Home ದಾವಣಗೆರೆ 2037ರ ವೇಳೆಗೆ ವಿಶ್ವಮಟ್ಟದ ಅವಕಾಶಗಳ ಕೇಂದ್ರವಾಗಲಿದೆ ಕರ್ನಾಟಕ, ಜಗತ್ತಿನ ಉದ್ಯೋಗಗಳೇ ಕರುನಾಡಿಗೆ ಹರಿದು ಬರಬೇಕು: ‘ಅಕ್ಕ’ ರಜತ ಮಹೋತ್ಸವದಲ್ಲಿ ಡಿಕೆಶಿ ಆಶಯ
ದಾವಣಗೆರೆನವದೆಹಲಿಬೆಂಗಳೂರು

2037ರ ವೇಳೆಗೆ ವಿಶ್ವಮಟ್ಟದ ಅವಕಾಶಗಳ ಕೇಂದ್ರವಾಗಲಿದೆ ಕರ್ನಾಟಕ, ಜಗತ್ತಿನ ಉದ್ಯೋಗಗಳೇ ಕರುನಾಡಿಗೆ ಹರಿದು ಬರಬೇಕು: ‘ಅಕ್ಕ’ ರಜತ ಮಹೋತ್ಸವದಲ್ಲಿ ಡಿಕೆಶಿ ಆಶಯ

Share
ಕರ್ನಾಟಕ
Share

ಬೆಂಗಳೂರು: “ನಮ್ಮ ಯುವಕರು ಕೇವಲ ಉದ್ಯೋಗ ಅರಸಿ ಜಗತ್ತಿನಾದ್ಯಂತ ಸಂಚರಿಸುವುದಷ್ಟೇ ಅಲ್ಲ, ಜಗತ್ತಿನ ಪ್ರಮುಖ ಉದ್ಯೋಗಗಳೇ ಕರ್ನಾಟಕಕ್ಕೆ ಹರಿದುಬರುವಂತೆ ಮಾಡುವುದು ನನ್ನ ಕನಸು. 2037ರ ವೇಳೆಗೆ ರಾಜ್ಯದಲ್ಲಿ ಜಾಗತಿಕ ಮಟ್ಟದ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಶ್ರಮಿಸುತ್ತಿದೆ,” ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಪಾದಿಸಿದ್ದಾರೆ.

ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ನಡೆಯುತ್ತಿರುವ 13ನೇ ‘ಅಕ್ಕ’  ರಜತ ಮಹೋತ್ಸವದ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ದೇಶಿಸಿ ಬೆಂಗಳೂರಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಶನಿವಾರ ರಾತ್ರಿ ಭಾಷಣ ಮಾಡಿದ ಅವರು, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ರಾಜ್ಯದ ಅಭಿವೃದ್ಧಿಯ ‘ಜಾಗತಿಕ ಪಾಲುದಾರರು’ ಎಂದು ಕರೆ ನೀಡಿದರು.

ಭಾಷಣದ ಪ್ರಮುಖ ಮುಖ್ಯಾಂಶಗಳು:

ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಸಂಸ್ಕೃತಿ: ಕನ್ನಡಿಗ ಎನ್ನುವುದು ಕೇವಲ ಒಂದು ಭಾಷೆಯನ್ನು ಮಾತನಾಡುವುದಲ್ಲ; ಅದು ಒಂದು ಜೀವನ ವಿಧಾನ, ಪರಂಪರೆ ಹಾಗೂ ಸಂಸ್ಕೃತಿಯಾಗಿದೆ. ಮಲೆನಾಡಿನ ಮಳೆ, ಕರಾವಳಿಯ ಸಮುದ್ರ, ಕಲ್ಯಾಣ ಕರ್ನಾಟಕದ ಗಟ್ಟಿತನ, ಉತ್ತರ ಕರ್ನಾಟಕದ ಹೃದಯವಂತಿಕೆ, ಹಳೆ ಮೈಸೂರು ಭಾಗದ ಸಂಸ್ಕೃತಿ ಹಾಗೂ ಬೆಂಗಳೂರಿನ ಜಾಗತಿಕ ದೃಷ್ಟಿಕೋನ ಇವೆಲ್ಲವೂ ಸೇರಿ ಕರ್ನಾಟಕವಾಗಿದೆ.

ಅಮೆರಿಕ ಸ್ವಾತಂತ್ರ್ಯಕ್ಕೆ 250, ‘ಅಕ್ಕ’ಗೆ 25 ವರ್ಷ: ಅಮೆರಿಕ ದೇಶವು ತನ್ನ ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದರೆ, ‘ಅಕ್ಕ’ ಸಂಸ್ಥೆಯು ಉತ್ತರ ಅಮೆರಿಕದಲ್ಲಿ ಕನ್ನಡಿಗರನ್ನು ಒಂದಗೂಡಿಸಿ 25 ಯಶಸ್ವಿ ವರ್ಷಗಳನ್ನು ಪೂರೈಸಿದೆ. ಇದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಕ್ಷಣ.

ಕರ್ನಾಟಕಕ್ಕಾಗಿ ದೂರದೃಷ್ಟಿಯ ಕನಸು: “ನನಗೆ ಕಾಯಲು ಸಮಯವಿಲ್ಲ, ಕರ್ನಾಟಕವನ್ನು ವೇಗವಾಗಿ ಕಟ್ಟಬೇಕಿದೆ. ನಮ್ಮ ಯುವಕರ ಭವಿಷ್ಯವನ್ನು ಭದ್ರಗೊಳಿಸಲು ಆಡಳಿತವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುತ್ತಿದ್ದೇವೆ. 2037ರ ವೇಳೆಗೆ ಜಗತ್ತು ಕರ್ನಾಟಕವನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುವುದು ನನ್ನ ಗುರಿ,” ಎಂದರು.

2028ರಲ್ಲಿ ಕಾಂಗ್ರೆಸ್ ಮರುಅಧಿಕಾರ ವಿಶ್ವಾಸ: 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭಾರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ. ಮುಂದಿನ 27ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ನಾನು ಖುದ್ದಾಗಿ ಭಾಗವಹಿಸಿ ನಿಮ್ಮೆಲ್ಲರ ನಡುವೆ ನಿಂತು ಮಾತನಾಡಲಿದ್ದೇನೆ ಎಂದು ಡಿಕೆಶಿ ಭರವಸೆ ನೀಡಿದರು.

ಈ ಸಮ್ಮೇಳನದಲ್ಲಿ ನಿರ್ಮಲಾನಂದ ಸ್ವಾಮೀಜಿಗಳು, ಸಿರಿಗೆರೆ ಶ್ರೀಗಳು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಚಿವ ಶಿವರಾಜ್ ತಂಗಡಗಿ, ಸಂಸದ ಯದುವೀರ್ ಒಡೆಯರ್, ಅಕ್ಕ ಸಂಸ್ಥೆಯ ಅಧ್ಯಕ್ಷ ಮಧು ರಂಗಯ್ಯ, ಛೇರ್ಮನ್ ಡಾ. ಅಮರನಾಥ ಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles