SUDDIKSHANA KANNADA NEWS/ DAVANAGERE/ DATE:07-01-2025
ದಾವಣಗೆರೆ: ಪಶ್ಚಿಮ ಬಂಗಾಳದ ಔಷಧಿ ಕಂಪೆನಿಯಿಂದ ಸರಬರಾಜಾದ ಔಷಧಿ ಕಳಪೆ ಎಂದು ಡ್ರಗ್ ಕಂಟ್ರೋಲರ್ ಮಾಹಿತಿ ನೀಡಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ಶಾಸಕ ಚಂದ್ರು ಲಮಾಣಿ ಆರೋಪಿಸಿದರು.
ಬಿಜೆಪಿ ಸತ್ಯಶೋಧನ ಸಮಿತಿ ವತಿಯಿಂದ ಜಿಲ್ಲಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ನಗರದ ಚಿಟಗೇರಿ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿದ ಶಾಸಕ ಚಂದ್ರು ಲಮಾಣಿ ಮತ್ತು ಸಮಿತಿಯ ಎಲ್ಲಾ ಸದಸ್ಯರು ಮಾಹಿತಿ ಪಡೆದರು.
ಬಳಿಕ ಚಂದ್ರು ಲಮಾಣಿ ಅವರು ಮಾತನಾಡಿ, ಪರ್ಸೆಂಟೇಜ್ ಪಡೆದು ಈ ಔಷಧಿ ಬಳಸಲು ಅನುಮತಿ ನೀಡಿದ್ದಾರೆ. ಈ ಕುರಿತು ಮೆಡಿಕಲ್ ಸೂಪರಿಂಟೆಂಡೆಂಟ್ ಅವರನ್ನು ಕೇಳಿದಾಗ, 21-2-2024ರಂದು ಪತ್ರ ಬರೆಯಲಾಗಿದೆ ಎಂದರು.
ಪಶ್ಚಿಮ ಬಂಗಾಳದಿಂದ ಬಂದ ಆರ್.ಎಲ್.ಸಲೈನ್ ಸರಿ ಇಲ್ಲ ಎಂದು 11 ತಿಂಗಳ ಪತ್ರ ಬರೆದಿದ್ದರು. ಆದರೂ ಅದನ್ನೇ ಬಳಸಬೇಕೆಂಬ ಧೋರಣೆಯಿಂದ ಸರಕಾರ ನಡೆದುಕೊಂಡಿದೆ ಎಂದು ವಿವರಿಸಿದರು.
ಈ ಔಷಧಿಯ ಬಾಟಲಿಯಲ್ಲಿ ಫಂಗಸ್ ಬೆಳವಣಿಗೆ ಕುರಿತು ವೈದ್ಯರು ಶಂಕೆಯನ್ನೂ ವ್ಯಕ್ತಪಡಿಸಿದ್ದರು ಎಂದು ಗಮನ ಸೆಳೆದರು. ಪಶ್ಚಿಮ ಬಂಗಾಳದ ಈ ಔಷಧಿಯನ್ನು ರಾಜ್ಯದಾದ್ಯಂತ ಜಿಲ್ಲಾ, ತಾಲ್ಲೂಕು ಆಸ್ಪತ್ರೆ, ಪಿಎಚ್ಸಿಗಳಿಗೆ ಆಸ್ಪತ್ರೆಗಳಿಗೆ
ಪೂರೈಸಿದ್ದರು ಎಂದು ತಿಳಿಸಿದರು.
ಕಳೆದ ವರ್ಷ ಇಡೀ ವರ್ಷದಲ್ಲಿ ಸಿಜಿ ಆಸ್ಪತ್ರೆಯಲ್ಲಿ 21 ಬಾಣಂತಿಯರ ಸಾವಾಗಿದ್ದರೆ, ಈ ಬಾರಿ ಈಗಾಗಲೇ 33 ಸಾವು ಸಂಭವಿಸಿದೆ. ಇನ್ನೂ 4 ತಿಂಗಳು ಬಾಕಿ ಇದೆ. ಇದು ಅತ್ಯಂತ ಕಳವಳಕಾರಿ ಎಂದು ಹೇಳಿದರು. ಸೆಪ್ಟಿಕ್ ಶಾಕ್ ಎಂದೇ ಹೆಚ್ಚಿನ ಸಾವಿನಲ್ಲಿ ಕಂಡುಬಂದಿದೆ ಎಂದು ವಿವರ ನೀಡಿದರು. ಸಲೈನ್ ವಿಷಯುಕ್ತವಾಗಿದ್ದರೆ, ರಕ್ತನಾಳಗಳು ಗಟ್ಟಿಯಾಗುತ್ತವೆ. ಅಂಥದ್ದೇ ಪ್ರಕರಣ ಕಂಡುಬಂದಿದೆ ಎಂದು ತಿಳಿಸಿದರು.
ಸಾವುಗಳಿಗೆ ಇದೇ ಸಲೈನ್ ಕಾರಣ. ಸಲೈನ್ ಉತ್ಪಾದನಾ ಕಂಪೆನಿ- ಸಚಿವರಿಗೆ ಏನು ನಂಟಿದೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು. ಸರಿ ಇಲ್ಲ ಎಂಬುದು ಗೊತ್ತಿದ್ದರೂ ಇದೇ ನವೆಂಬರ್ 16ರವರೆಗೆ ಆ ಕಂಪೆನಿಯ ಸಲೈನ್ ಸರಬರಾಜಾಗುತ್ತಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನವೆಂಬರ್ 16ರಂದು ನಿಗದಿತ ಬ್ಯಾಚಿನ ಔಷಧಿ ವಾಪಸ್ ಕೊಡಲು ಸೂಚಿಸಲಾಯಿತು. ಇದ್ದ ಔಷಧಿ ಖಾಲಿ ಮಾಡಿ, ಉಳಿದ ಶೇ 5 ರಷ್ಟನ್ನು ವಾಪಸ್ ಕಳಿಸಿ ಎಂಬ ಉದ್ದೇಶ ಸರಕಾರದ್ದಾಗಿತ್ತು ಎಂದು ಅವರು ಆರೋಪಿಸಿದರು. ಸಚಿವರ ಕೈವಾಡದಿಂದ ಆ ಕಂಪೆನಿಗೆ ಔಷಧಿ ಸರಬರಾಜು ಮಾಡಲು ಅನುಮತಿ ಲಭಿಸಿದೆ ಎಂದು ಅವರು ಟೀಕಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಸಚಿವರು ಉತ್ತರ ನೀಡಿದ್ದು, ಮೃತ ಬಾಣಂತಿಯರಿಗೆ 5 ಲಕ್ಷ ರೂ. ಪರಿಹಾರ ಕೊಡುವುದಾಗಿ ತಿಳಿಸಿದ್ದಾರೆ. ಮಕ್ಕಳನ್ನು ನೋಡಿಕೊಳ್ಳಲು 2 ಸಾವಿರ ನೀಡುವುದಾಗಿ ಹೇಳಿದ್ದಾರೆ. ಇಲ್ಲಿನವರೆಗೆ ಮೃತ ತಾಯಂದಿರ ಮನೆಗೆ ಭೇಟಿ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.
ಮೃತ ಬಾಣಂತಿಯ ಕುಟುಂಬಕ್ಕೆ 25 ಲಕ್ಷ ರೂ. ನೀಡಬೇಕು. ಮಗುವನ್ನು ದತ್ತು ಪಡೆಯಬೇಕು. ಅದರ ಶಿಕ್ಷಣ ಸೇರಿದಂತೆ ಎಲ್ಲ ಜವಾಬ್ದಾರಿಯನ್ನು ಸರಕಾರ ವಹಿಸಬೇಕು ಎಂದು ಅವರು ಆಗ್ರಹಿಸಿದರು. ಈ ಕಂಪೆನಿ ಎಷ್ಟೋ ಕೋಟಿ ಲಾಭ ಮಾಡಿಕೊಂಡಿದೆ; ಅವರಿಗೆ ದಂಡ ವಿಧಿಸಿ ಎಂದು ಒತ್ತಾಯಿಸಿದರು. ಮತ್ತೆ ಅವರನ್ನು ಬ್ಲ್ಯಾಕ್ ಲಿಸ್ಟಿನಲ್ಲಿ ಹಾಕಬೇಕಿದೆ ಎಂದು ತಿಳಿಸಿದರು.
ಬಹಳಷ್ಟು ಕಡೆ ಒಂದೂ ಐಸಿಯು ಬೆಡ್ ಇಲ್ಲ:
ಹೆರಿಗೆ ಆಸ್ಪತ್ರೆಯಲ್ಲಿ ಐಸಿಯು ಅಥವಾ ಕ್ರಿಟಿಕಲ್ ಕೇರ್ ಇದ್ದಲ್ಲಿ ಬಹಳ ಅನುಕೂಲ ಆಗಲಿದೆ ಎಂದು ನುಡಿದರು. ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು. ಕ್ಲಿಷ್ಟಕರ ಸಮಸ್ಯೆ ಇದ್ದ ರೋಗಿಗಳಿಗೆ ಬೇಕಾದ ವ್ಯವಸ್ಥೆ ಮಾಡಬೇಕಿದೆ ಎಂದು ಆಗ್ರಹಿಸಿದರು.
ಸಿಬ್ಬಂದಿ ಕೊರತೆ ಇದ್ದು, ಅದನ್ನು ಭರ್ತಿ ಮಾಡಬೇಕು. ಎರಡೂ ಆಸ್ಪತ್ರೆಗಳಿಗೆ ಇನ್ನಷ್ಟು ಸಿಬ್ಬಂದಿ ನೇಮಿಸಬೇಕಿದೆ ಎಂದ ಅವರು, ಹೈ ರಿಸ್ಕ್ ಪ್ರೆಗ್ನೆನ್ಸಿ ಇದ್ದವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಇದರಿಂದ ಸಮಸ್ಯೆ ಉಲ್ಬಣವಾಗುತ್ತದೆ ಎಂದು ಟೀಕಿಸಿದರು. ಅತ್ಯವಶ್ಯಕ ಔಷಧಿಗಳನ್ನು ಸರಿಯಾಗಿ ಖರೀದಿಸಿ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ. ವಿಜಯಲಕ್ಷ್ಮಿ ತುಂಗ, ಡಾಕ್ಟರ್ ಪದ್ಮ ಪ್ರಕಾಶ್, ರಾಜ್ಯ ವಕ್ತಾರ ಅಶೋಕ್ ಗೌಡ, ಜಿಲ್ಲಾ ಅಧ್ಯಕ್ಷ ರಾಜಶೇಖರ್ ನಾಗಪ್ಪ, ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬೇಳ, ಅನಿಲ್ ಕುಮಾರ್ ನಾಯಕ್, ಐರಾಣಿ ಅಣ್ಣೇಶ್, ಮುಖಂಡರುಗಳಾದ ಗಾಯತ್ರಿ ಸಿದ್ದೇಶ್ವರ, ಲೋಕಿಕೆರೆ ನಾಗರಾಜ್, ಜಿಲ್ಲಾ ವಕ್ತರ ಕೊಳೆನಹಳ್ಳಿ ಸತೀಶ್, ಸಾಮಾಜಿಕ ಜಾಲತಾಣ ಸಹ ಸಂಚಾಲಕ ಪ್ರದೀಪ್ ಕಾಡಾದಿ, ರಾಜ್ಯ ಮಹಿಳಾ ಉಪಾಧ್ಯಕ್ಷರಾದ ಜಯ ಎಚ್.ಸಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ನಿಶ್ಚಿಮ ಗೌಡ್ರು, ಜಿಲ್ಲಾ ಮಾಧ್ಯಮ ಸಂಚಾಲಕರಾದ ವಿಶ್ವಾಸ್ ಹೆಚ್ ಪಿ, ಜಿಲ್ಲಾ ಸಾಮಾಜಿಕ ಜಾಲತಾಣ ಕೊಟ್ರೇಶ್ ಗೌಡ, ಹಾಲೇಶ್ ಇನ್ನು ಪ್ರಮುಖರು ಉಪಸ್ಥಿತರಿದ್ದರು.