SUDDIKSHANA KANNADA NEWS/ DAVANAGERE/ DATE:03-01-2025
ನವದೆಹಲಿ: ಶೀಷ್ಮಹಲ್ ನಿರ್ಮಿಸುವ ಬದಲು ಜನರಿಗೆ ಶಾಶ್ವತ ವಸತಿ ಕಲ್ಪಿಸುವುದು ನನ್ನ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ನಿವಾಸದ ಅದ್ದೂರಿ ನವೀಕರಣದ ಬಗ್ಗೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ, ನಾಲ್ಕು ಕೋಟಿ ಜನರಿಗೆ ವಸತಿ ಒದಗಿಸಿದ್ದರೂ ಅವರು ಶೀಷ್ಮಹಲ್ ನಿರ್ಮಿಸಿಲ್ಲ ಎಂದು ಹೇಳಿದ್ದಾರೆ.
ದೆಹಲಿ ಸರ್ಕಾರವು ಭ್ರಷ್ಟಾಚಾರ ಮತ್ತು ನಗರದ ಮೂಲಸೌಕರ್ಯವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ ಪ್ರಧಾನಿ, ಆಡಳಿತ ಪಕ್ಷವನ್ನು ವಿಪತ್ತು ಎಂದು ಲೇವಡಿ ಮಾಡಿದರು. ದೆಹಲಿಯಲ್ಲಿ ಕೊಳೆಗೇರಿ ನಿವಾಸಿಗಳಿಗೆ ವಸತಿ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ, “ನಾನು ಶೀಷ್ಮಹಲ್ ನಿರ್ಮಿಸಬಹುದಿತ್ತು, ಆದರೆ ನನ್ನ ಕನಸು ನನ್ನ ದೇಶವಾಸಿಗಳಿಗೆ ಶಾಶ್ವತ ಮನೆಗಳನ್ನು ಪಡೆಯಬೇಕು” ಎಂದು ಹೇಳಿದರು.
ಮೋದಿ ಎಂದಿಗೂ ತಮಗಾಗಿ ಮನೆಯನ್ನು ನಿರ್ಮಿಸಿಲ್ಲ ಎಂದು ದೇಶಕ್ಕೆ ಚೆನ್ನಾಗಿ ತಿಳಿದಿದೆ. ಆದರೆ, ಕಳೆದ 10 ವರ್ಷಗಳಲ್ಲಿ, ಬಡವರಿಗಾಗಿ ನಾಲ್ಕು ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ, ಅವರ ಕನಸುಗಳನ್ನು ಈಡೇರಿಸಲಾಗಿದೆ,” ಎಂದು ಅವರು ಹೇಳಿದರು.
ಮುಖ್ಯಮಂತ್ರಿಯಾಗಿದ್ದಾಗ ಕೇಜ್ರಿವಾಲ್ ಅವರು ತಮ್ಮ ಅಧಿಕೃತ ನಿವಾಸದ ನವೀಕರಣಕ್ಕೆ ಸರಿಸುಮಾರು 45 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂಬ ಹೇಳಿಕೆಗಳನ್ನು ಉಲ್ಲೇಖಿಸಿ ಪಿಎಂ ಮೋದಿ ಅವರ ವಾಗ್ದಾಳಿ ನಡೆಸಿದರು. ಪರದೆಗಳಿಗೆ 1 ಕೋಟಿ ಮತ್ತು ನೆಲಹಾಸಿಗೆ 6 ಕೋಟಿ ರೂಪಾಯಿಗಳಂತಹ ಅದ್ದೂರಿ ವೆಚ್ಚಗಳು ಸೇರಿವೆ ಎಂದರು.
ಎಎಪಿ ವಿರುದ್ಧ ಮತ್ತಷ್ಟು ದಾಳಿ ನಡೆಸಿದ ಪ್ರಧಾನಿ, “ಅವರು ಮದ್ಯದ ಹಗರಣ, ಶಾಲಾ ಹಗರಣ ಮತ್ತು ಮಾಲಿನ್ಯ ಹಗರಣವನ್ನು ಮಾಡಿದ್ದಾರೆ. ಅವರು ಬಹಿರಂಗವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಅದನ್ನು ಪ್ರಚಾರ ಮಾಡುತ್ತಿದ್ದಾರೆ. ಇದು ದೆಹಲಿಗೆ ವಿಪತ್ತು ಎದುರಾಗಿದ್ದು, ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಗುಡುಗಿದರು.
‘ಆಪದಾ ಕೋ ನಹೀ ಸಾಹೇಂಗೆ, ಬಾದಲ್ ಕರ್ ರಹೇಂಗೆ (ನಾವು ದುರಂತವನ್ನು ಸಹಿಸುವುದಿಲ್ಲ, ಅದನ್ನು ಬದಲಾಯಿಸುತ್ತೇವೆ) ಎಂದು ದೆಹಲಿ ಒಗ್ಗಟ್ಟಿನಲ್ಲಿ ಹೇಳುತ್ತಿದೆ’ ಎಂದು ಅಶೋಕ್ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಎಎಪಿ ಆಳ್ವಿಕೆ ಮುಂದುವರಿದರೆ ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದ ಅವರು, ದೆಹಲಿಯಲ್ಲಿ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಕೇಂದ್ರವು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಒತ್ತಿ ಹೇಳಿದರು.
“2025 ರ ವರ್ಷವು ರಾಷ್ಟ್ರ ರಾಜಧಾನಿಯಲ್ಲಿ ಉತ್ತಮ ಆಡಳಿತಕ್ಕೆ ಹೊಸ ದಿಕ್ಕನ್ನು ನೀಡುತ್ತದೆ… ಸಾರ್ವಜನಿಕ ಕಲ್ಯಾಣ ಮತ್ತು ರಾಷ್ಟ್ರೀಯ ಕಲ್ಯಾಣದ ಹೊಸ ರಾಜಕೀಯವು ಈ ವರ್ಷ ಪ್ರಾರಂಭವಾಗಲಿದೆ ಮತ್ತು ಆದ್ದರಿಂದ” ಎಂದು ಪ್ರಧಾನಿ ಮೋದಿ ಹೇಳಿದರು.