ಉದಯಪುರ (ರಾಜಸ್ಥಾನ): ರಾಜಸ್ಥಾನದ ಉದಯಪುರದಲ್ಲಿ ರಾತ್ರಿ ವೇಳೆ ಲೈವ್ಸ್ಟ್ರೀಮ್ ಮಾಡುತ್ತಿದ್ದ ಥಾಯ್-ಫ್ರೆಂಚ್ ಮೂಲದ ಮಹಿಳಾ ಯೂಟ್ಯೂಬರ್ ಒಬ್ಬರಿಗೆ ಅಸಭ್ಯವಾಗಿ ವರ್ತಿಸಿ, ಪದೇಪದೇ ‘ಲಿಪ್ ಕಿಸ್’ ಕೇಳುವ ಮೂಲಕ ಕಿರುಕುಳ ನೀಡಿದ ಆಟೋ ಚಾಲಕನನ್ನು ಉದಯಪುರ ಪೊಲೀಸರು ಬಂಧಿಸಿದ್ದಾರೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
विदेशी महिला के साथ छेड़छाड़ के मामले में त्वरित कार्रवाई करते हुए आरोपी को गिरफ्तार कर थाना सूरजपोल पर प्रकरण दर्ज किया गया है। प्रकरण में नियमानुसार कार्रवाई जारी है।
पर्यटकों की सुरक्षा, सम्मान एवं गरिमा से खिलवाड़ करने वालों के विरुद्ध सख्त कानूनी कार्रवाई की जाएगी। pic.twitter.com/qzgueUoNJo
— Udaipur Police (@UdaipurPolice) November 16, 2026
‘ಜಸ್ಟ್ಕೆತ್’ ಎಂಬ ಹೆಸರಿನ ಯೂಟ್ಯೂಬರ್ ಸಾರ್ವಜನಿಕ ಪ್ರದೇಶದಲ್ಲಿ ವ್ಲಾಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ವೀಡಿಯೊ ವೈರಲ್ ಆದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಯನ್ನು ಉದಯಪುರದ ಮಹಾರಾಜ್ ಕಾ ಅಖಾಡ ನಿವಾಸಿ 23 ವರ್ಷದ ಆಫ್ತಾಬ್ ಅಲಿಯಾಸ್ ಗಬ್ರು (Aftab alias Gabru) ಎಂದು ಗುರುತಿಸಲಾಗಿದೆ. ನವೆಂಬರ್ 13ರಂದು ಟೌನ್ ಹಾಲ್ನಲ್ಲಿ ನಡೆಯುತ್ತಿದ್ದ ನಗರಪಾಲಿಕೆ ಮೇಳದಲ್ಲಿ ಯೂಟ್ಯೂಬರ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಲೈವ್ಸ್ಟ್ರೀಮ್ ಮಾಡುತ್ತಿದ್ದಾಗ, ಆಕೆಯನ್ನು ಎರಡು ದಿನಗಳಿಂದ ಆಟೋದಲ್ಲಿ ಸುತ್ತಾಡಿಸಿದ್ದ ಚಾಲಕ ಆಫ್ತಾಬ್ ಹತ್ತಿರ ಬಂದು “ಒನ್ ಕಿಸ್ ಪ್ಲೀಸ್, ಒನ್ ಲಿಪ್ ಕಿಸ್” ಎಂದು ಪದೇಪದೇ ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದರೂ ಕೇಳದ ಆತ, ಬಳಿಕ ಫೋಟೋ ತೆಗೆಸಿಕೊಂಡು ಅಲ್ಲಿಂದ ತೆರಳಿದ್ದಾನೆ.
150 ಸಿಸಿಟಿವಿ ಪರಿಶೀಲನೆ, ಆರೋಪಿ ಬಂಧನ: ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ 50 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಸೂರಜ್ಪೋಲ್ ಪೊಲೀಸರು ಸುಮಾರು 150 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 296ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ವೀಡಿಯೊ ಮೂಲಕ ಕ್ಷಮೆಯಾಚನೆ: ಬಂಧನದ ಬಳಿಕ ಆರೋಪಿ ಆಫ್ತಾಬ್ ತನ್ನ ಕೃತ್ಯಕ್ಕೆ ತೀವ್ರ ನಾಚಿಕೆಯಾಗುತ್ತಿದೆ ಎಂದು ವೀಡಿಯೊ ಮೂಲಕ ಕ್ಷಮೆಯಾಚಿಸಿದ್ದು, ಹೊರಗಿನಿಂದ ಬರುವ ಅತಿಥಿಗಳು ಹಾಗೂ ಮಹಿಳೆಯರನ್ನು ಗೌರವಿಸುವಂತೆ ಮನವಿ ಮಾಡಿದ್ದಾನೆ.
ಪೊಲೀಸರ ಖಡಕ್ ಎಚ್ಚರಿಕೆ: ಪ್ರವಾಸಿಗರ ಸುರಕ್ಷತೆ, ಗೌರವ ಮತ್ತು ಘನತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉದಯಪುರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.





Leave a comment