ನವದೆಹಲಿ: ಭಾರತದ ಚುನಾವಣಾ ಆಯೋಗದ (ECI) ಕಾರ್ಯವೈಖರಿ, ಇವಿಎಂ (EVM) ವಿಶ್ವಾಸಾರ್ಹತೆ ಮತ್ತು ಮತದಾರರ ಪಟ್ಟಿಯ ನವೀಕರಣ ಪ್ರಕ್ರಿಯೆ (SIR) ಕುರಿತು ದೇಶದ ಮಾಜಿ ಹಾಗೂ ಹಾಲಿ ನ್ಯಾಯಮೂರ್ತಿಗಳ ನಡುವೆ ಬಹಿರಂಗ ವಾಕ್ಸಮರ ತೀವ್ರಗೊಂಡಿದೆ.
ಒಂದು ಕಡೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ 42ಕ್ಕೂ ಹೆಚ್ಚು ಮಾಜಿ ನ್ಯಾಯಾಧೀಶರು ಜಂಟಿ ಬಹಿರಂಗ ಪತ್ರದ ಮೂಲಕ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ನಿರಂತರ ವಾಗ್ದಾಳಿಯನ್ನು ಖಂಡಿಸಿದ್ದರೆ, ಮತ್ತೊಂದೆಡೆ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಹಾಗೂ ಹಾಲಿ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು ಆಯೋಗದ ನಿರ್ಧಾರಗಳ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾದ ಜಸ್ಟಿಸ್ ಹೇಮಂತ್ ಗುಪ್ತಾ ಮತ್ತು ಜಸ್ಟಿಸ್ ಪಂಕಜ್ ಮಿತ್ತಲ್ ಸೇರಿದಂತೆ 42 ಪ್ರಮುಖ ಮಾಜಿ ನ್ಯಾಯಾಧೀಶರು ಸಹಿ ಮಾಡಿರುವ ಪತ್ರದಲ್ಲಿ, ಸಂಸ್ಥೆಗಳ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದನ್ನು ಖಂಡಿಸಲಾಗಿದೆ. “ವಿಶ್ವಾಸವೇ ಪ್ರಜಾಪ್ರಭುತ್ವದ ಅಡಿಪಾಯ. ಸಂಸ್ಥೆಗಳನ್ನು ಟೀಕಿಸುವುದು ಪ್ರಜಾಸತ್ತಾತ್ಮಕ ಹಕ್ಕು, ಆದರೆ ತೇಜೋವಧೆ ಮಾಡುವುದು ಅಥವಾ ನಿಂದಿಸುವುದು ಹಕ್ಕಲ್ಲ” ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
90 ಲಕ್ಷ ಮತದಾರರ ಹಕ್ಕು ಕಡಿತ ಕಳವಳ: ಪಶ್ಚಿಮ ಬಂಗಾಳದ ಚುನಾವಣಾ ಪಟ್ಟಿ ನವೀಕರಣ ವೇಳೆ 90 ಲಕ್ಷ ಮತದಾರರ ಹಕ್ಕು ಕಡಿತಗೊಂಡಿದ್ದು ಅತ್ಯಂತ ಆತಂಕಕಾರಿ ವಿಷಯ. ಸುಪ್ರೀಂ ಕೋರ್ಟ್ ತಕ್ಷಣವೇ ಇದರಲ್ಲಿ ಮಧ್ಯಪ್ರವೇಶಿಸಬೇಕಿತ್ತು ಎಂದು ಮಾಜಿ ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಕಳವಳ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ವಿರೋಧಿ ನಡವಳಿಕೆ: ದೇಶದ ಯಾವುದೇ ನಾಗರಿಕನ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಕ್ರಿಯೆಯು ಸಂವಿಧಾನದ ಮೂಲ ತತ್ವಗಳನ್ನೇ ನಿರಾಕರಿಸಿದಂತೆ. ಇದನ್ನು ಯಾವುದೇ ಪ್ರಾಧಿಕಾರ ಅಥವಾ ನ್ಯಾಯಾಲಯ ಸಮರ್ಥಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಹೇಳಿದ್ದಾರೆ.
ಪ್ರಮಾಣಪತ್ರ ಸಲ್ಲಿಕೆಗೆ ಹಿಂಜರಿಕೆ: ರಾಜಕೀಯ ಪಕ್ಷಗಳು “ವೋಟ್ ಕಳ್ಳತನ” ಮತ್ತು ಇವಿಎಂ ಅಕ್ರಮಗಳ ಆರೋಪಗಳನ್ನು ಕೋರ್ಟ್‌ಗಳ ಎದುರು ಪ್ರಮಾಣಪತ್ರದ (Affidavit) ಮೂಲಕ ಸಲ್ಲಿಸದೆ, ಕೇವಲ ಪತ್ರಿಕಾಗೋಷ್ಠಿಗಳಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿವೆ ಎಂದು ಮಾಜಿ ನ್ಯಾಯಾಧೀಶರ ಪತ್ರದಲ್ಲಿ ಚಾಟಿಯೇಟು ಬೀಸಲಾಗಿದೆ.
ರಾಜಕೀಯ ಲಾಭಕ್ಕಾಗಿ ವಾಗ್ದಾಳಿ: ಐದು ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಚುನಾವಣೆಯಲ್ಲಿ ಸೋತಾಗ ಮಾತ್ರ ಇವಿಎಂ ಹಾಗೂ ಚುನಾವಣಾ ವ್ಯವಸ್ಥೆಯನ್ನು ದೂಷಿಸುತ್ತವೆ, ಅದೇ ವ್ಯವಸ್ಥೆಯಲ್ಲಿ ಗೆದ್ದಾಗ ಮೌನ ವಹಿಸುತ್ತವೆ ಎಂದು ಪತ್ರದಲ್ಲಿ ತೀಕ್ಷ್ಣವಾಗಿ ವಿಮರ್ಶಿಸಲಾಗಿದೆ.
ವಿರೋಧ ಪಕ್ಷಗಳು ಮತ್ತು ಕೆಲವು ಸಕ್ರಿಯ ಸಂಘಟನೆಗಳು ನ್ಯಾಯಾಲಯಗಳನ್ನು ತಮ್ಮ ಪ್ರಚಾರದ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿವೆ. ತೀರ್ಪುಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಬಂದಾಗ ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ಆಧಾರರಹಿತ ವಿಟ್ರಿಯೋಲ್ (ವಿಷಪೂರಿತ ಪ್ರಚಾರ) ಹರಡಿ ಸಾರ್ವಜನಿಕರ ನಂಬಿಕೆಯನ್ನು ಕುಸಿಯುವಂತೆ ಮಾಡುತ್ತಿವೆ ಎಂದು ಮಾಜಿ ನ್ಯಾಯಮೂರ್ತಿಗಳ ಪತ್ರದಲ್ಲಿ ಆರೋಪಿಸಲಾಗಿದೆ.
- Election Commission of India
- EVM Controversy
- Indian politics news
- Justice Hemant Gupta
- Justice Rohinton Nariman
- Justice Ujjal Bhuyan
- Right to Vote
- SIR Controversy
- Supreme Court of India
- ಇವಿಎಂ ವಿವಾದ
- ಚುನಾವಣಾ ಆಯೋಗ
- ಜಸ್ಟಿಸ್ ಉಜ್ಜಲ್ ಭುಯಾನ್
- ಜಸ್ಟಿಸ್ ರೋಹಿಂಟನ್ ನಾರಿಮನ್
- ಜಸ್ಟಿಸ್ ಹೇಮಂತ್ ಗುಪ್ತಾ
- ಪಶ್ಚಿಮ ಬಂಗಾಳ ಚುನಾವಣೆ
- ಮತದಾನದ ಹಕ್ಕು
- ಸುಪ್ರೀಂ ಕೋರ್ಟ್





Leave a comment