Home ದಾವಣಗೆರೆ ಸಮೋಸ ಪಡೆದು ರಸ್ತೆ ಬದಿಯಲ್ಲೇ ತಿಂದ ಅತ್ಯಂತ ಶ್ರೀಮಂತ, ₹3,383 ಕೋಟಿ ಆಸ್ತಿ ಹೊಂದಿರುವ ಶಾಸಕ ರಸ್ತೆಯಲ್ಲಿ ಭಿಕ್ಷೆ ಬೇಡಿದ್ದು ಯಾಕೆ? ಇಲ್ಲಿದೆ ಅಸಲಿ ಕಾರಣ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಸಮೋಸ ಪಡೆದು ರಸ್ತೆ ಬದಿಯಲ್ಲೇ ತಿಂದ ಅತ್ಯಂತ ಶ್ರೀಮಂತ, ₹3,383 ಕೋಟಿ ಆಸ್ತಿ ಹೊಂದಿರುವ ಶಾಸಕ ರಸ್ತೆಯಲ್ಲಿ ಭಿಕ್ಷೆ ಬೇಡಿದ್ದು ಯಾಕೆ? ಇಲ್ಲಿದೆ ಅಸಲಿ ಕಾರಣ!

Share
ಶ್ರೀಮಂತ
Share

ಮುಂಬೈ: ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸ್ಥಿರ-ಚರಾಸ್ತಿ, ಭದ್ರತಾ ಸಿಬ್ಬಂದಿ ಹಾಗೂ ಐಷಾರಾಮಿ ಬೆಂಗಾವಲು ವಾಹನಗಳ ವೈಭವದಲ್ಲಿ ಬದುಕುವ ಮಹಾರಾಷ್ಟ್ರದ ನಂಬರ್ 1 ಶ್ರೀಮಂತ ಜನಪ್ರತಿನಿಧಿಯೊಬ್ಬರು ರಸ್ತೆ ಬದಿಯಲ್ಲಿ ಭಿಕ್ಷುಕನ ವೇಷ ಧರಿಸಿ ಸಾರ್ವಜನಿಕರೆದುರು ಕೈಯೊಡ್ಡಿ ನಿಂತ ಅಪರೂಪದ ವಿದ್ಯಮಾನವೊಂದು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಘಾಟ್‌ಕೋಪರ್ ಪೂರ್ವ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಈ ರೀತಿ ಫಕೀರನಂತೆ ಮುಂಬೈನ ಬೀದಿಗಳಲ್ಲಿ ಅಲೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಿದಾಡುತ್ತಿದೆ.

ಧರ್ಮಗುರುಗಳ ಆದೇಶ ಪಾಲನೆ:

ಪ್ರಸ್ತುತ ಜೈನ ಸಮುದಾಯದ ಪವಿತ್ರ ಚಾತುರ್ಮಾಸ ವ್ರತ ಆಚರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ರಾಷ್ಟ್ರಸಂತ ಶ್ರೀ ನಮ್ರಮುನಿ ಮಹಾರಾಜರು ಪರಾಗ್ ಶಾ ಅವರಿಗೆ ವಿಶೇಷ ಆಧ್ಯಾತ್ಮಿಕ ಸಲಹೆಯೊಂದನ್ನು ನೀಡಿದ್ದರು. ಸಂಪತ್ತು ಮತ್ತು ಅಧಿಕಾರದ ಅಹಂ ಕಳಚಲು ಹಾಗೂ ಸಾಮಾಜಿಕ ವಾಸ್ತವವನ್ನು ಗ್ರಹಿಸಲು ಸಾಮಾನ್ಯ ಭಿಕ್ಷುಕನ ದಿನಚರಿಯನ್ನು ಅನುಭವಿಸುವಂತೆ ಸೂಚಿಸಿದ್ದರು. ಗುರುವಿನ ಮಾತಿಗೆ ಶಿರಬಾಗಿದ ಶಾಸಕರು ತಮ್ಮ ದುಬಾರಿ ಕಾರುಗಳು, ಭದ್ರತಾ ಸಿಬ್ಬಂದಿ ಹಾಗೂ ಶ್ರೀಮಂತಿಕೆಯ ಲಾಂಛನಗಳನ್ನು ಬದಿಗಿಟ್ಟು, ಮುಖಚಹರೆ ಗುರುತು ಸಿಗದಂತೆ ಮೇಕಪ್ ಮಾಡಿಕೊಂಡು ಹರಕು-ಮುರುಕು ಬಟ್ಟೆ ಧರಿಸಿ ಘಾಟ್‌ಕೋಪರ್ ರೈಲ್ವೆ ಸ್ಟೇಷನ್ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಯಾಚಕರಂತೆ ತಿರುಗಾಡಿದರು.

ಬೇಡಿದ ಅನ್ನವೇ ಊಟ; ಜನರ ಮಾನವೀಯತೆ ಅನುಭವಿಸಿದ ಕೋಟ್ಯಧೀಶ:

ರಸ್ತೆ ಬದಿಯಲ್ಲಿ ಕುಳಿತು ಸಾರ್ವಜನಿಕರ ಬಳಿ ಕೈಚಾಚಿದ ಶಾಸಕರಿಗೆ ಜನರು ನೀಡಿದ ₹20 ನಾಣ್ಯ ಹಾಗೂ ಭಿಕ್ಷೆಯ ರೂಪದಲ್ಲಿ ಬಂದ ಆಹಾರವೇ ಅಂದಿನ ಊಟವಾಗಿತ್ತು. ಮುಖಚಹರೆ ಮರೆಮಾಚಿಕೊಂಡಿದ್ದರಿಂದ ತಾವು ಭಿಕ್ಷೆ ನೀಡುತ್ತಿರುವುದು ಬಿಲಿಯನೇರ್ ಶಾಸಕನಿಗೆ ಎಂಬ ಕಲ್ಪನೆಯೂ ಜನರಿಗಿರಲಿಲ್ಲ. ಕೆಲವರು ಹಣ ನೀಡಿದರೆ, ಬೀದಿ ಬದಿಯ ಸಮೋಸ ವ್ಯಾಪಾರಿಯೊಬ್ಬರು ಉಚಿತವಾಗಿ ಸಮೋಸ ನೀಡಿ ಮಾನವೀಯತೆ ಮೆರೆದರು.

ಈ ಆಧ್ಯಾತ್ಮಿಕ ಪ್ರಯೋಗ ಮುಗಿದ ಬಳಿಕ, ಅದೇ ಸ್ಥಳಗಳಿಗೆ ತಮ್ಮ ಅಧಿಕೃತ ರೂಪದಲ್ಲಿ ಮರಳಿದ ಪರಾಗ್ ಶಾ, ತಮಗೆ ಭಿಕ್ಷೆ ಹಾಗೂ ಆಹಾರ ನೀಡಿದವರನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

₹3,383 ಕೋಟಿ ಆಸ್ತಿಯ ಹಿನ್ನೆಲೆ:

ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಪರಾಗ್ ಶಾ ಅವರು 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಬರೋಬ್ಬರಿ ₹3,383 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಘೋಷಿಸಿಕೊಂಡು ರಾಜ್ಯದ ಅತ್ಯಂತ ಸಿರಿವಂತ ಅಭ್ಯರ್ಥಿ ಎನಿಸಿಕೊಂಡಿದ್ದರು. ಈ ಹಿಂದೆ ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC) ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಇವರ ಈ ಆಧ್ಯಾತ್ಮಿಕ ಪ್ರಯೋಗವು ರಾಜಕೀಯ ಕ್ಷೇತ್ರದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles