SUDDIKSHANA KANNADA NEWS/ DAVANAGERE/ DATE:29-02-2024
ಬೆಂಗಳೂರು: ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ತೀವ್ರ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ನೀಡಿದ ಜಾತಿಗಣತಿ ವರದಿ ಸ್ವೀಕಾರ ಮಾಡಿದ್ದಾರೆ.
2013 ರಿಂದ 2018ರವರೆಗಿನ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯನ್ನು ಮಾಡಿಸಲಾಗಿತ್ತು. ಆದ್ರೆ ಕಾರಣಂತರಗಳಿಂದ ಸರ್ಕಾರ ವರದಿ ಸ್ವೀಕರಿಸಿರಲಿಲ್ಲ. ಇದೀಗ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅದರಂತೆ ಸಿದ್ದರಾಮಯ್ಯನವರು ಹಲವರ ವಿರೋಧದ ನಡುವೆಯೂ ವರದಿಯನ್ನು ಸ್ವೀಕರಿಸಿದ್ದಾರೆ. ಇದು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ವಿರೋಧಕ್ಕೂ ಕಾರಣವಾಗಿದೆ. ಶಾಸಕ ವಿನಯ್ ಕುಲಕರ್ಣಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ತೀವ್ರ ವಿರೋಧ ಮಾಡಿದ್ದರು. ರ ಮಾಡಿದ್ದಾರೆ.
ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಜಾತಿ ಗಣತಿ (ಕರ್ನಾಟಕ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ
ತೀವ್ರ ವಿರೋಧದ ನಡುವೆಯೂ ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜು ಸಮಿತಿ ದತ್ತಾಂಶ ಪ್ರಕಾರ ಸಿದ್ದಪಡಿಸಿದ ವರದಿಯನ್ನು ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರ ಮಾಡಿದರು
ಮಧ್ಯಾಹ್ನ ವಿಧಾನಸೌಧಕ್ಕೆ ಎರಡು ಬಾಕ್ಸ್ ವರದಿ ಪ್ರತಿಗಳ ಜೊತೆಗೆ ಆಗಮಿಸಿದ ಕೆ ಜಯಪ್ರಕಾಶ್ ಹೆಗ್ಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ತೆರಳಿ ವರದಿಯ ಪ್ರತಿಯನ್ನು ಹಸ್ತಾಂತರಿಸಿದರು. ಈ ವರದಿಯಲ್ಲಿ ಒಟ್ಟು 13 ಪ್ರತಿಗಳಿವೆ. ವರದಿ ಸ್ವೀಕಾರ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತಿ ಗಣತಿ ವರದಿ ಸ್ವೀಕರಿಸಿದ್ದೇನೆ. ವರದಿಯಲ್ಲಿ ಏನಿದೆ ಎಂದು ನಾನು ನೋಡಿಲ್ಲ. ಕ್ಯಾಬಿನೆಟ್ನಲ್ಲಿ ಜಾತಿಗಣತಿ ವರದಿ ಚರ್ಚೆ ಮಾಡುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳತ್ತೇವೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕಾಂತರಾಜು ಸಮಿತಿ ದತ್ತಾಂಶ ಪ್ರಕಾರ ವರದಿ ಸಿದ್ಧಪಡಿಸಿದ್ದೇವೆ. ಜಾತಿಗಣತಿ ವರದಿಗೆ ಕಾರ್ಯದರ್ಶಿ, ಎಲ್ಲಾ ಸದಸ್ಯರು ಸಹಿಯೂ ಇದೆ. ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ಜಾತಿಗಣತಿ ವರದಿಯನ್ನು ಓದದೇ ಅವೈಜ್ಞಾನಿಕ ಎಂದು ಹೇಗೆ ಹೇಳುತ್ತೀರಿ. ನಾವು ಸಿದ್ಧಪಡಿಸಿದ ಜಾತಿ ಗಣತಿಯ ವರದಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ವರದಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯ ಹೆಚ್ಚಿದೆ. ಆ ನಂತರ ಮುಸ್ಲಿಂ, ಆ ಬಳಿಕ ಲಿಂಗಾಯತ, ಒಕ್ಕಲಿಗ, ಕುರುಬ ಜನಾಂಗದವರಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ 65 ಲಕ್ಷ ಜನಸಂಖ್ಯೆ ತೋರಿಸಿದ್ದರೆ, ಮುಸ್ಲಿಂ ಸಮುದಾಯ 70 ಲಕ್ಷ ಜನಸಂಖ್ಯೆ ಇದೆ ಎಂದು ಹೇಳಲಾಗಿದೆ.
ಜಾತಿ ಗಣತಿ ವರದಿಯಲ್ಲಿ ಏನೇನಿದೆ?
- ಜಾತಿಗಣ ವರದಿಯಲ್ಲಿರುವ ಅಂಶಗಳು
- ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015 ಸಮಗ್ರ ರಾಜ್ಯ ವರದಿ
- ಜಾತಿವಾರು ಜನಸಂಖ್ಯೆ ವಿವರ – 1 ಸಂಪುಟ
- ಜಾತಿ / ವರ್ಗಗಳ ಲಕ್ಷಣಗಳು( ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನ ಹೊರತು ಪಡಿಸಿ)
- ಜಾತಿ / ವರ್ಗಗಳ ಪ್ರಮುಖ ಲಕ್ಷಣಗಳು ( ಪರಿಶಿಷ್ಟ ಜಾತಿಗಳು)
- ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು ( ಪರಿಶಿಷ್ಟ ಪಂಗಡಗಳು)
- ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ ಅಂಶಗಳು (ಎರಡು ಸಿಡಿಗಳು)
- ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ 2015 ರ ದತ್ತಾಂಶಗಳ ಅಧ್ಯಯನ ವರದಿ 2024
ಸುಮಾರು 154 ಕೋಟಿ ರೂಪಾಯಿ ವೆಚ್ಚದಲ್ಲಿ ಜಾತಿ ಗಣತಿಯನ್ನು ತಯಾರು ಮಾಡಲಾಗಿತ್ತು. ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದ ಅವಧಿಯಲ್ಲಿ ಸ್ವೀಕಾರ ಆಗಿರಲಿಲ್ಲ. ಈ ಮಧ್ಯೆ ವರದಿ ಸೋರಿಕೆಯಾಗಿ, ಭಾರಿ ಸದ್ದು ಮಾಡಿತ್ತು. ಇದೀಗ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಿದ್ದಾರೆ. ಅಧಿಕಾರಕ್ಕೆ ಬಂದ್ಮೇಲೆ ಜಾತಿ ಗಣತಿ ವರದಿಯನ್ನ ಸ್ವೀಕಾರ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಕಾಂತರಾಜ ವರದಿನಾ, ಜಯ ಪ್ರಕಾಶ್ ಹೆಗ್ಡೆ ವರದಿನಾ…?
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ರಾಜ್ಯ ಸರ್ಕಾರ ಸ್ವೀಕರಿಸಿರುವುದು ಕಾಂತರಾಜು ವರದಿನಾ ಜಯ ಪ್ರಕಾಶ ಹೆಗ್ಡೆ ವರದಿನಾ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರಿಗೆ ನೀಡಿದ ಆದೇಶದಲ್ಲಿ ಜಾತಿ ಗಣತಿ ಮಾಡಲು ಆದೇಶ ಇರಲಿಲ್ಲ. ಆಗ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಸ್ವೀಕಾರ ಮಾಡಲಿಲ್ಲ. ಜಾತಿ ಗಣತಿ ಯಾರು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಐದಾರು ಅರ್ಜಿ ವಿಚಾರಣೆ ಹಂತದಲ್ಲಿವೆ ಎಂದರು.
ಈಗ ನೀಡಿರುವ ವರದಿಯಲ್ಲಿ ಕೆಲವು ಜಾತಿಗಳ ಉಪಜಾತಿಗಳನ್ನು ಬೇರ್ಪಡಿಸಿದ್ದಾರೆ. ಕೆಲವು ಜಾತಿಗಳ ಉಪ ಜಾತಿಗಳನ್ನು ಬೇರ್ಪಡಿಸಿಲ್ಲ ಎಂಬ ಮಾಹಿತಿ ಇದೆ. ಈ ವರದಿ ಬಗ್ಗೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲಿ. ಈ ವರದಿ ಸಾರ್ವಜನಿಕವಾಗಿ ಚರ್ಚೆಯಾಗಲಿ. ನಾವು ಹಿಂದುಳಿದ ವರ್ಗದವರ ವಿರೋಧಿಗಳಲ್ಲ. ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ನ್ಯಾಯ ಸಿಗಬೇಕು. ಈ ವರದಿ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯಕ್ಕೆ
ಬಳಕೆಯಾಗಬಾರದು ಎಂದು ಹೇಳಿದರು.