ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

’ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ’’: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಆಗ್ರಹ!

On: April 30, 2025 6:38 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-30-04-2025

ಬೆಂಗಳೂರು: ಜನಗಣತಿ ಜೊತೆಯಲ್ಲಿ ಜಾತಿ ಗಣತಿಯನ್ನೂ ನಡೆಸುವ ಕೇಂದ್ರ ಸರ್ಕಾರದ ತೀರ್ಮಾನವನ್ನು ನಮ್ಮ ಸರ್ಕಾರ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ. ಇದೇ ಸಂದರ್ಭದಲ್ಲಿ ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಪಡಿಸುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕದಲ್ಲಿ ನಾವು ಕೇವಲ ಜಾತಿ ಗಣತಿ ನಡೆಸದೆ ಅದರ ಜೊತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ನಡೆಸಿದ್ದೇವೆ. ಈ ದತ್ತಾಂಶಗಳ ಆಧಾರದಲ್ಲಿ ಈಗಿನ ಮೀಸಲಾತಿ ನೀತಿಯನ್ನು ಪರಿಷ್ಕರಿಸಿ ಅದರ ಮಿತಿಯನ್ನು ಹೆಚ್ಚಿಸುವ ಪ್ರಯತ್ನ ಕೂಡಾ ನಡೆದಿದೆ. ಜಾತಿ ಗಣತಿಯ ಜೊತೆಯಲ್ಲಿ ಈ ಪ್ರಕ್ರಿಯೆಯನ್ನು ಕೂಡಾ ಕೇಂದ್ರ ಸರ್ಕಾರ ಪೂರ್ಣಗೊಳಿಸಲಿದೆ ಎಂದು ನಂಬಿದ್ದೇನೆ ಎಂದಿದ್ದಾರೆ.

ವೈಜ್ಞಾನಿಕವಾದ ಮೀಸಲಾತಿ ನೀತಿಯನ್ನು ರೂಪಿಸುವುದೇ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂಲ ಉದ್ದೇಶವಾಗಿದೆ. ಪ್ರತಿ ಬಾರಿ ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳು ವಿಚಾರಣೆಗೆ ಬಂದಾಗೆಲ್ಲ ಸುಪ್ರೀಂಕೋರ್ಟ್ ಇಂತಹದ್ದೊಂದು ಸಮೀಕ್ಷೆ ನಡೆಸುವ ಅಗತ್ಯವನ್ನು ಒತ್ತಿ ಒತ್ತಿ ಹೇಳುತ್ತಾ ಬಂದಿದೆ ಎನ್ನುವುದನ್ನು ಕೇಂದ್ರ ಸರ್ಕಾರ ಗಮನಿಸಬೇಕಾಗುತ್ತದೆ ಎಂದಿದ್ದಾರೆ.

ನಾನು ಧರ್ಮಸಿಂಗ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಜಾತಿಯ ಜೊತೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿದ್ದೆ. ಕಾರಣಾಂತರಗಳಿಂದ ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದ ಆ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಮತ್ತೆ ನಾನು ರಾಜ್ಯದ ಮುಖ್ಯಮಂತ್ರಿ ಆಗಬೇಕಾಯಿತು ಎಂದು ತಿಳಿಸಿದ್ದಾರೆ.

ಜಾತಿ ಗಣತಿ ಜೊತೆಯಲ್ಲಿ ಮೀಸಲಾತಿ ಮಿತಿ ಏರಿಕೆಯ ನಿರ್ಧಾರವನ್ನು ಸಂಪೂರ್ಣ ಬೆಂಬಲಿಸಿ ಅದನ್ನು ನಮ್ಮ ಪಕ್ಷದ ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ರೂಪಿಸಿ ದೇಶಾದ್ಯಂತ ಪ್ರಚಾರ ಮಾಡುತ್ತಾ ಬಂದ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಅವರ ಅವಿರತ ಪ್ರಯತ್ನದ ಒತ್ತಡದಿಂದಾಗಿಯೇ ಇಂದು ಪ್ರಧಾನಿ ನರೇಂದ್ರ ಮೋದಿಯವರು ಜಾತಿ ಗಣತಿ ನಡೆಸುವ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನುವುದನ್ನು ಅವರು ಒಪ್ಪಿಕೊಳದೆ ಇರಬಹುದು, ಆದರೆ ದೇಶ ಖಂಡಿತಾ ಒಪ್ಪುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಜಾತಿ ಗಣತಿ ನಡೆಸುವುದರಿಂದ ಜಾತಿ ಸಂಘರ್ಷಗಳು ಹೆಚ್ಚಾಗಿ ಸಮಾಜ ಒಡೆದುಹೋಗುತ್ತದೆ, ಜಾತಿ ಗಣತಿ ಎನ್ನುವುದು ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ ಎಂದೆಲ್ಲ ವರ್ಷಗಳ ಕಾಲ ಟೀಕಾಪ್ರಹಾರ ಮಾಡುತ್ತಾ ಬಂದ ಭಾರತೀಯ ಜನತಾ ಪಕ್ಷ ಮತ್ತು ಅದರ ನೇತೃತ್ವದ ಸರ್ಕಾರಗಳು ಕೊನೆಗೂ ಜಾತಿ ಗಣತಿಯ ಸಾಮಾಜಿಕ ಮಹತ್ವವನ್ನು ಅರ್ಥಮಾಡಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಹೇಳಿದ್ದಾರೆ.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಎನ್ನುವುದು ವಾಸ್ತವ. ಜಾತಿ ಇಲ್ಲ ಎನ್ನುವುದು ಆತ್ಮವಂಚನೆ. ಜಾತಿ ಎನ್ನುವ ವಾಸ್ತವವನ್ನು ಒಪ್ಪಿಕೊಳ್ಳುವ ಮೂಲಕವೇ ಅದರ ನಾಶಕ್ಕೆ ಪ್ರಯತ್ನಿಸಬೇಕಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಮೂಲಕವೇ ಜಾತಿನಾಶ ಸಾಧ್ಯ ಎಂದು ನಾನುಬಲವಾಗಿ ನಂಬಿದವನು
ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ನಾವು ನಡೆಸಿದ್ದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸಿದ್ಧ ಇದೆ. ಇದನ್ನು ಬಿಜೆಪಿಯ ರಾಜ್ಯ ಘಟಕ ನಾನಾ ಸಬೂಬುಗಳನ್ನು ಮುಂದೊಡ್ಡಿ ವಿರೋಧಿಸುತ್ತಿದೆ. ಈ ಸಮೀಕ್ಷೆಯನ್ನು ಆಧಾರವಾಗಿಟ್ಟುಕೊಂಡು ಮೀಸಲಾತಿಯನ್ನು ಪರಿಷ್ಕರಿಸಿ ಈಗಿನ ಶೇಕಡಾ 50ರ ಮಿತಿಯನ್ನು ಹೆಚ್ಚಿಸುವ ಪ್ರಯತ್ನ ಕೂಡಾ ನಡೆದಿದೆ. ಈ ಎಲ್ಲ ಪ್ರಯತ್ನಗಳಿಗೆ ಅಡ್ಡಗಾಲು ಹಾಕುತ್ತಿರುವ ಬಿಜೆಪಿಯ ರಾಜ್ಯಘಟಕದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಿವಿ ಹಿಂಡಿ ಬುದ್ದಿ ಹೇಳಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ನಮ್ಮ ಪಕ್ಷದ ಪಂಚ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ ಕೊನೆಗೆ ಅದನ್ನು ತಮ್ಮ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿಕೊಂಡ ರೀತಿಯಲ್ಲಿಯೇ ಇದೀಗ ನಮ್ಮ ಜಾತಿಗಣತಿ ಕಾರ್ಯಕ್ರಮವನ್ನು ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೈಗೆತ್ತಿಕೊಂಡಿರುವುದು ಕಾಂಗ್ರೆಸ್ ಪಕ್ಷದ ನೀತಿ ಮತ್ತು ಕಾರ್ಯಕ್ರಮಗಳು ಜನಪರವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಕರ್ನಾಟಕ ಸರ್ಕಾರ ನಡೆಸಿರುವ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಒಂದು ಪರಿಪೂರ್ಣ ಮಾದರಿಯಾಗಿದ್ದು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಸಲಹೆ-ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧ ಇದೆ ಎಂದು ಮಾಹಿತಿ ನೀಡಿದ್ದಾರೆ.

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment