ಒಂಟಾರಿಯೋ (ಕೆನಡಾ): ಮಹಿಳೆಗೆ ದೆವ್ವ ಹಿಡಿದಿದೆ, ಅದನ್ನು ಬಿಡಿಸಲು ವಿಶೇಷ ಪೂಜೆ ಹಾಗೂ ಶಾಂತಿ ಹೋಮ ಮಾಡಬೇಕೆಂದು ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಅಮೆರಿಕ ಮೂಲದ ಹಿಂದೂ ಅರ್ಚಕನನ್ನು ಕೆನಡಾದ ಪೊಲೀಸರು ಬಂಧಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ಮೂಲದ ರಾಜೇಂದ್ರನಾಥ್ ದೂದ್‌ನಾಥ್ ಮಹಾರಾಜ್ (50) ಬಂಧಿತ ಆರೋಪಿ. ಕೆನಡಾದ ಒಂಟಾರಿಯೋದ ಒಶಾವಾ ಎಂಬಲ್ಲಿರುವ ಕುಟುಂಬವೊಂದು ಧಾರ್ಮಿಕ ವಿಧಿವಿಧಾನ ನೆರವೇರಿಸಲು ಈತನನ್ನು ಅಮೆರಿಕದಿಂದ ಕರೆಸಿಕೊಂಡಿತ್ತು.
ಪೂಜೆಯ ಸಂದರ್ಭದಲ್ಲಿ ಸಂತ್ರಸ್ತೆ ಮಹಿಳೆಗೆ ದುಷ್ಟ ಶಕ್ತಿ (ದೆವ್ವ) ಆವರಿಸಿದೆ ಎಂದು ನಂಬಿಸಿದ ಆರೋಪಿ, ಅದನ್ನು ಗುಣಪಡಿಸಲು ಖಾಸಗಿ ಸ್ಥಳದಲ್ಲಿ ವಿಶೇಷ ಪೂಜೆ ಮಾಡಬೇಕೆಂದು ಹೇಳಿದ್ದಾನೆ. ಬಳಿಕ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಡರ್ಹಾಮ್ ಪ್ರಾದೇಶಿಕ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಜಾಮೀನು ವಿಚಾರಣೆಗೆ ಒಳಪಡಿಸಿದ್ದಾರೆ. ಈತನಿಂದ ಇನ್ನಷ್ಟು ಜನರು ವಂಚನೆಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.





Leave a comment