ದಾವಣಗೆರೆ: ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಡ್ಯಾಂನಿಂದ ಬರಪೀಡಿತ ಚಿತ್ರದುರ್ಗ ಭಾಗಕ್ಕೆ ನೀರು ಹರಿಸುವ ಪ್ರಕ್ರಿಯೆ ಚುರುಕುಗೊಂಡಿದ್ದು, ಮೂಲ ಅಚ್ಚುಕಟ್ಟು ಪ್ರದೇಶವಾದ ದಾವಣಗೆರೆ ಜಿಲ್ಲೆಯ ರೈತರಲ್ಲಿ ತೀವ್ರ ಕಳವಳ ಮತ್ತು ಆತಂಕದ ಅಲೆ ಎದ್ದಿದೆ.
ದಶಕಗಳಿಂದಲೂ ಭದ್ರಾ ಯೋಜನೆಯನ್ನೇ ನೆಚ್ಚಿ ಕೃಷಿ ಮಾಡುತ್ತಿರುವ ದಾವಣಗೆರೆ ಜಿಲ್ಲೆಯ ಕೊನೆಯ ಭಾಗದ (ಟೇಲ್ ಎಂಡ್) ರೈತರಿಗೆ ಈಗಾಗಲೇ ನಿಗದಿತ ಸಮಯಕ್ಕೆ ಸರಿಯಾಗಿ ನೀರು ತಲುಪುತ್ತಿಲ್ಲ ಎಂಬ ದೂರುಗಳಿವೆ. ಭದ್ರಾ ಮೇಲ್ದಂಡೆ ಯೋಜನೆಯಡಿ 29.90 ಟಿಎಂಸಿ ನೀರನ್ನು ಚಿತ್ರದುರ್ಗ ಹಾಗೂ ತುಮಕೂರು ಭಾಗಕ್ಕೆ ಎತ್ತುವ ಪ್ರಕ್ರಿಯೆಯಿಂದಾಗಿ ತಮ್ಮ ಬೆಳೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಕುತ್ತು ಬರಬಹುದು ಎಂಬ ಭಯ ದಾವಣಗೆರೆ ಅನ್ನದಾತರನ್ನು ಕಾಡುತ್ತಿದೆ.
ಚಿತ್ರದುರ್ಗ ಮತ್ತು ಪಾವಗಡ ಭಾಗದ ಬರಪೀಡಿತ ರೈತರ ಕೃಷಿ ಹಾಗೂ ಕುಡಿಯುವ ನೀರಿನ ಅಗತ್ಯತೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ, ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ಪೂರಕವಾಗಿ 17.40 ಟಿಎಂಸಿ ನೀರನ್ನು ಎತ್ತುವ (Lift Irrigation) ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ದೊಡ್ಡ ಪ್ರಮಾಣದ ನೀರನ್ನು ಬೇರೆಡೆಗೆ ಹರಿಸಿದರೆ, ಮೂಲ ಅಚ್ಚುಕಟ್ಟಿನ ಕೃಷಿ ಸಂಪೂರ್ಣ ನಾಶವಾಗಲಿದೆ ಎಂಬುದು ದಾವಣಗೆರೆ ರೈತರ ಮುಖ್ಯ ಆರೋಪವಾಗಿದೆ.
ರೈತರ ಕಳವಳವನ್ನು ಗಮನದಲ್ಲಿಟ್ಟುಕೊಂಡು ನೀರಾವರಿ ಇಲಾಖೆ ಹಾಗೂ ಸರ್ಕಾರವು ಜಲಾಶಯದ ನೀರಿನ ಸಂಗ್ರಹ, ಮೂಲ ಅಚ್ಚುಕಟ್ಟಿನ ಮೀಸಲು ಹಾಗೂ ಮೇಲ್ದಂಡೆಗೆ ಹರಿಸುವ ನೀರಿನ ನಿಖರ ಅಂಕಿ-ಅಂಶಗಳನ್ನು ಪಾರದರ್ಶಕವಾಗಿ ಪ್ರಕಟಿಸಬೇಕು. ಈ ನೀರು ಹಂಚಿಕೆ ವಿಚಾರವು ಜಿಲ್ಲೆಗಳ ನಡುವಿನ ಸಂಘರ್ಷಕ್ಕೆ ಕಾರಣವಾಗದೆ, ಎರಡೂ ಭಾಗದ ರೈತರ ಹಿತ ಕಾಯುವ ರೀತಿಯಲ್ಲಿ ತಜ್ಞರ ಸಭೆ ಕರೆದು ವೈಜ್ಞಾನಿಕ ನಿರ್ಧಾರ ಕೈಗೊಳ್ಳಬೇಕಿದೆ.
ಭದ್ರಾ ಜಲಾಶಯದಲ್ಲಿ ಪ್ರಸ್ತುತ ಎಷ್ಟು ನೀರಿದೆ? ಮೂಲ ಅಚ್ಚುಕಟ್ಟು ಪ್ರದೇಶಕ್ಕೆ ಎಷ್ಟು ನೀರು ಮೀಸಲಾಗಿದೆ? ಚಿತ್ರದುರ್ಗ ಭಾಗಕ್ಕೆ ಎಷ್ಟು ಟಿಎಂಸಿ ನೀರು ಹರಿಸಲಾಗುತ್ತದೆ? ತುಂಗಾದಿಂದ ಭದ್ರಾಕ್ಕೆ ಎಷ್ಟು ನೀರು ತರಲಾಗುತ್ತದೆ? ಬೇಸಿಗೆ ಬೆಳೆಗಳಿಗೆ ಎಷ್ಟು ನೀರು ಉಳಿಸಲಾಗುತ್ತದೆ? ಕುಡಿಯುವ ನೀರಿಗೆ ಎಷ್ಟು ಮೀಸಲು ಇಡಲಾಗುತ್ತದೆ? ಎಂಬ ಎಲ್ಲ ಮಾಹಿತಿಯನ್ನು ರೈತರಿಗೆ ಅರ್ಥವಾಗುವ ರೀತಿಯಲ್ಲಿ ಪ್ರಕಟಿಸಬೇಕು.
ಅದೇ ರೀತಿ ಕಾಲುವೆಯ ಆರಂಭದಿಂದ ಕೊನೆಯ ಭಾಗದವರೆಗೆ ನೀರಿನ ಹರಿವನ್ನು ವೈಜ್ಞಾನಿಕವಾಗಿ ಅಳೆಯಬೇಕು. ಅಕ್ರಮವಾಗಿ ನೀರು ಪಡೆಯುವುದನ್ನು ತಡೆಯಬೇಕು. ಕೊನೆಯ ಭಾಗದ ರೈತನ ಜಮೀನಿಗೂ ನಿಗದಿತ ಪ್ರಮಾಣದ ನೀರು ತಲುಪುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ರೈತಸಮೂಹದ್ದು.
ಏನಿದು ಪೈಪ್ ಲೈನ್ ಕಾಮಗಾರಿ?
ದಾವಣಗೆರೆ ಜಿಲ್ಲೆಯ ರೈತರ ಆತಂಕ ಕೇವಲ ಊಹೆಯಲ್ಲ. 2025ರ ಜೂನ್‌ನಲ್ಲಿ ಭದ್ರಾ ಬಲದಂಡೆ ಕಾಲುವೆಯಿಂದ ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಹರಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ ದಾವಣಗೆರೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ–48 ಅನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ಘಟನೆ ಕೂಡ ವರದಿಯಾಗಿತ್ತು.
ಹೀಗಿರುವಾಗ ಈಗ ಚಿತ್ರದುರ್ಗ ಭಾಗಕ್ಕೆ ಭದ್ರಾ ನೀರು ಹರಿಸುವ ಪ್ರಕ್ರಿಯೆ ವೇಗ ಪಡೆಯುತ್ತಿರುವುದು ಸಹಜವಾಗಿಯೇ ದಾವಣಗೆರೆ ರೈತರ ಆತಂಕವನ್ನು ಹೆಚ್ಚಿಸಿದೆ.
ಚಿತ್ರದುರ್ಗ ಜಿಲ್ಲೆಯ ರೈತರ ಪರಿಸ್ಥಿತಿಯೂ ಗಂಭೀರವಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಎರಡು ದಶಕಗಳಾದರೂ ಪೂರ್ಣಗೊಳ್ಳದಿರುವುದನ್ನು ಖಂಡಿಸಿ 2026ರ ಫೆಬ್ರವರಿಯಲ್ಲಿ ಅಲ್ಲಿನ ರೈತರು ಬಂದ್‌ಗೆ ಕರೆ ನೀಡಿದ್ದರು. ಆದ್ದರಿಂದ ಇದು ‘ದಾವಣಗೆರೆ ವಿರುದ್ಧ ಚಿತ್ರದುರ್ಗ’ ಎಂಬ ಸಂಘರ್ಷವಾಗಬಾರದು. ಎರಡೂ ಜಿಲ್ಲೆಗಳ ರೈತರ ಸಮಸ್ಯೆಗಳಿಗೆ ವೈಜ್ಞಾನಿಕ ಮತ್ತು ನ್ಯಾಯಯುತ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಮೊದಲು ಮೂಲ ಅಚ್ಚುಕಟ್ಟು ರೈತರ ಹಿತ
ದಾವಣಗೆರೆ ಜಿಲ್ಲೆಯ ಬಹುಭಾಗದ ರೈತರು ಭದ್ರಾ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಕಾಲುವೆಯ ಕೊನೆಯ ಭಾಗದ ರೈತರಿಗೆ ಈಗಾಗಲೇ ನಿಗದಿತ ಸಮಯಕ್ಕೆ ಸಮರ್ಪಕ ನೀರು ತಲುಪುತ್ತಿಲ್ಲ ಎಂಬ ದೂರುಗಳು ಹಲವು ವರ್ಷಗಳಿಂದ ಕೇಳಿಬರುತ್ತಿವೆ. ಮಳೆ ಕೈಕೊಟ್ಟ ಸಂದರ್ಭದಲ್ಲಿ ಭದ್ರಾ ನೀರೇ ಬೆಳೆ ಉಳಿಸುವ ಕೊನೆಯ ಆಸರೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜಲಾಶಯದಿಂದ ಬೇರೆ ಪ್ರದೇಶಗಳಿಗೆ ನೀರು ಹರಿಸುವಾಗ ದಾವಣಗೆರೆ ಜಿಲ್ಲೆಯ ಮೂಲ ಅಚ್ಚುಕಟ್ಟು ಪ್ರದೇಶಕ್ಕೆ ಅಗತ್ಯವಿರುವ ನೀರನ್ನು ಮೊದಲು ಖಚಿತಪಡಿಸಬೇಕು.
ರೈತರು ಸಾಲ ಮಾಡಿ ಬಿತ್ತನೆ ಮಾಡುತ್ತಾರೆ. ಬೀಜ, ಗೊಬ್ಬರ, ಔಷಧ, ಕೂಲಿ ಸೇರಿದಂತೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಬೆಳೆ ನಿರ್ಣಾಯಕ ಹಂತದಲ್ಲಿರುವಾಗ ಕಾಲುವೆಗೆ ನೀರು ಬರದಿದ್ದರೆ ಒಂದು ಕುಟುಂಬದ ವರ್ಷದ ದುಡಿಮೆಯೇ ನಾಶವಾಗುತ್ತದೆ. ಆದ್ದರಿಂದ ಭದ್ರಾ ನೀರಿನ ನಿರ್ವಹಣೆಯನ್ನು ಕೇವಲ ಅಂಕಿ-ಅಂಶಗಳ ದೃಷ್ಟಿಯಿಂದ ನೋಡದೆ ರೈತರ ಬದುಕಿನ ಪ್ರಶ್ನೆಯಾಗಿ ಪರಿಗಣಿಸಬೇಕು ಎಂಬ ಒತ್ತಾಯ ಬಲವಾಗಿ ಕೇಳಿ ಬರುತ್ತಿದೆ.





Leave a comment