ನವದೆಹಲಿ: ಭಾರತದಲ್ಲಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದರೂ, ಮನೆ ಹಾಗೂ ಕೌಟುಂಬಿಕ ಜವಾಬ್ದಾರಿಗಳ ಹಂಚಿಕೆಯಲ್ಲಿ ಇಂದಿಗೂ ತೀವ್ರ ಲಿಂಗ ತಾರತಮ್ಯ ಮುಂದುವರಿದಿದೆ ಎಂದು ಇಕ್ರೀಡ್ (ICRIER – Indian Council for Research on International Economic Relations) ಸಂಸ್ಥೆಯ ಇತ್ತೀಚಿನ ‘ದಿ ಪಾರ್ಟಿಸಿಪೇಷನ್ ಪ್ಯಾರಡಾಕ್ಸ್’ (The Participation Paradox) ವರದಿ ಬಹಿರಂಗಪಡಿಸಿದೆ.
ದೇಶದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ 2017-18ರಲ್ಲಿ 10.4 ಕೋಟಿಯಷ್ಟಿದ್ದರೆ, 2025ರ ವೇಳೆಗೆ 20.1 ಕೋಟಿಗೆ ದ್ವಿಗುಣಗೊಂಡಿದೆ. ಆದರೆ, ಕಚೇರಿಯ ಕೆಲಸ ಮುಗಿಸಿ ಮನೆಗೆ ಬಂದರೂ ಮಹಿಳೆಯರಿಗೆ ವಿಶ್ರಾಂತಿ ಸಿಗುವುದಿಲ್ಲ. ಮನೆಯ ಮತ್ತೊಂದು ಪಾಳಿಯ ಕೆಲಸಗಳು (Second Shift) ಅವರನ್ನೇ ಕಾಯುತ್ತಿರುತ್ತವೆ. ವರದಿಯ ಪ್ರಕಾರ, ಭಾರತೀಯ ಮಹಿಳೆಯರು ಪ್ರತಿದಿನ ಸರಾಸರಿ 464 ನಿಮಿಷಗಳನ್ನು (ಸುಮಾರು 8 ಗಂಟೆ) ಮನೆಕೆಲಸಕ್ಕಾಗಿ ವ್ಯಯಿಸುತ್ತಿದ್ದರೆ, ಪುರುಷರು ಕೇವಲ 178 ನಿಮಿಷಗಳನ್ನು ಮಾತ್ರ ಮೀಸಲಿಡುತ್ತಿದ್ದಾರೆ. ಅಂದರೆ ಮಹಿಳೆಯರು ಪುರುಷರಿಗಿಂತ ಪ್ರತಿದಿನ ಸುಮಾರು 5 ಗಂಟೆಗಳಷ್ಟು ಹೆಚ್ಚು ಸಮಯವನ್ನು ಕೇವಲ ಮನೆಕೆಲಸಕ್ಕಾಗಿಯೇ ಕಳೆಯುತ್ತಿದ್ದಾರೆ.
ಉದ್ಯೋಗ vs ಮನೆಕೆಲಸ: ಮಹಿಳೆಯರು ಆರ್ಥಿಕವಾಗಿ ದುಡಿದು ಮನೆಗೆ ಹಣ ಸಂಪಾದಿಸಿ ತರುತ್ತಿದ್ದರೂ, ಅಡುಗೆ ಮಾಡುವುದು, ಮಕ್ಕಳ ಆರೈಕೆ ಹಾಗೂ ಮನೆ ನಿರ್ವಹಣೆಯ ಬಹುಪಾಲು ಭಾರ ಅವರ ಮೇಲೆಯೇ ಬೀಳುತ್ತಿದೆ.
ಮಾನಸಿಕ ಒತ್ತಡ: ಕೇವಲ ದೈಹಿಕ ಕೆಲಸ ಮಾತ್ರವಲ್ಲದೆ, ಮಕ್ಕಳ ಲಸಿಕೆ ದಿನಾಂಕ ನೆನಪಿಟ್ಟುಕೊಳ್ಳುವುದು, ಶಾಲೆ ಚಟುವಟಿಕೆಗಳು, ಅಡುಗೆಗೆ ಬೇಕಾದ ಸಾಮಾಗ್ರಿಗಳ ಪಟ್ಟಿ ಮಾಡುವುದು ಮುಂತಾದ ‘ಮಾನಸಿಕ ಹೊರೆ’ಯನ್ನು ಮಹಿಳೆಯರೇ ಏಕಾಂಗಿಯಾಗಿ ನಿರ್ವಹಿಸಬೇಕಾಗಿದೆ.
ಸಾಂಪ್ರದಾಯಿಕ ಮನಸ್ಥಿತಿ ಬದಲಾವಣೆ ಅಗತ್ಯ: ಸಮಾಜದಲ್ಲಿ ಗಂಡು ಮಕ್ಕಳನ್ನು ಬೆಳೆಸುವ ರೀತಿಯೇ ತಪ್ಪಾಗಿದ್ದು, ಮನೆಕೆಲಸಗಳು ಕೇವಲ ಹೆಣ್ಣುಮಕ್ಕಳ ಜವಾಬ್ದಾರಿಯಲ್ಲ ಎಂಬುದನ್ನು ಬಾಲ್ಯದಿಂದಲೇ ಕಲಿಸಬೇಕಾದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಗರ ಪ್ರದೇಶಗಳಲ್ಲಿ ಅಡುಗೆಯವರು ಅಥವಾ ಮನೆಗೆಲಸದ ಸಹಾಯಕರಿದ್ದರೂ, ಅವರ ಕೆಲಸವನ್ನು ನಿರ್ವಹಿಸುವುದು ಮತ್ತು ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯೂ ಮಹಿಳೆಯರ ಮೇಲೆಯೇ ಉಳಿದಿದೆ. ಇಂದಿನ ಆಧುನಿಕ ಯುಗದಲ್ಲಿಯೂ ದಂಪತಿಗಳು ಮನೆಕೆಲಸಗಳನ್ನು ಸಮಾನವಾಗಿ ಹಂಚಿಕೊಳ್ಳುವ ಅರಿವು ಮೂಡಬೇಕಿದೆ ಎಂಬ ಚರ್ಚೆ ಈ ವರದಿಯ ಮೂಲಕ ಮುನ್ನೆಲೆಗೆ ಬಂದಿದೆ.





Leave a comment