ಕಟಿಹಾರ್ (ಬಿಹಾರ): ತಮ್ಮ ಕಷ್ಟದ ದಿನಗಳಲ್ಲಿ ಸಾಲ-ಸೋಲ ಮಾಡಿ, ತಂದೆಯೊಂದಿಗೆ ಸೇರಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪತ್ನಿಗೆ ಶಿಕ್ಷಣ ಕೊಡಿಸಿ, ಬಿಹಾರ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವಾದ ಪತಿಯೊಬ್ಬರು, ಈಗ ಅದೇ ಪತ್ನಿ ತಮ್ಮಿಂದ ದೂರವಾಗಿದ್ದಾರೆ ಎಂದು ಆರೋಪಿಸಿ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿ ಮೆಟ್ಟಿಲೇರಿರುವ ಘಟನೆ ಬಿಹಾರದ ಕಟಿಹಾರ್‌ನಲ್ಲಿ ನಡೆದಿದೆ.
ಪ್ರೀತಿಸಿ ಮದುವೆಯಾಗಿದ್ದ ಜೋಡಿ:
ಬಿಹಾರದ ಕೈಮೂರ್ ಜಿಲ್ಲೆಯ ನಿವಾಸಿ ಹಂಸಲಾಲ್ ಗುಪ್ತಾ ಎಂಬವರು ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಪೆಟ್ರೋಲ್ ಪಂಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರತಿಭಾ ವಿಶ್ವಕರ್ಮ ಎಂಬವರನ್ನು ಭೇಟಿಯಾಗಿದ್ದರು. ಇಬ್ಬರ ನಡುವೆ ಪ್ರೀತಿ ಚಿಗುರೊಡೆದು 2021 ರಲ್ಲಿ ವಿವಾಹವಾಗಿದ್ದರು. ಬಳಿಕ 2024 ರಲ್ಲಿ ಬಿಹಾರದ ಕೈಮೂರ್ ನ್ಯಾಯಾಲಯದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದರು.
8-9 ಲಕ್ಷ ರೂ. ಖರ್ಚು ಮಾಡಿ ಓದಿಸಿದ್ದ ಪತಿ ಮತ್ತು ಮಾವ:
ಮದುವೆಯ ನಂತರ ಪ್ರತಿಭಾ ಅವರು ಮುಂದಿನ ವ್ಯಾಸಂಗ ಹಾಗೂ ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸಲು ಬಯಸಿದ್ದರು. ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ ಹಂಸಲಾಲ್ ಹಾಗೂ ಇ-ರಿಕ್ಷಾ ಚಾಲಕರಾಗಿದ್ದ ಅವರ ತಂದೆ, ಸುಮಾರು 8 ರಿಂದ 9 ಲಕ್ಷ ರೂಪಾಯಿ ವೆಚ್ಚ ಮಾಡಿ ಆಕೆಗೆ ಅಗತ್ಯ ತರಬೇತಿ ಕೊಡಿಸಿದ್ದರು. ಪರಿಶ್ರಮದ ಫಲವಾಗಿ ಪ್ರತಿಭಾ ಅವರು ಬಿಹಾರ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಟಿಹಾರ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದರು.
ಉದ್ಯೋಗ ಸಿಗುತ್ತಿದ್ದಂತೆ ಬದಲಾದ ನಡವಳಿಕೆ:
ಪೊಲೀಸ್ ತರಬೇತಿ ಆರಂಭವಾದಾಗಿನಿಂದ ಹಾಗೂ ಕೆಲಸಕ್ಕೆ ಸೇರಿದ ಬಳಿಕ ಪ್ರತಿಭಾ ತಮ್ಮಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದರು ಎಂದು ಹಂಸಲಾಲ್ ಆರೋಪಿಸಿದ್ದಾರೆ. ಕರೆ ಮಾಡಿದಾಗಲೆಲ್ಲ ಕೆಲಸದ ಒತ್ತಡದ ನೆಪ ಹೇಳುತ್ತಿದ್ದ ಆಕೆ, ಕೈಮೂರ್‌ನಿಂದ ಕಟಿಹಾರ್‌ಗೆ ಆಕೆಯನ್ನು ಭೇಟಿಯಾಗಲು ಬಂದರೂ ಸಿಗಲು ನಿರಾಕರಿಸುತ್ತಿದ್ದರು. ಅಲ್ಲದೆ, ಆಕೆಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂಬ ಸಂಶಯವನ್ನು ಪತಿ ವ್ಯಕ್ತಪಡಿಸಿದ್ದು, ತಾನು ಆಕೆಯನ್ನು ಮದುವೆಯಾಗಿಯೇ ಇಲ್ಲ ಎಂದು ಪ್ರತಿಭಾ ಹೇಳುತ್ತಿರುವುದಾಗಿ ತಿಳಿಸಿದ್ದಾರೆ.
ಸಂಸಾರ ಉಳಿಸಿಕೊಳ್ಳಿ: ಎಸ್‌ಪಿ ಸಲಹೆ
ಪತ್ನಿಯೊಂದಿಗೆ ರಾಜಿಯಾಗಲು ಬಯಸಿರುವ ಹಂಸಲಾಲ್ ಮತ್ತು ಅವರ ತಂದೆ ಕಟಿಹಾರ್ ಪೊಲೀಸ್ ಕೇಂದ್ರಕ್ಕೆ ತೆರಳಿ ಮಾತುಕತೆ ನಡೆಸಲು ಯತ್ನಿಸಿದರೂ ಪ್ರತಿಭಾ ಮನೆಗೆ ಬರಲು ನಿರಾಕರಿಸಿದ್ದಾರೆ. ಇದರಿಂದಾಗಿ ಅವರು ಕಟಿಹಾರ್ ಎಸ್ಪಿ ಪರಿಚಯ್ ಕುಮಾರ್ ಅವರಿಗೆ ಲಿಖಿತ ದೂರು ನೀಡಿದ್ದಾರೆ. ಪ್ರಕರಣವನ್ನು ಪರಿಶೀಲಿಸಿದ ಎಸ್ಪಿ, ಇದು ಖಾಸಗಿ ವೈವಾಹಿಕ ವಿವಾದವಾಗಿರುವುದರಿಂದ ತಕ್ಷಣದ ಕಾನೂನು ಕ್ರಮದ ಬದಲು ಮಹಿಳಾ ಪೊಲೀಸ್ ಠಾಣೆಯ ಕೌನ್ಸೆಲಿಂಗ್ ಕೇಂದ್ರದ ಮೂಲಕ ದಂಪತಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಕೌನ್ಸೆಲಿಂಗ್‌ಗೆ ಸೂಚಿಸಿದ್ದಾರೆ.





Leave a comment