ದಾವಣಗೆರೆ: ತ್ಯಾವಣಗಿ ಸಮೀಪದ ಬೆಳಲಗೆರೆ ಗ್ರಾಮದಲ್ಲಿ ಅಜ್ಜಿ ಹಬ್ಬದ ಸಂದರ್ಭದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಾಲಯ ಪ್ರವೇಶದ ವಿಚಾರವಾಗಿ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿ, ಪರಿಸ್ಥಿತಿಯನ್ನು ತಿಳಿಗೊಳಿಸುವುದರ ಜೊತೆಗೆ ಎಲ್ಲಾ ಸಮುದಾಯದ ಜನರಿಗೆ ದೇವಸ್ಥಾನ ಪ್ರವೇಶವಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.
ಅವರು ಶನಿವಾರ ಬೆಳಲಗೆರೆ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಾಲಯ ಪ್ರವೇಶದ ವಿಚಾರವಾಗಿ ನಡೆದ ಶಾಂತಿ ಸಭೆಯ ನಂತರ ಮಾತನಾಡಿದರು.
ಬೆಳಲಗೆರೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮತ್ತು ವಿವಿಧ ಸಮುದಾಯದ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಲಾಗಿದೆ. ಶಾಂತಿ ಸಭೆಯ ನಂತರ ಅಧಿಕಾರಿಗಳ ಸಮ್ಮುಖದಲ್ಲೇ ಎಲ್ಲಾ ಸಮುದಾಯದ ಜನರಿಗೆ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಾಲಯದ ಒಳಗೆ ಪ್ರವೇಶಿಸಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಯಿತು ಎಂದರು.
ಸಾರ್ವಜನಿಕರು ಹೋಟೆಲ್, ಸಲೂನ್ ಹಾಗೂ ದೇವಾಲಯಗಳಿಗೆ ಪ್ರವೇಶ ತಡೆಯುವವರ ವಿರುದ್ಧ ಮತ್ತು ಅಸ್ಪೃಶ್ಯತೆ ಆಚರಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಸ್ಪಿ ಹೆಚ್.ಟಿ. ಶೇಖರ್ ಅವರು ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸ್ಮಶಾನದ ತಡೆಗೋಡೆ ತೆರವು:
ಬೆಳಲಗೆರೆ ಗ್ರಾಮದಲ್ಲಿ ವೀರಶೈವ ಸಮುದಾಯದವರು ಅಂತ್ಯಸಂಸ್ಕಾರ ನಡೆಸುತ್ತಿದ್ದ ಜಾಗಕ್ಕೆ ಹಾಕಲಾಗಿದ್ದ ತಡೆಗೋಡೆಯನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಹಸೀಲ್ದಾರ್ ಎನ್.ಬಿ. ನಾಗರಾಜ್ ಕ್ರಮ ಕೈಗೊಂಡಿದ್ದು, ಮೃತ ಮಹಿಳೆಯೊಬ್ಬರ ಅಂತ್ಯಸಂಸ್ಕಾರಕ್ಕೆ ಸರಾಗವಾಗಿ ಅವಕಾಶ ಮಾಡಿಕೊಡಲಾಗಿದೆ.
ಉಪವಿಭಾಗಾಧಿಕಾರಿ ಚನ್ನಪ್ಪ, ತಹಸೀಲ್ದಾರ್ ಎನ್.ಬಿ. ನಾಗರಾಜ್ ಹಾಗೂ ಸ್ಥಳೀಯ ನಾಯಕರು ಇತರರು ಉಪಸ್ಥಿತರಿದ್ದರು.






Leave a comment