ಗ್ರೇಟರ್ ನೋಯ್ಡಾ: ಹಲ್ದೋನಿ ಗ್ರಾಮದಲ್ಲಿ ನಾಪತ್ತೆಯಾಗಿದ್ದ 6 ವರ್ಷದ ಬಾಲಕಿಯನ್ನು ಅಪಹರಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಆಗಸ್ಟ್ 28 ರಂದು ನಾಪತ್ತೆಯಾಗಿದ್ದ ಬಾಲಕಿಯ ಶವವನ್ನು ಪೊಲೀಸರು ಗೋಣಿಚೀಲವೊಂದರಲ್ಲಿ ಪತ್ತೆ ಹಚ್ಚಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಬಂಧಿಸಲಾಗಿದ್ದ ಪ್ರಮುಖ ಆರೋಪಿ ಬಲರಾಜ್‌ನನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಆಗಸ್ಟ್ 28ರಂದು ಬಾಲಕಿ ನಾಪತ್ತೆಯಾದ ಬಳಿಕ ಆಕೆಯ ಪೋಷಕರು ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ, ಆರೋಪಿ ಬಲರಾಜ್ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು, ನಂತರ ಆಕೆಯನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಹೊಲದತ್ತ ಹೊತ್ತೊಯ್ಯುತ್ತಿರುವ ದೃಶ್ಯ ಸೆರೆಯಾಗಿತ್ತು.
ಪೊಲೀಸ್ ಎನ್‌ಕೌಂಟರ್‌ನಲ್ಲಿ ಆರೋಪಿ ಹತ್ಯೆ
ಆಗಸ್ಟ್ 29ರಂದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಕೊಲೆಗೆ ಬಳಸಿದ ಚಾಕುವನ್ನು ಡಿ-ಪಾರ್ಕ್ ಪೊಲೀಸ್ ಚೌಕಿ ಬಳಿಯ ಪೊದೆಯಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದ. ಚಾಕು ವಶಪಡಿಸಿಕೊಳ್ಳಲು ಎಕೋ-ಟೆಕ್ 3 ಠಾಣೆಯ ಪೊಲೀಸರು ಆತನನ್ನು ಸ್ಥಳಕ್ಕೆ ಕರೆದೊಯ್ದಾಗ, ಪೊದೆಯಲ್ಲಿ ಬಚ್ಚಿಟ್ಟಿದ್ದ .32-ಬೋರ್ ಪಿಸ್ತೂಲ್‌ನಿಂದ ಆತ ಪೊಲೀಸರ ಮೇಲೆ ದಿಢೀರ್ ಗುಂಡು ಹಾರಿಸಿದ್ದಾನೆ. ಈ ವೇಳೆ ಹೆಡ್ ಕಾನ್ಸ್‌ಟೇಬಲ್ ರವಿ ಕುಮಾರ್ ಎಂಬುವವರಿಗೆ ಗಾಯವಾಗಿದೆ. ಕೂಡಲೇ ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆರೋಪಿ ಬಲರಾಜ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಮರಣೋತ್ತರ ಪರೀಕ್ಷೆ ವರದಿ ನಿರೀಕ್ಷೆ
ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವೈದ್ಯರ ತಂಡ ವೀಡಿಯೋಗ್ರಫಿ ಮೂಲಕ ಪರೀಕ್ಷೆ ನಡೆಸುತ್ತಿದೆ. ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಹಾಗೂ ಕುಟುಂಬಸ್ಥರು ಮಾಡಿರುವ ಅತ್ಯಾಚಾರದ ಆರೋಪದ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿಗೆ ನ್ಯಾಯ ಒದಗಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.





Leave a comment