ಮಂಗಳೂರು: ಕರಾವಳಿ ಕರ್ನಾಟಕದ ಜನರ ದಶಕಗಳ ಸುದೀರ್ಘ ಹೋರಾಟ, ಸಾಂಸ್ಕೃತಿಕ ಕನಸಿಗೆ ಕೊನೆಗೂ ರಾಜ್ಯ ಸರ್ಕಾರದಿಂದ ಅಧಿಕೃತ ಮುದ್ರೆ ಬಿದ್ದಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಾತನಾಡುವ ‘ತುಳು’ ಭಾಷೆಗೆ ಕರ್ನಾಟಕ ಸರ್ಕಾರದ ‘ಎರಡನೇ ಹೆಚ್ಚುವರಿ ಆಡಳಿತ ಭಾಷೆ’ ಮಾನ್ಯತೆ ನೀಡಿ ರಾಜ್ಯ ಸಚಿವ ಸಂಪುಟ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಮೂಲಕ ಬಿಜೆಪಿ ಭದ್ರಕೋಟೆ ಬೇಧಿಸಲು ಡಿ. ಕೆ. ಶಿವಕುಮಾರ್ ಪ್ಲ್ಯಾನ್ ಶುರು ಮಾಡಿದ್ದಾರೆ.
ಮಂಗಳೂರಿನ ಪ್ರಜಾಸೌಧದಲ್ಲಿ (ಜಿಲ್ಲಾಡಳಿತ ಸಂಕೀರ್ಣ) ಶುಕ್ರವಾರ ನಡೆದ ಮೂರು ಗಂಟೆಗಳ ಸುದೀರ್ಘ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಿದರು. ರಾಜಧಾನಿ ಬೆಂಗಳೂರಿನ ಹೊರಗೆ ನಡೆದ ಅವರ ಸರ್ಕಾರದ ಮೊದಲ ಸಂಪುಟ ಸಭೆ ಇದಾಗಿದ್ದು, ಕರಾವಳಿ ಭಾಗದ ದಶಕಗಳ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿದೆ.
ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು ಹಾಗೂ ಅನುದಾನ:
ತುಳು ಭಾಷೆಗೆ ಮಾನ್ಯತೆ ಹಾಗೂ ಅನುದಾನ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಡಳಿತಾತ್ಮಕ ವ್ಯವಹಾರಗಳಲ್ಲಿ ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿ ಬಳಸಲಾಗುತ್ತದೆ. ಅನುವಾದ, ತರಬೇತಿ ಹಾಗೂ ಆಡಳಿತಾತ್ಮಕ ಬಳಕೆಗೆ ಸರ್ಕಾರ ಪ್ರತಿವರ್ಷ ₹82 ಲಕ್ಷ ಅನುದಾನ ಮೀಸಲಿಡಲಿದೆ.
ಮಂಗಳೂರು ಜಿಲ್ಲೆ ಮರುನಾಮಕರಣ ಪ್ರಸ್ತಾಪ: ‘ದಕ್ಷಿಣ ಕನ್ನಡ’ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಿ ಒಂದು ತಿಂಗಳ ಕಾಲಾವಧಿಯ ಕರಡು ಅಧಿಸೂಚನೆ ಹೊರಡಿಸಲಾಗುವುದು.
₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳು: ಸಂಪುಟ ಸಭೆಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದ ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿಗಾಗಿ ಒಟ್ಟು ₹32,611 ಕೋಟಿ ಮೌಲ್ಯದ ಯೋಜನೆಗಳಿಗೆ ಅಂಕಿತ ಹಾಕಲಾಗಿದೆ.
ಬ್ಲೂ ಎಕಾನಮಿ ವಿಶ್ವವಿದ್ಯಾಲಯ: ಮಂಗಳೂರಿನ ಹಾಲಿ ಮೀನುಗಾರಿಕಾ ಕಾಲೇಜನ್ನು ‘ಮೀನುಗಾರಿಕೆ, ಸಾಗರ ಮತ್ತು ಬ್ಲೂ ಎಕಾನಮಿ ವಿಶ್ವವಿದ್ಯಾಲಯ’ವನ್ನಾಗಿ ಮೇಲ್ದರ್ಜೆಗೇರಿಸಿ, ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು 60 ರಿಂದ 200ಕ್ಕೆ ಹೆಚ್ಚಿಸಲಾಗುವುದು.
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ₹549.79 ಕೋಟಿ ವೆಚ್ಚದಲ್ಲಿ ನೂತನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
ರಾಜಕೀಯ ಮತ್ತು ಸಾಂಸ್ಕೃತಿಕ ಮಹತ್ವ:
“ನಾವು ಭಾವನಾತ್ಮಕ ವಿಚಾರಗಳ ಮೇಲೆ ರಾಜಕೀಯ ಮಾಡುವುದಿಲ್ಲ, ಜನರ ಜೀವನ ಮಟ್ಟ ಸುಧಾರಿಸಲು ಕೆಲಸ ಮಾಡುತ್ತೇವೆ,” ಎಂದು ಪತ್ರಿಕಾಗೋಷ್ಠಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ದಶಕಗಳಿಂದ ಬಿಜೆಪಿ ಮತ್ತು ಆರ್‌ಎಸ್ಎಸ್ ಬೆಂಬಲಿತ ಕೋಟೆಯಾಗಿದ್ದ ಕರಾವಳಿ ಭಾಗದಲ್ಲಿ (ದಕ್ಷಿಣ ಕನ್ನಡ ಮತ್ತು ಉಡುಪಿ) ಈ ನಿರ್ಧಾರವು ಕೇವಲ ಆಡಳಿತಾತ್ಮಕ ಬದಲಾವಣೆಯಷ್ಟೇ ಅಲ್ಲದೆ, ಸಾಂಸ್ಕೃತಿಕ ಹಾಗೂ ರಾಜಕೀಯ ರಂಗದಲ್ಲೂ ದೊಡ್ಡ ತಲ್ಲಣ ಸೃಷ್ಟಿಸಿದೆ. ತುಳು ಭಾಷೆಯನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರ್ಪಡೆಗೊಳಿಸುವ ಹೋರಾಟಕ್ಕೂ ಈ ರಾಜ್ಯಮಟ್ಟದ ಮಾನ್ಯತೆ ದೊಡ್ಡ ಬಲ ನೀಡಿದೆ.





Leave a comment