SUDDIKSHANA KANNADA NEWS/ DAVANAGERE/ DATE:21-11-2024
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ತಾಂತ್ರಿಕ ಶಾಖೆಯ ವರ್ಕ್ ಇನ್ ಸ್ಪೆಕ್ಟರ್ ರೈಲಿಗೆ ತಲೆಕೊಟ್ಟು ಅರುಣಾ ಸರ್ಕಲ್ ಬಳಿ ಇರುವ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸದ್ದು ಮಾಡಿತ್ತು. ಕಾರಣ ಸ್ಪಷ್ಟವಾಗಿರಲಿಲ್ಲ. ಆದ್ರೆ, ಆತ್ಮಹತ್ಯೆಗೆ ಕಾರಣವೇನು ಎಂಬುದು ಗೊತ್ತಾಗಿದೆ. ಸ್ವತಃ ಪಾಲಿಕೆ ಆಯುಕ್ತೆ ರೇಣುಕಾ ಅವರೇ ತಿಳಿಸಿದ್ದಾರೆ. ಇನ್ನು ಪಾಲಿಕೆ ನಾಮನಿರ್ದೇಶಿತ ಸಾಗರ್ ಸಹ ಮಾಹಿತಿ ನೀಡಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಪಾಲಿಕೆ ಮೇಯರ್ ಕೆ. ಚಮನ್ ಸಾಬ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಕುರಿತಂತೆ ಸುದೀರ್ಘವಾಗಿ ಚರ್ಚೆ ನಡೆಯಿತು. ವರ್ಕ್ ಇನ್ ಸ್ಪೆಕ್ಟರ್ ಲಕ್ಷ್ಮಣ್ ಸಾವಿಗೆ ಕಾರಣವೇನು ಎಂಬ ಕುರಿತಂತೆ ಸಾಗರ್ ಮಾಹಿತಿ ನೀಡಿದರು. ಮಾತ್ರವಲ್ಲ, ಕಾರಣವೇನು ಎಂಬುದನ್ನು ಬಹಿರಂಗಪಡಿಸಿದರು. ವೇತನ ಆಗಿಲ್ಲ, ಸಸ್ಪೆಂಡ್ ಆಗಿದ್ಯಾಕೆ? ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗುವಂಥ ನಿರ್ಧಾರಕ್ಕೆ ಬಂದಿದ್ದು ಯಾಕೆ ಎಂಬ ಕುರಿತಂತೆಯೂ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಮಾತನಾಡಿದ ಸಾಗರ್ ಅವರು, ನಿಟ್ಟುವಳ್ಳಿ ವಾಸಿಯಾದ ಲಕ್ಷ್ಮಣ್ ಪೌರಕಾರ್ಮಿಕರಾಗಿದ್ದರು. ಆ ಬಳಿಕ ತಾಂತ್ರಿಕ ಶಾಖೆಯ ವರ್ಕ್ ಇನ್ ಸ್ಪೆಕ್ಟರ್ ಆಗಿ ಹೋಗಿದ್ದರು. ಲಕ್ಷ್ಮಣ್ ಸತ್ತು ಮೂರು ದಿನವಾಗಿದೆ. ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮಣ್ ಅವರ ಅಂತಿಮ ದರ್ಶನಕ್ಕೆ ಯಾವೊಬ್ಬ ಅಧಿಕಾರಿಗಳೂ ಹೋಗಿಲ್ಲ. ಜೆಇ ಸಹ ಭೇಟಿ ನೀಡಿಲ್ಲ. ಕಾರ್ಮಿಕರನ್ನು ಕೀಳಾಗಿ ನೋಡುವ ಅಧಿಕಾರಿಗಳ ಪ್ರವೃತ್ತಿ ಸರಿಯಲ್ಲ. ಕನಿಷ್ಠ ಮೃತರ ಮನೆಗೆ ಹೋಗಿ ಸಂತಾಪ ಸೂಚಿಸುವ ಕೆಲಸವನ್ನೂ ಅಧಿಕಾರಿಗಳು ಮಾಡದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕಾರ್ಮಿಕರಾಗಿದ್ದಾಗ ಅಧಿಕಾರಿಗಳಿಗೆ ಕೆಲಸ ಬೇಕು. ಅವರಿಂದ ಹೆಚ್ಚು ಕೆಲಸ ತೆಗೆದುಕೊಳ್ಳುತ್ತಾರೆ. ಕಾರ್ಮಿಕರು ಮತ್ತು ಅಧಿಕಾರಿಗಳ ಜೊತೆ ಬಾಂಧವ್ಯ ಇರಬೇಕು. ಮೃತಪಟ್ಟ ವೇಳೆಯಲ್ಲಾದರೂ ಗೌರವ ಸೂಚಿಸಬೇಕು. ಯುಜಿಡಿಯಲ್ಲಿ ಹೆಚ್ಚು ಕೆಲಸ ಇಲ್ಲದ ಕಾರಣ ಬೇರೆ ಶಾಖೆಗೆ ವರ್ಗಾವಣೆಯಾಗಿದ್ದರು. ವಾರ್ಡ್ ನ ದೆಫೇದಾರ್ ಮತ್ತಿತರರು ಇದ್ದರೂ ಮಣ್ಣಿಗೆ ಹಣ ನೀಡುತ್ತಾರೆ. ಕೈಯಲ್ಲಿದ್ದಷ್ಟು ಕೊಟ್ಟು ಬಂದು ಆ ಬಳಿಕ ಪಾಲಿಕೆ ವತಿಯಿಂದ ಪಡೆದುಕೊಳ್ಳುತ್ತಾರೆ. ಆದ್ರೆ, ದಪೇದಾರ್ ಸಹಿತ ಯಾರೂ ಹೋಗದಿರುವುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಪೌರಕಾರ್ಮಿಕರಿಗೂ ಕೌಟುಂಬಿಕ ಸಮಸ್ಯೆಗಳಿರುತ್ತವೆ. ಅವರ ಪತ್ನಿಯೂ ಪೌರಕಾರ್ಮಿಕರು. ಇಬ್ಬರು ಬೆಳಿಗ್ಗೆ ಕೆಲಸಕ್ಕೆ ಬಂದರೆ ಹೋಗುವುದು ಸಂಜೆಯಾಗುತಿತ್ತು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡಲು ಆಗುತ್ತಿಲ್ಲ ಎಂಬ ಕೊರಗು ಲಕ್ಷ್ಮಣ್ ಅವರಲ್ಲಿತ್ತು. ಜೊತೆಗೆ ಕೌಟುಂಬಿಕ ಸಮಸ್ಯೆಯೂ ಇತ್ತು. ಈ ಕಾರಣಕ್ಕೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಇನ್ನು ಮುಂದೆ ಈ ರೀತಿ ಆಗದಂತೆ ಕಾರ್ಮಿಕರು, ಪಾಲಿಕೆ ಸಿಬ್ಬಂದಿಗೆ ಸತ್ತಾಗಲಾದರೂ ಸ್ಪಂದಿಸುವ ಕೆಲಸ ಮಾಡುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರಲ್ಲದೇ, ಅಧಿಕಾರಿಗಳ ಒತ್ತಡ, ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮೇಯರ್ ಕೆ. ಚಮನ್ ಸಾಬ್, ಲಕ್ಷ್ಮಣ್ ಸತ್ತಾಗ ಹೋಗಿ ನೋಡಲು ಆಗಿಲ್ಲ, ಅಧಿಕಾರಿಗಳು ಸ್ಪಂದಿಸಿಲ್ಲ ಎನ್ನುವುದು ದುರದೃಷ್ಟಕರ. ಇದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ನಮಗೂ ಅಂತ್ಯಸಂಸ್ಕಾರ ನೆರವೇರಿಸುವ ಸಮಯ ಗೊತ್ತಾಗಿರಲಿಲ್ಲ. ಮಾಹಿತಿಯೂ ಇರಲಿಲ್ಲ. ಆದ ಕಾರಣ ಹೋಗಲು ಸಾಧ್ಯವಾಗಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇನ್ನು ಮುಂದೆ ಇಂಥ ಘಟನೆಯಾಗದಂತೆ ಎಚ್ಚರ ವಹಿಸುವಂತೆ ಸೂಚಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಲಕ್ಷ್ಮಣ್ ಯುಜಿಡಿ ನೌಕರನಾಗಿದ್ದ. ಆತನ ಮೇಲೆ ಎರಡು ಕೇಸ್ ದಾಖಲಾಗಿದ್ದವು. ಮ್ಯಾನ್ ಹೋಲ್ ನಲ್ಲಿ ಪರಶುರಾಮ್ ಎಂಬಾತನನ್ನು ಇಳಿಸಿದ್ದು, ಮತ್ತೊಂದು ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಪರಶುರಾಮ್ ಮ್ಯಾನ್ ಹೋಲ್ ನಲ್ಲಿ ಇಳಿಸಿದ್ದ ಕಾರಣ ದೂರು ಬಂದಿತ್ತು. ಆನಂತರ ತಪ್ಪಿಲ್ಲ ಎಂಬುದು ಗೊತ್ತಾಗಿತ್ತು. ಆದ್ರೆ, ಅಟ್ರಾಸಿಟಿ ಕೇಸ್ ದಾಖಲಾದ ಬಳಿಕ ಸೇವೆಗೆ ಸರಿಯಾಗಿ ಬರುತ್ತಿರಲಿಲ್ಲ. ಜೊತೆಗೆ ನಾಪತ್ತೆಯೂ ಆಗಿದ್ದ. ಆ ಬಳಿಕ ಬಂದು ನನಗೆ ಆರೋಗ್ಯ ಸಮಸ್ಯೆ ಇತ್ತು ಎಂದು ವೈದ್ಯರ ಸರ್ಟಿಫಿಕೇಟ್ ನೀಡಿದ್ದ. ಮಾನವೀಯತೆ ದೃಷ್ಟಿಯಿಂದ ಆತನ ಸಂಬಳ ಪಾವತಿಸಲಾಗಿದೆ. ಇನ್ನು ಹದಿನೈದು ಸಾವಿರವಷ್ಟೇ ನೀಡಬೇಕಾಗಿದ್ದು, ಪ್ರಕ್ರಿಯೆ ಮುಗಿದಿದೆ. ಆರ್ ಟಿಜಿಎಸ್ ಮೂಲಕ ಹಣ ಅವರ ಅಕೌಂಟ್ ಗೆ ಇಂದು ಸಂದಾಯವಾಗಲಿದೆ ಎಂದು ತಿಳಿಸಿದರು.
ಲಕ್ಷ್ಮಣ್ ಹೊರಗಡೆ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಯುಜಿಡಿ ಹೆಲ್ಪರ್ ಆಗಿದ್ದ ಪರಶುರಾಮ್ ಅತಿಯಾದ ಮದ್ಯಸೇವನೆಯಿಂದ ಮೃತಪಟ್ಟಿದ್ದರು. ಆದ್ರೆ, ಲಕ್ಷ್ಮಣ್ ಗೆ ಅಧಿಕಾರಿಗಳ ಯಾವುದೇ ಕಿರುಕುಳ ಇರಲಿಲ್ಲ, ವೇತನವನ್ನೂ ಪಾವತಿಸಲಾಗಿತ್ತು. ಆದ್ರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಮುಂದೆ ಅಧಿಕಾರಿಗಳ ಲೋಪ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದರು.
ಮಾಜಿ ಮೇಯರ್ ಎಸ್. ಟಿ. ವೀರೇಶ್ ಮಾತನಾಡಿ, ಲಕ್ಷ್ಮಣ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾದ ಬಳಿಕ ಬೆದರಿಸುವ, ಹಣಕ್ಕೆ ಬೇಡಿಕೆಯೊಡ್ಡುತ್ತಿದ್ದರು ಎಂಬ ಮಾಹಿತಿಯೂ ಇದೆ. ಈ ಬಗ್ಗೆ ತನಿಖೆ ನಡೆಸಬೇಕು. ಅಧಿಕಾರಿಗಳು, ಸಿಬ್ಬಂದಿ ಹೆದರಿಸುವಂಥ ಕೃತ್ಯಕ್ಕೆ ಕಡಿವಾಣ ಹಾಕಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.