ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ವಿರುದ್ಧ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ತೀವ್ರ ಕಿಡಿಕಾರಿದ್ದಾರೆ. ಮೋದಿಯವರನ್ನು ಟೀಕಿಸುವ ಭರದಲ್ಲಿ ಖರ್ಗೆಯವರು ದೇಶದ ಜನಾದೇಶ ಮತ್ತು ಪ್ರಜಾಪ್ರಭುತ್ವದ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಜಯೇಂದ್ರ, “ಶ್ರೀ ಮಲ್ಲಿಕಾರ್ಜುನ ಖರ್ಗೆಯವರೇ, ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜೀ ರವರನ್ನು ಟೀಕಿಸುವ ಭರದಲ್ಲಿ ನೀವು ಇಂದು ದೇಶದ 140 ಕೋಟಿ ಜನರನ್ನು ಹಾಗೂ ನಮ್ಮ ಪ್ರಜಾಪ್ರಭುತ್ವದ ಘನತೆಯನ್ನು ಅಪಮಾನಿಸಿದ್ದೀರಿ. ಸತತ ಮೂರನೇ ಬಾರಿಗೆ ಶ್ರೀ ಮೋದಿಜೀ ರವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿರುವ ದೇಶದ ಜನತೆಯ ತೀರ್ಪಿಗೆ ನೀವು ನೀಡುತ್ತಿರುವ ಗೌರವವೇ ಇದು?” ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ದ್ವೇಷದ ಪರಮಾವಧಿ:
ವಿಶ್ವದ 32ಕ್ಕೂ ಹೆಚ್ಚು ದೇಶಗಳ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿರುವ ನಾಯಕನ ಬಗ್ಗೆ ಇಂತಹ ‘ನಂಜಿನ, ವಿಷಕಾರಿ’ ಮಾತುಗಳು ನಿಮ್ಮ ವಿಕೃತ ಮನಸ್ಥಿತಿ ಮತ್ತು ರಾಜಕೀಯ ಹತಾಶೆಯನ್ನು ಬಿಂಬಿಸುತ್ತವೆಯೇ ಹೊರತು ಮೋದಿಯವರ ವ್ಯಕ್ತಿತ್ವಕ್ಕೆ ಕುಂದು ತರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಆಪರೇಷನ್ ಸಿಂದೂರ್ ಮತ್ತು ರಾಷ್ಟ್ರೀಯ ಭದ್ರತೆ:
ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ಏರ್‌ಸ್ಟ್ರೈಕ್ ಮತ್ತು ಇತ್ತೀಚಿನ ‘ಆಪರೇಷನ್ ಸಿಂದೂರ್’ ಮೂಲಕ ಭಯೋತ್ಪಾದನೆಯನ್ನು ಮಟ್ಟಹಾಕಿದ ಧೀಮಂತ ನಾಯಕನ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಶತ್ರು ರಾಷ್ಟ್ರದ ಒಳಗೆ ನುಗ್ಗಿ ಹೊಡೆಯುವ ದಿಟ್ಟತನ ತೋರಿದ ಪ್ರಧಾನಿ ವಿರುದ್ಧ ಕಾಂಗ್ರೆಸ್ ಕಾರುತ್ತಿರುವ ವೈಷಮ್ಯ ಹೊಸದೇನಲ್ಲ ಎಂದು ವಿಜಯೇಂದ್ರ ಲೇವಡಿ ಮಾಡಿದ್ದಾರೆ.
ಇತಿಹಾಸ ನೆನಪಿಸಿದ ವಿಜಯೇಂದ್ರ:
“ಹಿಂದೆ ‘ಮೌತ್ ಕಾ ಸೌದಾಗರ್’ ಮತ್ತು ‘ಚಾಯ್ ವಾಲಾ’ ಎಂದವರನ್ನು ಜನತೆ ಹೇಗೆ ಮೂಲೆಗುಂಪು ಮಾಡಿದ್ದಾರೆ ಎಂಬುದು ನಿಮಗೆ ನೆನಪಿರಲಿ. ಹಿರಿಯ ರಾಜಕಾರಣಿಯಾಗಿ ನೀವು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ಜನ ನಿರೀಕ್ಷಿಸಿರಲಿಲ್ಲ. ಮುಂಬರುವ ದಿನಗಳಲ್ಲಿ ನಾಡಿನ ಜನರೇ ತಕ್ಕ ಉತ್ತರ ನೀಡಲಿದ್ದಾರೆ” ಎಂದು ಎಚ್ಚರಿಸಿದ್ದಾರೆ.






Leave a comment