Home ದಾವಣಗೆರೆ ದಾವಣಗೆರೆ ಜಿಲ್ಲೆಯಲ್ಲಿ ಶೇ. 48 ರಷ್ಟು ಮಳೆ ಕೊರತೆ, ಉಪಗ್ರಹ ಚಿತ್ರಣಕ್ಕೆ ಮೋಸ ಹೋಗದಿರಿ: ಕಡ್ಡಾಯ ಸ್ಥಳ ಪರಿಶೀಲಿಸಿ ಬೆಳೆ ನಷ್ಟ ವರದಿ ನೀಡುವಂತೆ ಜಿಲ್ಲಾಡಳಿತ ಖಡಕ್ ಆದೇಶ!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ ಜಿಲ್ಲೆಯಲ್ಲಿ ಶೇ. 48 ರಷ್ಟು ಮಳೆ ಕೊರತೆ, ಉಪಗ್ರಹ ಚಿತ್ರಣಕ್ಕೆ ಮೋಸ ಹೋಗದಿರಿ: ಕಡ್ಡಾಯ ಸ್ಥಳ ಪರಿಶೀಲಿಸಿ ಬೆಳೆ ನಷ್ಟ ವರದಿ ನೀಡುವಂತೆ ಜಿಲ್ಲಾಡಳಿತ ಖಡಕ್ ಆದೇಶ!

Share
ದಾವಣಗೆರೆ
Share

ದಾವಣಗೆರೆ: ಉಪಗ್ರಹ ಚಿತ್ರಣಗಳಲ್ಲಿ ಬೆಳೆಗಳು ಹಸಿರು ವರ್ಣದಲ್ಲಿ ಕಂಡರೂ, ಭೂಮಿಯಲ್ಲಿ ಒಣಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ವರದಿ ಮಾಡಬೇಕು. ಪ್ರತಿ ಹೋಬಳಿಯಲ್ಲಿ ಕನಿಷ್ಠ 10 ಹಾನಿಗೊಳಗಾದ ಗ್ರಾಮಗಳನ್ನು ಗುರುತಿಸಿ, ಕಟ್ಟುನಿಟ್ಟಿನ ಪರಿಶೀಲನೆ ನಡೆಸಿ ಜಿಪಿಎಸ್ (GPS) ಆಧಾರಿತ ಭಾವಚಿತ್ರಗಳೊಂದಿಗೆ ವರದಿ ಸಲ್ಲಿಸಲು ಮತ್ತು ಮಳೆ ಆಶ್ರಿತವಲ್ಲದ ಬೆಳೆಗಳನ್ನು ಬೆಳೆಯಲು ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಸೂಚನೆ ನೀಡಿದರು.

ಅವರು ಕೃಷಿ ಇಲಾಖೆಯ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 2.28 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಗುರಿಯನ್ನು ಹೊಂದಿದ್ದು, ಪೂರ್ವ ಮುಂಗಾರಿನಲ್ಲಿ ಶೇ. 29 ರಷ್ಟು ಮಳೆ ಕೊರತೆ ಉಂಟಾಗಿದೆ. ಆದರೆ ರೈತರಿಗೆ ಮುಖ್ಯವಾಗಿ ಜೂನ್‌ ಮತ್ತು ಜುಲೈ ಮಳೆಯೇ ನಿರ್ಣಾಯಕವಾಗಿದ್ದು, ಮುಂಗಾರು ಮಳೆ ಶೇ. 48 ರಷ್ಟು ಕೊರತೆ ಉಂಟಾಗಿದೆ, ಶೇ. 12.35 ರಷ್ಟು ಪ್ರಮುಖ ಬೆಳೆಗಳನ್ನು ಮಾತ್ರ ಬೆಳೆಯಲಾಗಿದೆ ಎಂದರು.

ರೈತರು ಅಧಿಕೃತ ಮಾರಾಟಗಾರರಿಂದ ಮಾತ್ರ ಬಿತ್ತನೆ ಬೀಜಗಳನ್ನು ಖರೀದಿಸಬೇಕು , ಕಳಪೆ ಮತ್ತು ನಕಲಿ ಬೀಜಗಳನ್ನು ಖರೀದಿಸಿದರೆ ನಷ್ಟ ಅನುಭವಿಸಬೇಕಾಗುತ್ತದೆ. ಅಲ್ಲದೆ ಕೃಷಿ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರಲಿದೆ , ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟ ನಾಶಕಗಳು ಸಕಾಲದಲ್ಲಿ ಅಧಿಕೃತ ದರದಲ್ಲಿ ಪೂರೈಸುವುದು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರಸ್ತುತ ಭತ್ತ, ಮೆಕ್ಕೆಜೋಳ, ರಾಗಿ, ಜೋಳ, ಹಾಗೂ ತೊಗರಿ ಹೆಸರು, ಅಲಸಂದೆ, ಶೇಂಗಾ, ಸೂರ್ಯಕಾಂತಿ, ಸೋಯಾಬೀನ್‌ ಮತ್ತು ಹತ್ತಿ ಸೇರಿ ಒಟ್ಟು 60490 ಕ್ವಿಂಟಾಲ್‌ ಬಿತ್ತನೆ ಬೀಜಗಳ ಅಂದಾಜು ಬೇಡಿಕೆ ಇದ್ದು, ಪ್ರಸ್ತುತ 92645 ರಷ್ಟು ದಾಸ್ತಾನು ಇರುತ್ತದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜಗಳ ಕೊರತೆ ಇರುವುದಿಲ್ಲ, ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಜುಲೈ 7 ರ ಅಂತ್ಯಕ್ಕೆ 1835.76 ಕ್ಷಿಂಟಾಲ್‌ ಬಿತ್ತನೆ ಬೀಜಗಳ ವಿತರಣೆ ಮಾಡಲಾಗಿದ್ದು 3187.94 ಕ್ವಿಂಟಾಲ್‌ ದಾಸ್ತಾನು ಇರುತ್ತದೆ ಎಂದು ತಿಳಿಸಿದರು.

ಮುಂಗಾರು ಹಂಗಾಮಿನ ಬೆಳೆಗಳಿಗೆ ಯೂರಿಯಾ, ಡಿ.ಎ.ಪಿ, ಎನ್.ಪಿ.ಕೆ ಕಾಂಪ್ಲೆಕ್ಸ್‌, ಎಂ.ಓ.ಪಿ ಮತ್ತು ಎಸ್.ಎಸ್.ಪಿ ರಸಗೊಬ್ಬರ ಜುಲೈ 7 ರ ಅಂತ್ಯಕ್ಕೆ 163874 ಟನ್‌ ಗಳಷ್ಟು ಬೇಡಿಕೆ ಇದ್ದು, 62622.3 ಟನ್‌ ದಾಸ್ತಾನು ಲಭ್ಯವಿರುತ್ತದೆ. ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇರುವುದಿಲ್ಲ. ಜಿಲ್ಲೆಯಲ್ಲಿ, 1173 ಬಿತ್ತನೆ ಬೀಜಗಳ ಮಳಿಗೆಗಳು, ರಸಗೊಬ್ಬರ 1202 ಚಿಲ್ಲರೆ 174 ಸಗಟು ಮಳಿಗೆಗಳು, ಮತ್ತು 995 ಕೀಟನಾಶಕ ಮಳಿಗೆಗಳು ಇರುತ್ತದೆ, ರಸಗೊಬ್ಬರ ಪರವಾನಗೆ ಹೊಂದಿರುವ 16 ಎಫ್.ಪಿ.ಒ ಮತ್ತು 53 ಪಿಎಸಿಎಸ್‌ ಇರುತ್ತವೆ ಎಂದರು.

ಪ್ರತಿಯೊಬ್ಬ ರೈತರು ಬೆಳೆ ವಿಮೆ ಮಾಡಿಸಲು ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು, ರೈತರು ಬೆಳೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಲು ಕ್ರಮವಹಿಸಬೇಕು. 2026ರ ಸಾಲಿಗೆ ಎಸ್.ಬಿ.ಐ ಜನರಲ್‌ ವಿಮೆ ಕಂಪನಿ ಜಿಲ್ಲೆಯಲ್ಲಿ ಅಧಿಕೃತ ವಿಮೆ ಕಂಪನಿಯಾಗಿದ್ದು, ಈಗಾಗಲೇ ಹತ್ತಿ, ಈರುಳ್ಳಿ ಬೆಳೆಗಳಿಗೆ ಅಂತಿಮ ದಿನಾಂಕ ಮುಗಿದಿರುತ್ತದೆ, ಜೋಳ , ಭತ್ತ, ರಾಗಿ ತೊಗರಿ, ಸಜ್ಜೆ, ನೆಲಗಡಲೆ, ಟೋಮ್ಯಾಟೋ ಬೆಳೆಗಳಿಗೆ ಜುಲೈ 31 ಮತ್ತು ಸೂರ್ಯಕಾಂತಿ ಬೆಳೆಗೆ ಆಗಸ್ಟ್‌ 8 ಅಂತಿಮ ದಿನಾಂಕವಾಗಿರುತ್ತದೆ ಎಂದು ತಿಳಿಸಿದರು.

2025-26 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 56018 ಹೆಕ್ಟೇರ್‌ ಪ್ರದೇಶಕ್ಕೆ 85,654 ರೈತರು ವಿಮೆ ನೋಂದಣಿ ಮಾಡಿಸಿಕೊಂಡಿದ್ದು, 29,365 ರೈತರ ವಿಮಾ ಕಂತುಗಳನ್ನು 53,272 ರೈತರು ವಿಮೆ ಪಡೆದಿದ್ದು, 5067.95 ಒಟ್ಟು ಕ್ಲೈಮ್‌ ಮೊತ್ತವಾಗಿರುತ್ತದೆ , 2026 ರ ಬೆಳೆ ವಿಮೆ ಯನ್ನು 13602.10 ಹೆಕ್ಟೇರ್‌ ಪ್ರದೇಶಕ್ಕೆ 23438 ರೈತರು ನೋಂದಣಿ ಮಾಡಿಸಿಕೊಂಡಿದ್ದು 3850.56 ವಿಮಾ ಒಟ್ಟು ಮೊತ್ತದಲ್ಲಿ 91.25 ಲಕ್ಷ ಪಾವತಿಸಲಾಗಿದೆ ಎಂದು ತಿಳಿಸಿದರು.

ವಿಮೆ ವ್ಯಾಪ್ತಿಗೆ ಬರುವ ಬಿತ್ತನೆ ವೈಫಲ್ಯ ಮಧ್ಯಂತರ ಬೆಳೆ ವೈಫಲ್ಯ, ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪ ಮತ್ತು ಕೊಯ್ಲೇತ್ತರ ಬೆಳೆ ನಷ್ಟ ಗಳಲ್ಲಿ ಪ್ರಮುಖವಾಗಿ ಬಿತ್ತನೆ ವೈಫಲ್ಯ ದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಶೇ. 75 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬಿತ್ತನೆ ವಿಫಲಗೊಂಡಲ್ಲಿ, ವಿಮಾ ಮೊತ್ತದ ಶೆ. 25 ರಷ್ಟು ಗರಿಷ್ಠ ಪರಿಹಾರ ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದುಪಡಿಸಲಾಗುತ್ತದೆ. ಮತ್ತು ಕೊಯ್ಲೇತ್ತರ ಬೆಳೆ ನಷ್ಟ ಬೆಳೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೇ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಾಡಿದ ಎರಡು ವಾರಗಳೊಳಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ನಷ್ಟ ನಿರ್ಧಾರವನ್ನು ಮಾಡಲಾಗುವುದು ಎಂದರು.

ತೋಟಗಾರಿಕೆ:

ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2025-26 ನೆ ಸಾಲಿನಲ್ಲಿ 1638.97 ಅನುದಾನ ಬಿಡುಗಡೆಯಾಗಿದ್ದು ಶೇ.100 ರಷ್ಟು ಪ್ರಗತಿ ಸಾದಿಸಲಾಗಿದೆ. 4965 ಫಲಾನುಭವಿಗಳಿಗೆ ಪಾವತಿಸಲಾಗಿದೆ, 2026-27 ನೇ ಸಾಲಿನಲ್ಲಿ, 2397.47 ಭೌತಿಕ, 2157.72 ಆರ್ಥಿಕ ಗುರಿಯನ್ನು 3744 ಫಲಾನುಭವಿಗಳಿಗೆ ನಿಗದಿಪಡಿಸಲಾಗಿದೆ ಎಂದರು.

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾಗಳಾದ ರೋಟಿ ತಯಾರಿಕೆ, ಹಿಟ್ಟು ತಯಾರಿಕಾ ಘಟಕ, ಎಣ್ಣೆ ತಯಾರಿಕಾ ಘಟಕ, ಮಿಲೆಟ್‌ ತಯಾರಿಕಾ ಘಟಕ, ಬೇಕರಿ , ಅಕ್ಕಿ, ಅಡಿಕೆ ಸಂಸ್ಕರಣ, ಮಾಂಸ ಸಂಸ್ಕರಣ , ಪಶು ಆಹಾರ ಬೆಳೆ ಸಂಸ್ಕರಣಾ ಘಟಕಗಳ ಉದ್ದಿಮೆಗಳ ಸ್ಥಾಪನೆಗೆ ನಿಯಮ ಬದ್ದಗೊಳಿಸುವಿಕೆ ಯೋಜನೆಯಡಿ ಜಿಲ್ಲೆಯಲ್ಲಿ 1106 ಅರ್ಜಿಗಳು ಸ್ವೀಕೃತವಾಗಿದ್ದು 325 ಅರ್ಜಿಗಳಿಗೆ 2838.34 ಲಕ್ಷಗಳ ಸಾಲವನ್ನು ಮಂಜೂರು ಮಾಡಲಾಗಿದೆ ಎಂದರು.

ಪ್ರೋಟ್‌ ತಂತ್ರಾಂಶದಲ್ಲಿ ಕೇಂದ್ರ ಸರ್ಕಾರದ 183504 ರೈತರ ಐಡಿಯನ್ನು ಸೃಜಿಸಲಾಗಿದೆ, 387328 ಸರ್ವೇ ನಂಬರ್‌ ಗಳನ್ನು ಸೇರ್ಪಡೆ ಮಾಡಲಾಗಿದೆ , ಹಾಗೂ ಬಾಕಿ ಇರುವ ಐಡಿಗಳನ್ನು ಸೃಜಿಸಲು ಕ್ರಮವಹಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಕೃಷಿ ರಕ್ಷಕ ಪೋಸ್ಟರ್‌ ಬಿಡುಗಡೆ ಮಾಡಿ , ಕೃಷಿ ಮಾಹಿತಿ ಮತ್ತು ಯೋಜನಾ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೇಖರ್‌ ಹೆಚ್.ಟಿ , ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, ತೋಟಗಾರಿಕೆ ಜಂಟಿ ನಿರ್ದೇಶಕ ರಾಘವೇಂದ್ರ , ಪಶುಪಾಲನೆ ಮತ್ತು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಮಹೇಶ್‌, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್‌ ಕೃಷಿ ಮತ್ತು ತೋಟಗಾರಿಕೆಯ ಇಲಾಖೆಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles