SUDDIKSHANA KANNADA NEWS/ DAVANAGERE/ DATE:29-02-2024
ದಾವಣಗೆರೆ: ವ್ಯಕ್ತಿಯೊಬ್ಬರನ್ನು ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 44 ಸಾವಿರ ರೂಪಾಯಿ ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮದ ಮುಜಾವರ್ ಜಬೀವುಲ್ಲಾ (43), ಮುಜಾವರ್ ರೆಹಮಾನ್ (38) ಮುಜಾವರ್ ಅಬ್ದುಲ್ (32), ಮುಜಾವರ್ ಅಬ್ದುಲ್ ಅಜೀಜ್ (23) ಶಿಕ್ಷೆಗೊಳಪಟ್ಟ ಅಪರಾಧಿಗಳು.
ಘಟನೆ ಹಿನ್ನೆಲೆ ಏನು…?
2015ರ ಜುಲೈ 28ರಂದು ಹರಿಹರ ತಾಲೂಕಿನ ಮಲೇಬೆನ್ನೂರಿನ ಸಂತೇಬೆನ್ನೂರು ರಸ್ತೆಯ ಸಾಗರ ಫ್ಯಾಷನ್ ನ ಪಿ.ಅಬ್ದುಲ್ ಅಜೀಜ್ ಖಾನ್ ಅವರು ರಾತ್ರಿ 8.30 ಗಂಟೆಯ ಸಮಯದಲ್ಲಿ ಅಂಗಡಿ ಬಾಗಿಲು ಹಾಕಿ ತನ್ನ ಅಣ್ಣನಾದ ಪಿ. ಅಬ್ದುಲ್ ರೆಹಮಾನ್ ಅವರು ಮಲೇಬೆನ್ನೂರಿನ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಗಂಗಾಪರಮೇಶ್ವರ ಶಾಲೆಯ ಹತ್ತಿರ ರಸ್ತೆಯಲ್ಲಿ ಹಿಂದಿನಿಂದ ಬಂದ ಆರೋಪಿತರುಗಳು ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರ ಬಗ್ಗೆ ಅದೇ ತಿಂಗಳ 29ರಂದು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು.
ಆಗ ಮಲೇಬೆನ್ನೂರು ಪಿಎಸ್ಐ ಆಗಿದ್ದ ಟಿ. ವಿ. ದೇವರಾಜ್ ಅವರು, ತನಿಖೆ ಕೈಗೊಂಡು ಆರೋಪಿತರನ್ನು ಪತ್ತೆ ಮಾಡಿದ್ದರು. ಮುಜಾವರ್ ಜಬೀವುಲ್ಲಾ (43), ಮುಜಾವರ್ ರೆಹಮಾನ್ (38) ಮುಜಾವರ್ ಅಬ್ದುಲ್ (32), ಮುಜಾವರ್ ಅಬ್ದುಲ್ ಅಜೀಜ್ (23) ವಿರುದ್ಧ ಘನ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾವಣಗೆರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎನ್. ಹೆಗ್ಡೆ ಅವರು ಮುಜಾವರ್ ಜಬೀವುಲ್ಲಾ, ಮುಜಾವರ್ ರೆಹಮಾನ್, ಮುಜಾವರ್ ಅಬ್ದುಲ್, ಮುಜಾವರ್ ಅಬ್ದುಲ್ ಅಜೀಜ್ ಮೇಲಿನ ಆರೋಪ ಸಾಬೀತಾದ ಕಾರಣ ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ 44,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಮೊತ್ತದಲ್ಲಿ ಸಂತ್ರಸ್ಥ ಅಬ್ದುಲ್ ರೆಹಮಾನ್ ಅವರಿಗೆ 25000 ರೂಪಾಯಿ ಪರಿಹಾರ ಹಾಗೂ 19,000 ರೂ.ಗಳನ್ನು ಸರ್ಕಾರಕ್ಕೆ ನೀಡಿ ತೀರ್ಪು ನೀಡಿರುತ್ತಾರೆ.
ಈ ಪ್ರಕರಣದಲ್ಲಿ ಪಿರ್ಯಾದಿಯವರ ಪರವಾಗಿ ಸರ್ಕಾರಿ ವಕೀಲ ಮಂಜುನಾಥ್ ಅವರು ನ್ಯಾಯ ಮಂಡನೆ ಮಾಡಿದ್ದರು. ಈ ಪ್ರಕರಣದ ತನಿಖೆ ಮಾಡಿ ಆರೋಪಿಯ ವಿರುದ್ದ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಟಿ. ವಿ. ದೇವರಾಜ್, ವಕೀಲರಾದ ಮಂಜುನಾಥ್ ಅವರನ್ನು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ ಎಂ ಸಂತೋಷ್ ಅವರು ಶ್ಲಾಘಿಸಿದ್ದಾರೆ.