Home ಕ್ರೈಂ ನ್ಯೂಸ್ ಆನ್‌ಲೈನ್ ಗೇಮ್ ಶೋಕಿಗೆ ಬಲಿಯಾದ 8ನೇ ತರಗತಿ ವಿದ್ಯಾರ್ಥಿ: ದಾವಣಗೆರೆಯ ಚನ್ನಗಿರಿಯಲ್ಲಿ 4.11 ಲಕ್ಷ ರೂ. ವಸೂಲಿ ಮಾಡಿ ಪ್ರಚೋದನೆ ನೀಡಿದ್ದ ಸ್ನೇಹಿತರ ವಿರುದ್ಧ ದೂರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಆನ್‌ಲೈನ್ ಗೇಮ್ ಶೋಕಿಗೆ ಬಲಿಯಾದ 8ನೇ ತರಗತಿ ವಿದ್ಯಾರ್ಥಿ: ದಾವಣಗೆರೆಯ ಚನ್ನಗಿರಿಯಲ್ಲಿ 4.11 ಲಕ್ಷ ರೂ. ವಸೂಲಿ ಮಾಡಿ ಪ್ರಚೋದನೆ ನೀಡಿದ್ದ ಸ್ನೇಹಿತರ ವಿರುದ್ಧ ದೂರು!

Share
ದಾವಣಗೆರೆ
Share

ದಾವಣಗೆರೆ/ಚನ್ನಗಿರಿ: ಆನ್‌ಲೈನ್ Free Fire ಗೇಮ್ ಐಡಿ ನೀಡುವ ಆಸೆಗೆ ಬಿದ್ದು, ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮನೋಜ್ ಟಿ.ಆರ್. (13) ಮೃತ ದುರ್ದೈವಿಯಾಗಿದ್ದಾನೆ. ಗೇಮ್ ಐಡಿ ನೀಡುವುದಾಗಿ ನಂಬಿಸಿ ಬಾಲಕನಿಂದ ಬರೋಬ್ಬರಿ 4.11 ಲಕ್ಷ ರೂಪಾಯಿ ಹಣ ವಸೂಲಿ ಮಾಡಿ, ಕೊಲೆ ಬೆದರಿಕೆಯೊಡ್ಡಿದ್ದರಿಂದ ಮನನೊಂದು ಬಾಲಕ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾನೆ.

ಘಟನೆಯ ವಿವರಗಳ ಪ್ರಕಾರ, ಅದೇ ಗ್ರಾಮದ ಮನು ಹಾಗೂ ಆತನ ಇತರ ಐವರು ಸ್ನೇಹಿತರು ಮನೋಜ್‌ಗೆ ಫ್ರೀ ಫೈರ್ ಗೇಮ್‌ನ 105ನೇ ಲೆವೆಲ್ ಐಡಿ ನೀಡುವುದಾಗಿ ಆಸೆ ತೋರಿಸಿದ್ದರು. ಆರಂಭದಲ್ಲಿ 6,000 ರೂಪಾಯಿ ಪಡೆದಿದ್ದ ಆರೋಪಿಗಳು, ಬಳಿಕ ಹಂತ ಹಂತವಾಗಿ ಮನೆಯ ತಿಜೋರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಾರೆ. ಮನೆಯ ತಿಜೋರಿಯ ಒಂದು ಕೀಲಿ ಕೈ ಇಟ್ಟುಕೊಂಡಿದ್ದ ಮನೋಜ್, ಪೋಷಕರಿಗೆ ತಿಳಿಯದಂತೆ 4 ಲಕ್ಷ ರೂ. ನಗದು ಹಾಗೂ ತಂದೆ-ತಾಯಿಯ ಮೊಬೈಲ್‌ನಿಂದ 11,000 ರೂ. ಫೋನ್ ಪೇ ಮೂಲಕ ವರ್ಗಾವಣೆ ಮಾಡಿದ್ದ. ಹಣ ಕೊಡದಿದ್ದರೆ ನಿನ್ನನ್ನು ಹಾಗೂ ನಿನ್ನ ಅಣ್ಣನನ್ನು ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆಯೊಡ್ಡಿದ್ದರು.

ಸೆಪ್ಟೆಂಬರ್ 6ರಂದು ವಿಚಾರ ತಿಳಿದ ಪೋಷಕರು ಧೈರ್ಯ ತುಂಬಿದ್ದರೂ, ಸೆಪ್ಟೆಂಬರ್ 7ರ ಸಂಜೆ ಯಾರೂ ಇಲ್ಲದ ವೇಳೆ ಮನೋಜ್ ಫ್ಯಾನ್‌ಗೆ ಪಂಚೆಯಿಂದ ನೇಣು ಬಿಗಿದುಕೊಂಡಿದ್ದಾನೆ.

ಆರೋಪಿಗಳ ಬಂಧನಕ್ಕೆ ಒತ್ತಾಯ: ಬಾಲಕನ ಆತ್ಮಹತ್ಯೆಗೆ ಕಾರಣರಾದ ಮನು, ಬೊಮ್ಮಲಿಂಗ, ಮಣಿ, ಸಂಜು ಹಾಗೂ ಯಶವಂತ್ ಅವರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಪೋಷಕರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚನ್ನಗಿರಿ ಠಾಣೆಯಲ್ಲಿ ದೂರು: ಮೃತ ಬಾಲಕನ ತಂದೆ ರೇವಣ್ಣ ನೀಡಿದ ದೂರಿನನ್ವಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳ ಮೇಲಿನ ನಿಗಾ ವಹಿಸಲು ಮನವಿ: ಮಕ್ಕಳ ಕೈಗೆ ಮೊಬೈಲ್ ಕೊಡುವಾಗ ಪೋಷಕರು ಎಚ್ಚರಿಕೆಯಿಂದ ಇರಬೇಕು ಮತ್ತು ಅವರು ಗೇಮಿಂಗ್ ಹುಚ್ಚಿಗೆ ಬೀಳದಂತೆ ಗಮನಹರಿಸಬೇಕು ಎಂದು ಊರಿನ ಮುಖಂಡರು ಮನವಿ ಮಾಡಿದ್ದಾರೆ.

ಆನ್‌ಲೈನ್ ಗೇಮಿಂಗ್ ಜಾಲಕ್ಕೆ ಬಲಿಯಾಗಿ ಇನ್ನೊಬ್ಬ ಅಮಾಯಕ ಬಾಲಕ ಜೀವ ಕಳೆದುಕೊಂಡಿರುವುದು ದುರದೃಷ್ಟಕರವಾಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಿ ನ್ಯಾಯ ಒದಗಿಸಿಕೊಡಬೇಕೆಂದು ಪಾಂಡೋಮಟ್ಟಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *