ದಾವಣಗೆರೆ: ಅನೇಕ ವರ್ಷಗಳಿಂದ ಕಗ್ಗಂಟಾಗಿ ಕಾಡುತ್ತಾ ಬಂದಿದ್ದ ದಯಾಮರಣ ಕಾನೂನು ಐತಿಹಾಸಿಕ ಮಹತ್ವದ ತೀರ್ಪಿನೊಂದಿಗೆ 2018ರಲ್ಲಿ ದೇಶಕ್ಕೆ ಕಾಲಿಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈಗ ರಾಜ್ಯ ಸರ್ಕಾರ ಈ ಮಹತ್ವದ ಕಾನೂನು ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿದ್ದು, ದೇಶದಲ್ಲೇ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕಿದೆ ಎಂದು ದಯಾಮರಣ ಹೋರಾಟಗಾರ್ತಿ ಹೆಚ್.ಬಿ. ಕರಿಬಸಮ್ಮ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಣಬಲ ಹಾಗೂ ಜನಬಲವಿಲ್ಲದೆ, ವಯೋವೃದ್ಧರು ನಾನಾ ಬಗೆಯ ರೋಗಗಳಿಂದ ನರಳುತ್ತಾ ಸಾವಿಗಾಗಿ ಹಪಹಪಿಸುತ್ತಾ ಶೋಚನೀಯ ಅವಸ್ಥೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವವರು ವೈದ್ಯರ ಪ್ರಮಾಣಪತ್ರ ಪಡೆದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಬಳಿಕ ಕೋರ್ಟ್ ಸೂಚಿಸಿದ ಆಸ್ಪತ್ರೆಗೆ ದಾಖಲಾಗಿ ದಯಾಮರಣಕ್ಕೆ ಒಳಪಡಬಹುದು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಬಹುತೇಕ ಜನರಿಗೆ ಈ ಕಾನೂನಿನ ಲಭ್ಯತೆ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಮಾಹಿತಿ ತಿಳಿದವರು ಅಸಹಾಯಕ ಜನರಿಗೆ ಈ ಬಗ್ಗೆ ತಿಳಿಸಬೇಕು. ಭಾರತ ಹಳ್ಳಿಗಳ ದೇಶವಾಗಿದ್ದು, ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒಗಳು ಹಾಗೂ ಆಶಾ ಕಾರ್ಯಕರ್ತೆಯರು ಈ ಕಾಯ್ದೆ ಬಗ್ಗೆ ಮೊದಲು ತಾವು ಅರಿತುಕೊಂಡು, ನಂತರ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇದೇ ವೇಳೆ ಸರ್ಕಾರಕ್ಕೆ ವಿಶೇಷ ಮನವಿ ಸಲ್ಲಿಸಿರುವ ಅವರು, ದಯಾಮರಣ ಕಾನೂನಿನ ವಿಧಿವಿಧಾನಗಳನ್ನು ಜನಸಾಮಾನ್ಯರಿಗೂ ಸರಳವಾಗಿ ಅರ್ಥವಾಗುವಂತೆ ಸರ್ಕಾರ ಕೂಡಲೇ ಪ್ರಚಾರ ಮಾಡಬೇಕು. ಈ ಪ್ರಕ್ರಿಯೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತವಾಗಿ ಅಥವಾ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಬೇಕು. ಇದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವಂತಿರಬೇಕು. ವಯೋವೃದ್ಧರು ಕ್ಷಣಕ್ಷಣಕ್ಕೂ ಯಾತನೆಯಿಂದ ನರಳುತ್ತಿರುತ್ತಾರೆ. ಇಂತಹವರ ನೋವಿಗೆ ಸರ್ಕಾರ ಮಿಡಿಯಬೇಕೇ ಹೊರತು, ಅವರ ಶಾಪಕ್ಕೆ ಗುರಿಯಾಗಬಾರದು ಎಂದಿದ್ದಾರೆ.
ಇಂದಿನ ದಿನಗಳಲ್ಲಿ ವೈದ್ಯಕೀಯ ವೆಚ್ಚ ಗಗನಕ್ಕೇರಿದ್ದು, ಬದುಕು ಅಸಹನೀಯವಾಗಿ ಜೀವಿಸುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿರುವ ಹೈಕೋರ್ಟ್‌ಗೆ ಅಲೆದು ದಯಾಮರಣಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಅತ್ಯಂತ ದುಬಾರಿ ಹಾಗೂ ಕಷ್ಟದ ಕೆಲಸ. ಆದ್ದರಿಂದ ಸರ್ಕಾರ ಕೋರ್ಟ್ ಕಟ್ಟಳೆಗಳಿಗೆ ಅನುಗುಣವಾಗಿ ದಾವಣಗೆರೆಯಲ್ಲೇ ಪ್ರತ್ಯೇಕ ಕೋರ್ಟ್ ಅಥವಾ ಪೀಠ ಸ್ಥಾಪನೆ ಮಾಡಿದರೆ ಮಧ್ಯ ಕರ್ನಾಟಕದ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುತ್ತದೆ. ಈಗಾಗಲೇ ದಾವಣಗೆರೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಮಾಡುವಂತೆ ಅನೇಕರು ಒತ್ತಾಯಿಸುತ್ತಿದ್ದಾರೆ. ಸರ್ಕಾರವು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಯೋವೃದ್ಧರು ನರಕಯಾತನೆ ಅನುಭವಿಸುತ್ತಾ ಸಾವಿನ ಕದ ತಟ್ಟುತ್ತಿದ್ದಾರೆ. ಸರ್ಕಾರ ಇಂತಹವರ ಬಗ್ಗೆ ಕನಿಕರ ತೋರಬೇಕು. ಅವರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಟ್ಟು ಗೌರವಯುತ ಮುಕ್ತಿಯ ಮಾರ್ಗ ತೋರಿಸಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಹೆಚ್.ಬಿ. ಕರಿಬಸಮ್ಮ ಪ್ರಾರ್ಥಿಸಿದ್ದಾರೆ.
- Asha workers
- DAVANAGERE NEWS
- Euthanasia law India
- Gram Panchayat awareness
- HB Karibasamma
- High Court bench Davanagere
- Passive Euthanasia Karnataka
- Right to die with dignity
- Senior citizens healthcare
- ಆಶಾ ಕಾರ್ಯಕರ್ತೆಯರು
- ಕರ್ನಾಟಕ ದಯಾಮರಣ ಕಾಯ್ದೆ
- ಗೌರವಯುತ ಮುಕ್ತಿ
- ಗ್ರಾಮ ಪಂಚಾಯಿತಿ ಜಾಗೃತಿ
- ದಯಾಮರಣ ಕಾನೂನು
- ದಾವಣಗೆರೆ ಸುದ್ದಿ
- ವಯೋವೃದ್ಧರ ಆರೋಗ್ಯ
- ಹೆಚ್ ಬಿ ಕರಿಬಸಮ್ಮ
- ಹೈಕೋರ್ಟ್ ಸಂಚಾರಿ ಪೀಠ





Leave a comment