SUDDIKSHANA KANNADA NEWS/ DAVANAGERE/ DATE-30-04-2025
ದಾವಣಗೆರೆ: ಭಕ್ತಿ ಭಂಡಾರಿ ಬಸವಣ್ಣನವರು ನುಡಿದಂತೆ ಸಮಸಮಾಜದ ನಿರ್ಮಾಣ ಪ್ರಸ್ತುತ ಸಂದರ್ಭಕ್ಕೆ ಅಗತ್ಯವಿದೆ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಬುಧವಾರ ನಡೆದ ಗ್ರಾಮದೇವತೆ ಊರಮ್ಮದೇವಿಯ ದೇವಸ್ಥಾನದ ಲೋಕಾರ್ಪಣೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಸವಣ್ಣನವರು ನುಡಿದಂತೆ ನಾವೆಲ್ಲರೂ ಬಹಿರಂಗ ಶುದ್ದಿಯ ಜೊತೆಗೆ ಅಂತರಂಗದ ಶುದ್ದಿ ಮಾಡಿಕೊಳ್ಳಬೇಕು. ಸಮಾಜದಲ್ಲಿ ಸಮಾನತೆ, ಭ್ರಾತೃತ್ವ, ಶಾಂತಿ, ನೆಮ್ಮದಿಯ ಸಂದೇಶವನ್ನು 12 ನೇ ಶತಮಾನದಲ್ಲಿ ಅಂದರೆ 900 ವರ್ಷಗಳ ಹಿಂದೆ ಬಸವಣ್ಣನವರು ಹೇಳಿದ್ದರು. ಅಂದು ನಮ್ಮ ಶಿವಶರಣರು ಕಲ್ಯಾಣ ಕ್ರಾಂತಿಯನ್ನೇ ಮಾಡಿದ್ದರು ಎಂದು ಹೇಳಿದರು.
ಅನುಭವ ಮಂಟಪದಲ್ಲಿ ಯಾವುದೇ ಜಾತಿ ಬೇಧವಿಲ್ಲದೇ ಸರ್ವರನ್ನು ಸಮಾನವಾಗಿ ಕಂಡ ಸಂಸತ್ತು ಇತ್ತು.ನಂತರ ನಮ್ಮ ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಎಲ್ಲರಿಗೂ ಸಮಾನತೆ ಪ್ರತಿಪಾದಿಸಿದರು ಎಂದರು.
ಇಂದಿಗೂ ಬಸವಣ್ಣನವರು ಹಾಗೂ ಶಿವಶರಣರು ಕಂಡ ಸಮಸಮಾಜ ನಿರ್ಮಾಣವಾಗಬೇಕು. ಊರಮ್ಮದೇವಿ ಜಾತ್ರೆಯಲ್ಲಿ ಮೊದಲೆಲ್ಲಾ ಗ್ರಾಮದಲ್ಲಿ ನಾಟಕ ಪ್ರದರ್ಶನ ನಡೆಸಲಾಗುತ್ತಿತ್ತು.ಆದರಿಂದು ಮೊಬೈಲ್ ಗಳು ಬಂದು ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಆದರೆ ನಮ್ಮ ಬಾಲ್ಯದ ಅಂದಿನ ಸಮಯ ಸುವರ್ಣಯುಗವಾಗಿತ್ತು ಎಂದು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.
ಗ್ರಾಮೀಣಭಾಗದಲ್ಲಿ ಸೌಲಭ್ಯಗಳು ಸರಿಯಾಗಿ ದೊರೆಯಬೇಕಿದೆ.ಜಲಜೀವನ್ ಮಿಷನ್ ಮೂಲಕ ಗ್ರಾಮೀಣಭಾಗದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ 24 ತಾಸು ನೀರಿನ ಸೌಲಭ್ಯ ಒದಗಿಸಲಾಗಿದೆ. ದಾವಣಗೆರೆ ಜಿಲ್ಲೆಯ ಮೂರು ಗ್ರಾಮಗಳಲ್ಲಿ ನಿರಂತರ ನೀರು ಸೌಲಭ್ಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಕಕ್ಕರಗೊಳ್ಳ ಗ್ರಾಮದಲ್ಲಿಯೂ ಈ ಸೌಲಭ್ಯ ಒದಗಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.
2019 ರಲ್ಲಿ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಎಸ್ ಎಸ್ ಕೇರ್ ಟ್ರಸ್ಟ್ ಸ್ಥಾಪಿಸಲಾಗಿದ್ದು ಈ ಮೂಲಕ ಕಕ್ಕರಗೊಳ್ಳ ಗ್ರಾಮದಲ್ಲಿ ಹಲವಾರು ಉಚಿತ ಆರೋಗ್ಯ ಸೇವೆ ಒದಗಿಸಲಾಗಿದೆ. ಇದರೊಂದಿಗೆ ಎಸ್ ಎಸ್ ಕೇರ್ ಟ್ರಸ್ಟ್ ನಿಂದ ಮೂರು ಉಚಿತ ಸೇವೆಗಳನ್ನು ಮಾಡಲಾಗುತ್ತಿದ್ದು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ಡಯಾಲಿಸಿಸ್ ಸೇವೆ ಒದಗಿಸಲಾಗುತ್ತಿದೆ ಈಗಾಗಲೇ ಸುಮಾರು 600 ಕ್ಕೂ ಹೆಚ್ಚು ಡಯಾಲಿಸಿಸ್ ಮಾಡಲಾಗಿದೆ.15 ರಿಂದ 20 ಲಕ್ಷ ಇದಕ್ಕಾಗಿ ಮೀಸಲಿಡಲಾಗಿದೆ. ಉಳಿದಂತೆ ಮಹಿಳೆಯರಿಗೆ ಹೆರಿಗೆ ಸೇವೆ ಹಾಗೂ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಆರು ವರ್ಷದಿಂದ ಈ ಎಲ್ಲಾ ಸೇವೆ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯಾದ್ಯಂತ ವಿಸ್ತರಿಸಲಾಗುತ್ತಿದೆ.ಕಕ್ಕರಗೊಳ್ಳ ಹಾಗೂ ಅರಸಾಪುರ ಗ್ರಾಮ ದತ್ತು ಪಡೆದು ವಾರದಲ್ಲಿ ಐದು ದಿನ ವೈದ್ಯರು ಆಗಮಿಸಿ ತಪಾಸಣೆ ಮಾಡುತ್ತಿದ್ದಾರೆಂದು ತಿಳಿಸಿದರು.
ಕಕ್ಕರಗೊಳ್ಳ ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.ಮೊದಲೆಲ್ಲಾ ಗ್ರಾಮೀಣ ಭಾಗದಲ್ಲಿ ಕೂಡು ಕುಟುಂಬದ ಕಲ್ಪನೆ ಇತ್ತು.ನಾನೂ ಕೂಡ ಒಟ್ಟು ಕುಟುಂಬದಲ್ಲಿ ಬೆಳೆದು ಶಾಮನೂರು ಕುಟುಂಬದ ಸೊಸೆಯಾಗಿದ್ದೇನೆ. ನನ್ನ ತವರು
ಮನೆ ಹಾಗೂ ಪತಿಯ ಮನೆ ಎರಡರಲ್ಲೂ ನನಗೆ ದೊರೆತ ಸಹಕಾರ, ಪ್ರೀತಿ, ವಿಶ್ವಾಸ ಹಾಗೂ ಬೆಂಬಲಕ್ಕೆ ನಾನು ಸದಾ ಚಿರರುಣಿಯಾಗಿದ್ದೇನೆ ಎಂದರು.
ಗ್ರಾಮದ ಮಹಿಳೆಯರು ಸ್ವ ಸಹಾಯ ಸಂಘಕ್ಕೆ ಸಾಕಷ್ಟು ಅನುದಾನ ಬರುತ್ತದೆ. ಅದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಗ್ರಾಮದ ಮುಖಂಡರಾದ ಕೆ.ಜಿ ಬಸವನಗೌಡ್ರು, ದಾವಣಗೆರೆ ವಿವಿ ಉಪಕುಲಪತಿಗಳಾದ ಪ್ರೊ. ಬಿ. ಡಿ ಕುಂಬಾರ್, ಮುಖಂಡರಾದ ಸಿದ್ದಪ್ಪ, ಎನ್. ಜಿ. ಪುಟ್ಟಸ್ವಾಮಿ ಸೇರಿದಂತೆ ಕಕ್ಕರಗೊಳ್ಳ ಗ್ರಾಮಸ್ಥರು ಉಪಸ್ಥಿತರಿದ್ದರು. ಇದೇ ವೇಳೆ ಗ್ರಾಮದಲ್ಲಿ ಸಂಸದರ ಅನುದಾನದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.