SUDDIKSHANA KANNADA NEWS/ DAVANAGERE/ DATE:05-01-2025
ನವದೆಹಲಿ: ರಸ್ತೆಗಳನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ನುಣುಪಾಗಿಸುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ಶಾಸಕ ರಮೇಶ್ ಬಿಧುರಿ ಹೇಳಿ ವಿವಾದಕ್ಕೆ ಸಿಲುಕಿದ್ದಾರೆ.
ಕಲ್ಕಾಜಿ ಕ್ಷೇತ್ರದ ಬಿಜೆಪಿ ಶಾಸಕ ಅಭ್ಯರ್ಥಿ ರಮೇಶ್ ಬಿಧುರಿ ಅವರು ತಮ್ಮ ಕ್ಷೇತ್ರದಲ್ಲಿ ಗೆದ್ದರೆ ತಮ್ಮ ಕ್ಷೇತ್ರದ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿಯವರ ಕೆನ್ನೆಯಂತೆ ಮಾಡುವುದಾಗಿ ಹೇಳಿದ್ದು ಕಾಂಗ್ರೆಸ್ ನಿಗಿನಿಗಿ ಕೆಂಡವಾಗಿದೆ.
ಬಿಜೆಪಿಯನ್ನು “ಮಹಿಳಾ ವಿರೋಧಿ ಪಕ್ಷ” ಎಂದು ಕರೆದಿರುವ ಕಾಂಗ್ರೆಸ್, ಬಿಧುರಿ ಮಾಡಿದ ಹೇಳಿಕೆಗಳು “ನಾಚಿಕೆಗೇಡಿನವು” ಮತ್ತು ಮಹಿಳೆಯರ ವಿಷಯದಲ್ಲಿ ಅವರ “ಕೊಳಕು” ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಇದು ಬಿಜೆಪಿಯ ನಿಜವಾದ ಮುಖ ಎಂದು ಕಾಂಗ್ರೆಸ್ ಹೇಳಿದೆ.
ರಮೇಶ್ ಬಿಧುರಿ ಅವರು ಈ ಹೇಳಿಕೆಗಳನ್ನು ನೀಡಿರುವುದನ್ನು ಖಚಿತಪಡಿಸಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿ ಅವರ ಕೆನ್ನೆಯಂತೆ ನಯವಾಗಿಸುತ್ತೇನೆ ಎಂದು ಒಮ್ಮೆ ಹೇಳಿದ್ದರು. ಆಗ ವಿವಾದ ಆಗಿರಲಿಲ್ಲ, ಈಗ ಏಕೆ ವಿವಾದ ಎಂದು ಪ್ರಶ್ನಿಸಿದ್ದಾರೆ.
“ಇಂದು ಕಾಂಗ್ರೆಸ್ ಹೇಳಿಕೆಯಿಂದ ನೋವು ಅನುಭವಿಸಿದರೆ, ಹೇಮಾಜಿ ಬಗ್ಗೆ ಏನು? ಅವರು ಹೆಸರಾಂತ ನಾಯಕಿ ಮತ್ತು ಚಲನಚಿತ್ರಗಳ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಲಾಲು ಅವರ ಹೇಳಿಕೆಗಳು ತಪ್ಪಾಗಿದ್ದರೆ, ಅವರ ಹೇಳಿಕೆಯೂ ತಪ್ಪಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್‌ನ ‘ಸೆಕ್ಸಿಸ್ಟ್’ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಬಿಧುರಿ, “ಹೇಮಾ ಮಾಲಿನಿ ಮಹಿಳೆ ಅಲ್ಲವೇ? ಜೀವನದಲ್ಲಿ ಸಾಧನೆಗಳ ವಿಷಯದಲ್ಲಿ ಪ್ರಿಯಾಂಕಾ ಗಾಂಧಿಗಿಂತ ಹೇಮಾ ಮಾಲಿನಿ ತುಂಬಾ ಶ್ರೇಷ್ಠರು ಎಂದು ಹೇಳಿದ್ದಾರೆ.