ
Share

ದಾವಣಗೆರೆ: ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕಪ್ಪುಪಟ್ಟಿ ಧರಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಬೆನ್ನೆಲುಬಾಗಿರುವ ಸ್ವತಂತ್ರ ಸಂಸ್ಥೆಯಾಗಿದೆ. ಅದರ ನಿಷ್ಪಕ್ಷಪಾತತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾದಾಗ, ಅದನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ರಕ್ಷಣೆಯ ಭಾಗವಾಗಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ಅತ್ಯಂತ ಶಕ್ತಿಶಾಲಿ ಹಕ್ಕಾಗಿದೆ. ಆದರೆ, ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂಬ ಆರೋಪಗಳು ಗಂಭೀರ ಆತಂಕವನ್ನು ಮೂಡಿಸಿವೆ. ಈ ಕುರಿತು ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದರು.

ದೇಶಾದ್ಯಂತ ಸುಮಾರು 13 ಕೋಟಿ, ಕರ್ನಾಟಕದಲ್ಲಿ 1 ಕೋಟಿ 7 ಲಕ್ಷ ಹಾಗೂ ದಾವಣಗೆರೆ ಜಿಲ್ಲೆಯಲ್ಲಿಯೇ ಸುಮಾರು 2 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪಗಳ ಕುರಿತು ಮಾತನಾಡಿದ ಅವರು, ಮತದಾರರ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಸಮುದಾಯ ಅಥವಾ ಪ್ರದೇಶದ ಜನರು ಅನ್ಯಾಯಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ ಎಂದರು.

ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ ಕುರಿತು ವ್ಯಕ್ತವಾಗಿರುವ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕು ಹಾಗೂ ಈ ಬೆಳವಣಿಗೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಒತ್ತಾಯಿಸಿದರು.

ಸೆಪ್ಟೆಂಬರ್ 30ರಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಸಭೆ ನಡೆಯಲಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟವನ್ನು ರೂಪಿಸಲಾಗುವುದು. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮತದಾನದ ಹಕ್ಕಿನ ರಕ್ಷಣೆಗಾಗಿ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಮರ್ಥ್‌ ಶಾಮನೂರು ಮಾತನಾಡಿ ಎಸ್‌ ಐಆರ್‌ ಪ್ರಕ್ರಿಯೆಯಿಂದ ಜನಸಾಮಾನ್ಯರಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ. ಚುನಾವಣಾ ಅಧಿಕಾರಿಗಳು ಬಂದಾಗ ಜನರು ಆತಂಕದಿಂದ ದೂರ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಸ್‌ ಐಆರ್ ಪ್ರಕ್ರಿಯೆಯಿಂದ ನನ್ನ ರೇಷನ್ ಕಾರ್ಡ್ ಹೋಗಬಹುದೇ?, ನನ್ನ ಮತದಾನದ ಹಕ್ಕು ಕಳೆದುಹೋಗಬಹುದೇ?, ‘ಸರ್ಕಾರದ ಯೋಜನೆಗಳು ನಿಲ್ಲಬಹುದೇ? ಎಂಬ ಭಯ ಜನರಲ್ಲಿ ಮೂಡಿತ್ತು ಎಂದು ಹೇಳಿದರು.

ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪಗಳ ಕುರಿತು ಮಾತನಾಡಿದ ಅವರು, ಜನರ ಮತದಾನದ ಹಕ್ಕು ಮತ್ತು ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗೆ ಪಾರದರ್ಶಕ ವ್ಯವಸ್ಥೆ ಅಗತ್ಯವಿದೆ. ಈ ವಿಚಾರದಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿ ಹೋರಾಟ ನಡೆಸಬೇಕು ಎಂದರು.

ಸಂವಿಧಾನವನ್ನು ರಕ್ಷಿಸಬೇಕಾದ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು. ಯಾವುದೇ ಸಂಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇದು ಯಾವುದೇ ಒಂದು ಪಕ್ಷದ ಹೋರಾಟವಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳ ರಕ್ಷಣೆಗೆ ನಡೆಯುತ್ತಿರುವ ಹೋರಾಟವಾಗಿದೆ. ಎಲ್ಲಾ ಪಕ್ಷಗಳು ಹಾಗೂ ಸಂವಿಧಾನದ ಮೇಲೆ ನಂಬಿಕೆ ಇರುವವರು ಒಂದಾಗಿ ಹೋರಾಡಬೇಕಿದೆ ಎಂದು ಅವರು ಕರೆ ನೀಡಿದರು.

ಹಿಂದೆಯೂ ನೀಟ್ ಸೇರಿದಂತೆ ಹಲವು ಜನಪರ ವಿಚಾರಗಳಲ್ಲಿ ನಡೆದ ಹೋರಾಟಗಳು ಪರಿಣಾಮ ಬೀರಿವೆ. ಜನರ ಧ್ವನಿ ಒಗ್ಗಟ್ಟಾಗಿ ಕೇಳಿಸಿದಾಗ ಸರ್ಕಾರಗಳು ಸ್ಪಂದಿಸಬೇಕಾಗುತ್ತದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಶಾಸಕ ಸಮರ್ಥ್ ಶಾಮನೂರು ಹೇಳಿದರು.

ಪ್ರತಿಭಟನೆಯಲ್ಲಿ ಶಾಸಕ ಸಮರ್ಥ್ ಶಾಮನೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ ಖಲೀಲ್‌ ಉಲ್ಲಾ, ಮುಖಂಡರುಗಳಾದ ಡಿ.ಬಸವರಾಜ್,ಕೆ.ಜಿ ಶಿವಕುಮಾರ್‌,ಮಾಗಾನಹಳ್ಳಿ ಪರಶುರಾಮ್‌, ಹದಡಿ ನಿಂಗಪ್ಪ,ಕೆ.ಚಮನ್‌ ಸಾಬ್, ಸಯೀದ್‌ ಚಾರ್ಲಿ, ಕೆ.ಪಿ ಪಾಲಯ್ಯ, ಮಹಿಳಾ ಮುಖಂಡರು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles