SUDDIKSHANA KANNADA NEWS/ DAVANAGERE/ DATE:24-10-2024
ಬೆಂಗಳೂರು: ರಾಜ್ಯದ ಹಲವೆಡೆ ಆಸ್ತಿ ನೋಂದಣಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಆದಾಯ ಖೋತಾ ಆಗಲಿದೆ. ಮಾತ್ರವಲ್ಲ, ಆಸ್ತಿ ನೋಂದಣಿಗೆ ಜನರು ಪರದಾಡುವ ದೃಶ್ಯ ಕಂಡು ಬಂದಿದೆ.
ಸಬ್ ರಿಜಿಸ್ಟ್ರಾರ್ ಗಳು ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರದ ಹೊಸ ಕಾನೂನಿಗೆ ಸಬ್ ರಿಜಿಸ್ಟ್ರಾರ್ಗಳು ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದ ಹಲವೆಡೆ ಆಸ್ತಿ ದಾಖಲೆ ನೋಂದಣಿ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಕಾರಣ ರಾಜ್ಯ ಸರ್ಕಾರದ ಹೊಸ ಕಾನೂನು. ನಕಲಿ ದಸ್ತಾವೇಜುಗಳನ್ನು ನೋಂದಣಿ ಮಾಡುವವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಕಲ್ಪಿಸಿರುವ ನೋಂದಣಿ ಅಧಿನಿಯಮ-2023 ವಿರೋಧಿಸಿ ಸಬ್ ರಿಜಿಸ್ಟ್ರಾರ್ಗಳು ನೋಂದಣಿ ಕಾರ್ಯ ನಿಲ್ಲಿಸಿದ್ದಾರೆ.
ನೋಂದಣಿ ಕಾಯಿದೆ 1908ರ ನಿಯಮ 22 ಗೆ ತಿದ್ದುಪಡಿ ತಂದು, ನೋಂದಣಿ ಅಧಿನಿಯಮ-2023 ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರದ ನಿರ್ಧಾರವು ಸಬ್ ರಿಜಿಸ್ಟ್ರಾರ್ ಗಳ ಕಣ್ಣು ಕೆಂಪಾಗಿಸಿದೆ. ಸಬ್ ರಿಜಿಸ್ಟ್ರಾರ್ಗಳು ರಾಜ್ಯಾದ್ಯಂತ ಆಸ್ತಿ ದಾಖಲೆಗಳೂ ಸೇರಿದಂತೆ ಎಲ್ಲ ದಸ್ತಾವೇಜುಗಳ ನೋಂದಣಿಯನ್ನು ಸ್ಥಗಿತಗೊಳಿಸಿ ನಾಲ್ಕು ದಿನಗಳಿಂದ ಮುಷ್ಕರ ಹೂಡಿದ್ದಾರೆ. ಅಕ್ಟೋಬರ್ 19 ರವರೆಗೆ ದಿನಾಂಕ, ಸಮಯ ಕಾಯ್ದಿರಿಸಿ ಮುದ್ರಾಂಕ ಶುಲ್ಕ ಪಾವತಿಸಿರುವವರ ದಸ್ತಾವೇಜುಗಳನ್ನಷ್ಟೇ ಕೆಲ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿ ಮಾಡಲಾಗಿದೆ. ನೋಂದಣಿ ಅಧಿನಿಯಮದ ಕುರಿತು ಕೇಂದ್ರ ಕಚೇರಿಯಿಂದ ಸೂಕ್ತ ನಿರ್ದೇಶನ ಬರುವವರೆಗೆ ದಸ್ತಾವೇಜುಗಳ ಪರಿಶೀಲನೆ, ನೋಂದಣಿಯನ್ನು ಅನಿರ್ದಿಷ್ಟಾವಧಿವರೆಗೆ ಸ್ಥಗಿತಗೊಳಿಸಲಾಗಿದೆ.