SUDDIKSHANA KANNADA NEWS/ DAVANAGERE/ DATE:12-07-2024
ದಾವಣಗೆರೆ: ಮುಡಾ ಹಗರಣ ಸಿಬಿಐ ತನಿಖೆಗೆ ಒಪ್ಪಿಸಬೇಕು. ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಆಗ್ರಹಿಸಿದರು.
ಜಿಎಂಐಟಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ನಡೆದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯವರು ಪತ್ನಿ ಪಾರ್ವತಮ್ಮ ಅವರ ಮೂಲಕ ಹಗರಣದಲ್ಲಿ ಭಾಗಿಯಾಗಿದ್ದಾರೆ. ಮೂಡಾ ಅವ್ಯವಹಾರದಲ್ಲಿ ಸುಮಾರು 5 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ನಿವೇಶನಗಳ ಅಕ್ರಮ ಹಂಚಿಕೆಯಾಗಿವೆ ಎಂದು ಆರೋಪಿಸಿದರು.
ಮೂಡಾ ಅಷ್ಟೇ ಅಲ್ಲ, ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇದೇ ರೀತಿ ಹಗರಣಗಳು ನಡೆದಿವೆ. ಈ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬಡವರ ಬಗ್ಗೆ ಸಿದ್ದರಾಮಯ್ಯರು ಮೊಸಳೆಕಣ್ಣೀರು ಹಾಕುತ್ತಾರೆ. ಬಡವರಿಗೆ- ಅರ್ಹರಿಗೆ ನಿವೇಶನ ಹಂಚಬೇಕಿತ್ತು. ಈಗಾಗಲೇ ನಡೆದ ನಿವೇಶನ ಹಂಚಿಕೆಯನ್ನು ರದ್ದು ಮಾಡಬೇಕು. ಸಿಎಂ, ಅವರ ಪತ್ನಿ ಮೇಲೆ ಆರೋಪ ಇರುವ ಕಾರಣ ಮತ್ತೊಂದು ಎಸ್ಐಟಿ ಮಾಡಿ ತನಿಖೆ ನಡೆಸುವುದು ಸೂಕ್ತವಲ್ಲ. ಈ ಭಾರೀ ಮೊತ್ತದ ಹಗರಣದ ತನಿಖೆಯನ್ನು ತಕ್ಷಣವೇ ಸಿಬಿಐಗೆ ಕೊಡಬೇಕು ಎಂದರು.
1992 ರಲ್ಲಿ ಭೂ ವಶಕ್ಕೆ ಪಡೆಯುವ ಕೆಲಸ ಶುರುವಾಗಿದೆ. 2004ರಲ್ಲಿ ಪಾರ್ವತಮ್ಮ ಅವರ ಅಣ್ಣ ಜಮೀನು ಖರೀದಿ ಮಾಡಿದ್ದಾರೆ. ಮೂಡಾ ಸ್ವಾಧೀನದಲ್ಲಿದ್ದ ಜಾಗವನ್ನು ಮಲ್ಲಿಕಾರ್ಜುನ ಸ್ವಾಮಿ ಅವರು ಖರೀದಿ ಮಾಡಿದ್ದು ಹೇಗೆ? 2009- 10ರಲ್ಲಿ ಗಿಫ್ಟ್ ಡೀಡ್ ಆದಾಗಲೂ ಸಹ ಈ ಜಾಗವು ಮೂಡಾ ಆರ್ಟಿಸಿಯಲ್ಲಿ ನಮೂದಾಗಿತ್ತು. ಭೂಮಿ ಖರೀದಿ ಆಗಿ ಕನ್ವರ್ಷನ್ ಆಗಿತ್ತು.ಗಿಫ್ಟ್ ಡೀಡ್ ಎಂದು ಮಾಹಿತಿ ಕೊಡುವಾಗಲೂ ಅದು ಕೃಷಿ ಭೂಮಿ ಆಗಿರಲಿಲ್ಲ. ಇದು ಕೂಡ ತಪ್ಪು ಮಾಹಿತಿ ಎಂದರು.ಮೂಡಾ ಪ್ರಾಧಿಕಾರದ ಭೂಮಿ ಸಂಬಂಧ ದೊಡ್ಡ ಹಗರಣ ಅಲ್ಲಿ ನಡೆದಿದೆ. ಮುಖ್ಯಮಂತ್ರಿಗಳ ಮುಖವಾಡ ಕಳಚಿಬಿದ್ದಿದೆ. ಹೇಗಾದರೂ ಬೆಲೆಬಾಳುವ ನಿವೇಶನ ಕಬಳಿಸಬೇಕು ಎಂದುಕೊಂಡು ನಿಯಮ ಗಾಳಿಗೆ ತೂರಿ ಅಕ್ರಮ ನಡೆಸಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಜನತೆಗೆ ಉತ್ತರಿಸಬೇಕು ಎಂದು ಹೇಳಿದರು.
ತನ್ನ ಪತ್ನಿಗೆ 2 ಕೋಟಿಗೂ ಹೆಚ್ಚು ಮೌಲ್ಯದ 14 ನಿವೇಶನಗಳನ್ನು ಪಡೆದಿದ್ದಾರೆ. 63-64 ಕೋಟಿಗೂ ಹೆಚ್ಚು ಬೆಲೆಯ ನಿವೇಶನ ಪಡೆದುದನ್ನು ರಾಜ್ಯದ ಜನರೂ ಪ್ರಶ್ನೆ ಮಾಡುತ್ತಿದ್ದಾರೆ.ತಮ್ಮ ಅವಧಿಯಲ್ಲಿ ಅವ್ಯವಹಾರ ನಡೆಸಿ, ತಾವೇ ಪರಿಹಾರ ಕೇಳಿರುವ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಮೈಸೂರಿನ ಕೆಸರೇ ಗ್ರಾಮದ 3.16 ಎಕರೆ ಜಮೀನಿಗೆ ಬದಲಾಗಿ ತಮ್ಮ ಪತ್ನಿಗೆ 14 ನಿವೇಶನ ಮಾಡಿಸಿಕೊಂಡಿದ್ದಾರೆ. ಅದರ ಬೆಲೆ 62 ಕೋಟಿ ಬರಬೇಕಿದ್ದು, 18 ಕೋಟಿಯ ನಿವೇಶನ ಪಡೆದುದಾಗಿ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿಗಳು 2013ರ ಚುನಾವಣಾ ಅಫಿಡವಿಟ್ ನಲ್ಲಿ 3.16 ಎಕರೆ ಭೂಮಿಯನ್ನು ಉಲ್ಲೇಖಿಸಿಲ್ಲ. ಇದು ಚುನಾವಣೆ ನಿಯಮಗಳ ಉಲ್ಲಂಘನೆ. ಇದೆಲ್ಲವನ್ನೂ ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ದೂರು ಕೊಡುವ ಕುರಿತು ಬಿಜೆಪಿ ಯೋಚಿಸುತ್ತಿದೆ ಎಂದು ತಿಳಿಸಿದರು.
ಸಿಎಂ ಧರ್ಮಪತ್ನಿಗೆ ಕೊಟ್ಟ 14 ನಿವೇಶನಗಳದು ಒಂದು ಪ್ರಕರಣ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಓಡೋಡಿ ತರಾತುರಿಯಲ್ಲಿ ಮೈಸೂರಿಗೆ ಹೋಗಿ ಮೂಡಾ ಅಧಿಕಾರಿಗಳ ಸಭೆ ನಡೆಸಿದ್ದರು. ಸಭೆಯಲ್ಲಿ ಮಾಹಿತಿ ಪಡೆದು ಎಲ್ಲ ಅಧಿಕಾರಿಗಳನ್ನೂ ಏಕಾಏಕಿ ವರ್ಗಾವಣೆ ಮಾಡಿದ್ದಾರೆ. ಹಗರಣದಲ್ಲಿ ಒಳಗೊಂಡವರನ್ನು ಶಿಕ್ಷಿಸುವುದನ್ನು ತಪ್ಪಿಸಲು ಹಾಗೂ ರಕ್ಷಿಸಲು ಭೈರತಿ ಸುರೇಶ್ ಮುಂದಾಗಿದ್ದಾರೆ. ಮೂಡಾ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿ ವರದಿ ಕೊಟ್ಟ ಜಿಲ್ಲಾಧಿಕಾರಿಯನ್ನೂ ತರಾತುರಿಯಲ್ಲಿ ವರ್ಗಾವಣೆ ಮಾಡಿದ್ದಾರೆ. ಇದಿಷ್ಟೇ ಅಲ್ಲ, ಭೈರತಿ ಸುರೇಶ್ ಅವರು ಈ ಹಗರಣ ಮುಚ್ಚಿ ಹಾಕಲು ಎಲ್ಲ ಕಡತಗಳನ್ನು ಬೆಂಗಳೂರಿಗೆ ಒಯ್ದಿದ್ದಾರೆ. ಹಗರಣ ಮುಚ್ಚಿ ಹಾಕುವ ಕೆಲಸ ನಡೆಯುತ್ತಲೇ ಇದೆ. ಸಿಎಂ ಕೂಡ ಮೈಸೂರು ಜಿಲ್ಲೆಯವರು. ಅತಿ ದೊಡ್ಡ ಭ್ರಷ್ಟಾಚಾರ ಹಗರಣವಿದು. ಎಲ್ಲ ಕಡತ ಮುಚ್ಚಿಡಲು ಭೈರತಿ ಸುರೇಶ್ ಮುಂದಾಗಿದ್ದಾರೆಂದು ಆರೋಪಿಸಿದರು.
ಸಿಎಂ ರಾಜೀನಾಮೆ, ಸಿಬಿಐ ತನಿಖೆಗೆ ಆಗ್ರಹಿಸಿ, ಈ ಪ್ರಕರಣದಲ್ಲಿ ಆಗಿರುವ ನಿವೇಶನ ಹಂಚಿಕೆ ರದ್ದು ಮಾಡಲು ಒತ್ತಾಯಿಸಿ ಬಿಜೆಪಿಯಿಂದ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಈ ವೇಳೆ ಪ್ರತಿಭಟನಾಕಾರರನ್ನು ಕಾಂಗ್ರೆಸ್ ಸರ್ಕಾರ ಬಂಧಿಸಿದೆ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ಎನ್ ನಾಗಪ್ಪ,ಶಾಸಕ ಬಿ.ಪಿ ಹರೀಶ್,ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ,ಮುಖಂಡರಾದ ವೀರೇಶ್ ಹನಗವಾಡಿ, ಬಿ. ಎಸ್. ಜಗದೀಶ್, ಶಿವನಹಳ್ಳಿ ರಮೇಶ್, ಶ್ರೀನಿವಾಸ್ ದಾಸಕರಿಯಪ್ಪ, ಕೊಂಡಜ್ಜಿ ಜಯಪ್ರಕಾಶ್, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್ ಮತ್ತಿತರರು ಹಾಜರಿದ್ದರು.