Home ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನೆಗೆ ಕೇಂದ್ರದ ಉತ್ತರ: ದಾವಣಗೆರೆಗೆ ಸಿಕ್ಕಿತು ₹40.01 ಕೋಟಿಯ ‘ಫುಡ್ ಪಾರ್ಕ್’!
ದಾವಣಗೆರೆಬೆಂಗಳೂರು

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನೆಗೆ ಕೇಂದ್ರದ ಉತ್ತರ: ದಾವಣಗೆರೆಗೆ ಸಿಕ್ಕಿತು ₹40.01 ಕೋಟಿಯ ‘ಫುಡ್ ಪಾರ್ಕ್’!

Share
ದಾವಣಗೆರೆ
Share

ದಾವಣಗೆರೆ/ನವದೆಹಲಿ: ದಾವಣಗೆರೆಯಲ್ಲಿ ಮೆ.ಜೆಮ್ ಫುಡ್ ಪಾರ್ಕ್ ಎಲ್‌ಎಲ್‌ಪಿ ಸಂಸ್ಥೆಯಿಂದ ₹40.01 ಕೋಟಿ ವೆಚ್ಚದ ಕೃಷಿ ಸಂಸ್ಕರಣಾ ಕ್ಲಸ್ಟರ್ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ತಿಳಿಸಿದೆ.

ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ಕೇಳಿದ್ದ ಚುಕ್ಕಿರಹಿತ ಪ್ರಶ್ನೆಗೆ ಸಚಿವಾಲಯ ಈ ಉತ್ತರ ನೀಡಿದೆ. ಕೊಯ್ಲಿನ ನಂತರದ ನಷ್ಟಗಳು, ಆಹಾರ ಸಂಸ್ಕರಣಾ ಮೂಲಸೌಕರ್ಯ ಹಾಗೂ ರೈತರ ಆದಾಯದ ಕುರಿತು ಡಾ.ಪ್ರಭಾ ಮಲ್ಲಿಕಾರ್ಜುನ್‌ ಪ್ರಶ್ನೆ ಕೇಳಿದ್ದರು.

ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆಅಡಿಯಲ್ಲಿ ಒಟ್ಟು 5 ಕೋಲ್ಡ್ ಚೈನ್ ಯೋಜನೆಗಳು, 3 ಕೃಷಿ ಸಂಸ್ಕರಣಾ ಕ್ಲಸ್ಟರ್‌ಗಳು ಹಾಗೂ 19 ಆಹಾರ ಸಂಸ್ಕರಣಾ ಸಾಮರ್ಥ್ಯ ವಿಸ್ತರಣೆ ಯೋಜನೆಗಳಿಗೆ ಅನುಮೋದನೆ ದೊರೆತಿದೆ ಎಂದು ಸಚಿವಾಲಯ ವಿವರಿಸಿದೆ. ಇವುಗಳಲ್ಲಿ ದಾವಣಗೆರೆಯ ಕೃಷಿ ಸಂಸ್ಕರಣಾ ಕ್ಲಸ್ಟರ್ ಯೋಜನೆಯೂ ಸೇರಿದೆ.

ಕೊಯ್ಲಿನ ನಂತರದ ನಷ್ಟದ ಪ್ರಮಾಣ

ICAR–CIPHET (2015) ಮತ್ತು NABCONS (2022) ಅಧ್ಯಯನಗಳ ಆಧಾರದಲ್ಲಿ ಕೃಷಿ ಉತ್ಪನ್ನಗಳ ಕೊಯ್ಲಿನ ನಂತರದ ನಷ್ಟವನ್ನು ಅಂದಾಜಿಸಲಾಗಿದೆ ಎಂದು ಆಹಾರ ಸಂಸ್ಕರಣಾ ಸಚಿವಾಲಯತಿಳಿಸಿದೆ. ಧಾನ್ಯಗಳಲ್ಲಿ ಶೇ 4–6ರಷ್ಟು, ಹಣ್ಣುಗಳಲ್ಲಿ ಶೇ 6–15ರಷ್ಟು, ತರಕಾರಿಗಳಲ್ಲಿ ಶೇ 5–12ರಷ್ಟು ಹಾಗೂ ಸಮುದ್ರ ಮೀನುಗಾರಿಕೆಯಲ್ಲಿ ಶೇ 9ರಷ್ಟು ವರೆಗೆ ನಷ್ಟ ದಾಖಲಾಗಿರುವುದಾಗಿ ಸಚಿವಾಲಯ ಹೇಳಿದೆ.

ಪಿಎಂಕೆಎಸ್‌ವೈ ಅಡಿಯಲ್ಲಿ ನೆರವು

ಆಹಾರ ಸಂಸ್ಕರಣಾ ಘಟಕಗಳು, ಕೋಲ್ಡ್ ಚೈನ್, ಫುಡ್ ಪಾರ್ಕ್ ಹಾಗೂ ಕೃಷಿ ಸಂಸ್ಕರಣಾ ಮೂಲಸೌಕರ್ಯಗಳಿಗೆ ಪಿಎಂಕೆಎಸ್‌ವೈ ಯೋಜನೆಯಡಿ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. ಇದಲ್ಲದೆ, ಪಿಎಂಎಫ್‌ಎಂಇ ಹಾಗೂ ಪಿಎಲ್‌ಐ ಯೋಜನೆಗಳ ಮೂಲಕ ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ), ಸೂಕ್ಷ್ಮ,ಸಣ್ಣ,ಮಧ್ಯಮ ಉದ್ದಿಮೆಗಳು (ಎಂಎಸ್‌ಎಂಇ) ಹಾಗೂ ಇತರೆ ಅರ್ಹ ಸಂಸ್ಥೆಗಳಿಗೆ ಅನುದಾನ ಹಾಗೂ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಕೃಷಿ ಮೂಲಸೌಕರ್ಯ ನಿಧಿಯ (ಎಐಎಫ್) ಮೂಲಕ ಕೋಲ್ಡ್ ಸ್ಟೋರೇಜ್, ಗೋದಾಮು ಹಾಗೂ ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲ ಸೌಲಭ್ಯ ಒದಗಿಸಿ, ಬೆಳೆ ನಷ್ಟ ಕಡಿಮೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಸಚಿವಾಲಯ ಹೇಳಿದೆ.

ಪ್ರತ್ಯೇಕ ಅಧ್ಯಯನ ಇಲ್ಲ

ಆಹಾರ ಸಂಸ್ಕರಣಾ ಮೂಲಸೌಕರ್ಯವು ರೈತರ ಆದಾಯ ಹೆಚ್ಚಳ, ಮೌಲ್ಯವರ್ಧನೆ, ಉದ್ಯೋಗ ಸೃಷ್ಟಿ ಹಾಗೂ ಆಹಾರ ವ್ಯರ್ಥತೆ ಕಡಿತದ ಮೇಲೆ ಬೀರಿರುವ ನೇರ ಪರಿಣಾಮದ ಕುರಿತು ಸಚಿವಾಲಯ ಇದುವರೆಗೆ ಯಾವುದೇ ಪ್ರತ್ಯೇಕ ಅಧ್ಯಯನ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.

Share

Leave a comment

Leave a Reply

Your email address will not be published. Required fields are marked *